ಕರ್ನಾಟಕ: 13ಜಾತಿ ಜನರ ಅಭಿವೃದ್ಧಿಗಾಗಿ 'ನಿಗಮ' ಸ್ಥಾಪನೆಗೆ ಸರ್ಕಾರ ಆದೇಶ, ಈ ಬಗ್ಗೆ ವಿವರಣೆ ಇಲ್ಲಿದೆ, ತಿಳಿಯಿರಿ
ಬೆಂಗಳೂರು, ಮಾರ್ಚ್ 25: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಇನ್ನೇನು ಹತ್ತಿರವಾಗುತ್ತಿದೆ. ಯಾವುದೇ ಕ್ಷಣದಲ್ಲಾದರೂ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ. ಈ ಮಧ್ಯೆ ರಾಜ್ಯ ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ವರ್ಗಗಳಾಗಿರುವ ಪಿಂಜಾರ, ನದಾಫ್, ಚಪ್ಪರ ಬಂದ್, ಒಟಾರಿ ಸೇರಿದಂತೆ ಇತರ 13 ಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಹಿಂದುಳಿದ ವರ್ಗಗಳ ಪ್ರವರ್ಗ 1ಷರ ಪಿಂಜಾರ, ನದಾಫ್ ಹಾಗೂ ಇತರ 13 ಜಾತಿಗಳ 'ಅಭಿವೃದ್ಧಿ ನಿಗಮ'ಗಳನ್ನು ಸ್ಥಾಪಿಸಿ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರ ಶುಕ್ರವಾರ ರಾಜ್ಯ ಹಿಂದುಳಿದ ವರ್ಗಗಳ ಬಹುದಿನಗಳ ಬೇಡಿಕೆಯನ್ನು ಈಡೇರಿಸಿ ಆದೇಶ ಹೊರಿಸಿದೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆದೇಶ ಪ್ರತಿ ಸಹಿತ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಹೊಸ ಸ್ಥಾಪನೆಯಾಗಲಿರುವ ಈ ವಿವಿಧ ಅಭಿವೃದ್ಧಿ ನಿಗಮಗಳು ಆಯಾ ಪಿಂಜಾರ, ನದಾಫ್, ಚಪ್ಪರ ಬಂದ್, ಒಟಾರಿ ಸೇರಿದಂತೆ ಇತರ 13 ಜಾತಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿವೆ. ಇದರಿಂದ ಹಿಂದುಳಿದ ಜಾತಿ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿ ಆಗಲಿದೆ ಎಂದು ಬಸವರಾಜ ಬೊಮ್ಮಾಯಿಯವರು ತಿಳಿಸಿದ್ದಾರೆ.
ತಿಗಳ ಕ್ಷತ್ರಿಯರ ಅಸಮಾಧಾನ
ರಾಜ್ಯ ಸರ್ಕಾರವು ರಾಜ್ಯದ ಎಲ್ಲ ಜಾತಿ ಸಮುದಾಯಗಳ ಅಭಿವೃದ್ಧಿಯತ್ತ ಕಾಳಜಿ ವಹಿಸಿದೆ. ಆದರೆ ನಮ್ಮಗಳನ್ನು ನಿರ್ಲಕ್ಷಿಸಿದೆ. ನಮಗಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಿಲ್ಲ ಎಂದು ಕೆಲವು ಸಮುದಾಯ ಅದರಲ್ಲೂ ತಿಗಳ ಕ್ಷತ್ರಿಯ ಸಮಾಜ ಅಸಮಾಧಾನ ಹೊರ ಹಾಕಿತ್ತು. ಆದರೆ ಬೆನ್ನಲ್ಲೆ 13 ಜಾತಿಗಳ ಸರ್ವತೋಮುಖ ಅಭಿವೃದ್ಧಿಗೆ ನಿಗಮ ಸ್ಥಾಪಿಸಿ ಸರ್ಕಾರ ಆದೇಶಿಸಿದೆ. ಇದು ಸಹ ಕೆಲವು ಜಾತಿ-ಸಮುದಾಯಗಳ ಕಣ್ಣು ಕೆಂಪಾಗುವಂತೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಂದು ವಾರದ ಹಿಂದೆ ತಿಗಳ ಕ್ಷತ್ರಿಯರು ನಮ್ಮ ಸಮುದಾಯ ನಿರ್ಲಕ್ಷಿಸಿದೆ, ಇತರ ಸಮುದಾಯಗಳಿಗಾಗಿ ಸ್ಥಾಪಿಸಿರುವ ಅಭಿವೃದ್ಧಿ ನಿಗಮದಂತೆ ನಮಗೂ ಸಹ ತಿಗಳ ಕ್ಷತ್ರಿಯರ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಆಗ್ರಹಿಸಿತ್ತು. ಕಳೆದ ಮಾರ್ಚ್ 14 ರಂದು ಬಿಜೆಪಿ ಸರ್ಕಾರದ ವಿರುದ್ಧ ತಿಗಳ ಕ್ಷತ್ರಿಯರ ನಡೆ ಕಾಂಗ್ರೆಸ್ ಕಡೆ ಎಂಬ ಬೃಹತ್ ಸಮಾವೇಶ ಸಹ ಹಮ್ಮಿಕೊಂಡಿತ್ತು.
ರಾಜ್ಯದ ಬೃಹತ್ ಸಮುದಾಯಗಳಲ್ಲಿ ಗುರುತಿಸಿಕೊಳ್ಳುವ ಸುಮಾರು 40 ಲಕ್ಷ ಜನಸಂಖ್ಯೆ ಹೊಂದಿರುವ ತಿಗಳ ಕ್ಷತ್ರಿಯ ಸಮುದಾಯ ಕಡೆಗಣಿಲಾಗಿದೆ. ಹೀಗೆಂದು ತಿಗಳ ಕ್ಷತ್ರಿಯ ಸಮಾಜ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು.
ಸಂಪುಟದಲ್ಲಿ ಒಳಮೀಸಲಾತಿಗೆ ತೀರ್ಮಾನ: ಸಿಎಂಗೆ ಅಭಿನಂದನೆ
ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ಶಿಫಾರಸಿನಂತೆ ಎಸ್ಸಿ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದೆ. ಹೀಗಾಗಿ ಮಾದಿಗ ಸಮುದಾಯದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಭಾರತ ಹಲವಾರು ಸಮುದಾಯಗಳಿಂದ ಕೂಡಿದೆ. ಜಗತ್ತಿನಲ್ಲಿ ಇಷ್ಟೊಂದು ಸಮುದಾಯ ಯಾವ ದೇಶದಲ್ಲಿಯೂ ಇಲ್ಲ. ಪ್ರಜಾಪ್ರಭುತ್ವದಲ್ಲಿ ಯಾರಿಗೆ ಶಕ್ತಿ ಇದೆ, ಅವರು ಅನುಕೂಲ ಪಡೆಯುತ್ತಾರೆ. ಡಾ. ಬಾಬಾ ಸಾಹೆಬ್ ಅಂಬೇಡ್ಕರ್ ಇಲ್ಲದಿದ್ದರೆ ಏನಾಗುತ್ತಿತ್ತು. ಡಾ. ಜಗಜೀವನ್ ರಾಮ್ ಅವರು ಅಪಾರ ಜ್ಞಾನ ಉಳ್ಳವರಾಗಿದ್ದರು. ನಮ್ಮ ತಂದೆ ಹೇಳುತ್ತಿದ್ದರು. ಡಾ. ಜಗಜೀವನ್ ರಾಮ್ ಅವರು ಮುತ್ಸದ್ದಿಯಾಗಿದ್ದರು. ಅವರು ಹಸಿರು ಕ್ರಾಂತಿ ಮಾಡಿದರು ಎಂದರು.
ಎಡ, ಬಲ ಎನ್ನದೇ ಎಸ್ಸಿ ಸಮುದಾಯ ಈ ದೇಶದ ಒಂದು ಶಕ್ತಿ. ಸುಮಾರು 24% ಜನ ಹಿಂದುಳಿದರೆ ದೇಶ ಹೇಗೆ ಉದ್ದಾರ ಆಗುತ್ತದೆ. ಸಾಮಾಜಿಕ ನ್ಯಾಯ ಅಂತ ಇಷ್ಟು ವರ್ಷ ಹೇಳುತ್ತ ಬಂದಿದ್ದಾರೆ. ಶಿಕ್ಷಣ, ಉದ್ಯೋಗ, ಸಬಲೀಕರಣ ಈ ಮೂರು ತತ್ವ ಪಾಲಿಸಿದರೆ ಅಭಿವೃದ್ಧಿ ಸಾಧ್ಯ. ಬಹಳ ಜನ ಜೇನುಗೂಡಿಗೆ ಕೈ ಹಾಕುತ್ತಿದ್ದೀರಿ ಅಂತ ಹೇಳಿದರು. ನಾನು ನನಗೆ ಜೇನು ಕಡಿದರೂ ಚಿಂತೆಯಿಲ್ಲ. ತುಳಿತಕ್ಕೊಳಗಾದ ಸಮುದಾಯಗಳಿಗೆ ಜೇನು ಸಿಗಲಿ ಅಂತ ನಾನು ಈ ಕೆಲಸ ಮಾಡಿದ್ದೇನೆ. ಯಾರಿಗೂ ಅನ್ಯಾಯವಾದಗಂತೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇನೆ. ಇದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ನಿಮ್ಮ ಆಶೀರ್ವಾದ ಇರಲಿ ಎಂದು ಅವರು ತಿಳಿಸಿದರು.












Click it and Unblock the Notifications