ರಾಜ್ಯದ ಗೃಹ ರಕ್ಷಕ ದಳದ ಸ್ವಯಂ ಸೇವಕರಿಗೆ ಗುಡ್ ನ್ಯೂಸ್ ಕೊಟ್ಟ ಹೋಮ್ ಮಿನಿಸ್ಟರ್
ಬೆಂಗಳೂರು, ಮಾ. 08: ಪೊಲೀಸರಷ್ಟೇ ಹಗಲಿರುಳು ಬೆವರು ಹರಿಸು, ಐದು ಪೈಸೆ ಲಂಚಕ್ಕೆ ಕೈ ಚಾಚದೇ ಕಾರ್ಯ ನಿರ್ವಹಿಸುವ ಗೃಹ ರಕ್ಷಕ ಸ್ವಯಂ ಸೇವಕರಿಗೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಗೃಹ ರಕ್ಷಕ ದಳದ ಸ್ವಯಂ ಸೇವಕರ ಭತ್ಯೆಯನ್ನು ದುಪ್ಪಟ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಗೃಹ ರಕ್ಷಕ ದಳದ ಸಿಬ್ಬಂದಿಯ ಭತ್ಯೆಯನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದರಿಂದ ಸುಮಾರು 2025 ಗೃಹ ರಕ್ಷಕ ಸ್ವಯಂ ಸೇವಕರಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿ ಪೊಲೀಸ್ ಇಲಾಖೆಯನ್ನು ಹೊರತುಪಡಿಸಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 2025 ಗೃಹ ರಕ್ಷಕ ಸ್ವಯಂಸೇವಕರ ಭತ್ಯೆಯನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಸರಕಾರದ ಈ ನಿರ್ಧಾರದಿಂದ ರಾಜ್ಯದ ವಿವಿಧ ಇಲಾಖೆಯಲ್ಲಿ ಗೃಹ ರಕ್ಷಕ ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರ ಬಹಳ ದಿನಗಳ ಬೇಡಿಕೆ ಈಡೆರಿಸಿದಂತೆ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಇಲಾಖೆ ಹೊರತು ಪಡಿಸಿ ಕರ್ತವ್ಯ ನಿರ್ವಹಿಸುತ್ತಿರುವ ಸರಿ ಸುಮಾರು 2025, ಗೃಹ ರಕ್ಷಕ ಹಾಗೂ ಪೌರ ರಕ್ಷಣಾ ಇಲಾಖೆಯ ಸ್ವಯಂ ಸೇವಕರಿಗೆ ನೀಡಲಾಗುತ್ತಿರುವ ದಿನ ಭತ್ಯೆಯನ್ನು ರೂಪಾಯಿ 600 ರೂ.ಗೆ ಹೆಚ್ಚಳ ಮಾಡಿ ಸರ್ಕಾರ ಆದೇಶಿಸಿದೆ.

ಗೃಹ ರಕ್ಷಕರನ್ನು ವರ್ಷದಲ್ಲಿ 353 ದಿನಗಳ ಕಾಲ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದ್ದು, ಬೆಂಗಳೂರು ನಗರದಲ್ಲಿಕೆಲಸ ಮಾಡುವವರಿಗೆ ದಿನಕ್ಕೆ 455 ರೂ. ನೀಡಲಾಗಿತ್ತು. ಪರಿಷ್ಕರಣೆ ಭತ್ಯೆಯಿಂದ ದಿನಕ್ಕೆ 600 ರೂಪಾಯಿ ದೊರೆಯಲಿದೆ. ಅದೇ ರೀತಿ ರಾಜ್ಯದ ಇತರೆ ಭಾಗಗಳಲ್ಲಿ ಗೃಹ ರಕ್ಷಕ ಸಿಬ್ಬಂದಿಗೆ ದಿನಕ್ಕೆ 380 ರೂ. ನೀಡಲಾಗುತ್ತಿತ್ತು. ಇದೀಗ ಅದನ್ನು 600 ರೂ.ಗೆ ಹೆಚ್ಚಳ ಮಾಡುವಂತೆ ಸರ್ಕಾರ ಆದೇಶಿಸಿದೆ. ಇದರಿಂದ ಗೃಹ ರಕ್ಷಕ ದಳದ ಸಿಬ್ಬಂದಿಯಲ್ಲಿ ಸಂತಸ ಮನೆ ಮಾಡಿದೆ.

ಹಗಲಿರುಳು ಪೊಲೀಸರಂತೆ ಸೇವೆ ಮಾಡುವ ಗೃಹ ರಕ್ಷಕರು ಬಿಡಿ ಗಾಸು ಭತ್ಯೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದರು. ತಮ್ಮ ಭತ್ಯೆಯನ್ನು ಹೆಚ್ಚಳ ಮಾಡುವಂತೆ ಅನೇಕ ಸಲ ಮನವಿ ಮಾಡಿದ್ದರು. ಆದರೆ, ಸರ್ಕಾರಗಳು ಗೃಹ ರಕ್ಷಕ ಸ್ವಯಂ ಸೇವಕರ ಬಗ್ಗೆ ಗಮನ ಹರಿಸಿರಲಿಲ್ಲ. ಹಾಲಿ ಸರ್ಕಾರ ಪೊಲೀಸ್ ಇಲಾಖೆ ಹೊರತು ಪಡಿಸಿ ಗೃಹ ರಕ್ಷಕ ದಳದಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ವಯಂ ಸೇವಕರ ದಿನದ ಭತ್ಯೆಯನ್ನು 600 ರೂ.ಗೆ ಹೆಚ್ಚಿಸಿದೆ.












Click it and Unblock the Notifications