ಮತ್ತಷ್ಟು ತೊಗರಿ ಖರೀದಿಗೆ ರಾಜ್ಯ ಸರಕಾರ ನಿರ್ಧಾರ
ಇನ್ನೂ ಮಾರಾಟವಾಗದೆ 42.48 ಲಕ್ಷ ಕ್ವಿಂಟಾಲ್ ತೊಗರಿ ಬೆಳೆ ಇದೆ. ಇದನ್ನು ಖರೀದಿಸಲು ಕೇಂದ್ರ ಸರಕಾರದ ಅನುಮತಿ ಕೋರಲಾಗಿದೆ. ಶೀಘ್ರದಲ್ಲಿ ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಲಿದೆ ಎಂದು ಜಯಚಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಮೇ 24: ಈ ವರ್ಷ ತೊಗರಿ ಉತ್ಪಾದನೆಯಲ್ಲಿ ಭಾರೀ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ತೊಗರಿಯನ್ನು ರೈತರಿಂದ ನೇರವಾಗಿ ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಬೆಲೆ ಸ್ಥಿರೀಕರಣ ಕುರಿತ ಕೃಷಿ ಮತ್ತು ತೋಟಗಾರಿಕೆ ಸಂಪುಟ ಉಪ ಸಮಿತಿಯ ಸಭೆಯ ನಂತರ ಈ ಮಾಹಿತಿಯನ್ನು ಕಾನೂನು, ಸಂಸದೀಯ ವ್ಯವಹಾರ, ಪಶುಸಂಗೋಪನಾ ಮತ್ತು ಮುಜರಾಯಿ ಸಚಿವ ಟಿಬಿ ಜಯಚಂದ್ರ ಅವರು ಬುಧವಾರ ಹಂಚಿಕೊಂಡರು.
ರಾಜ್ಯದ 12 ಜಿಲ್ಲೆಗಳಲ್ಲಿ ಈ ಬಾರಿ ಬಂಪರ್ ತೊಗರಿ ಉತ್ಪಾದನೆಯಾಗಿದೆ. ಈಸಂದರ್ಭದಲ್ಲಿ ಸರಕಾರ 31.32 ಲಕ್ಷ ಕ್ವಿಂಟಾಲ್ ತೊಗರಿಯನ್ನು ಪ್ರತಿ ಕ್ವಿಂಟಾಲ್ 450 ರೂಪಾಯಿ ಪ್ರೋತ್ಸಾಹಧನದಂತೆ 5500 ರೂ. ದರದಲ್ಲಿ ಖರೀದಿಸಿದೆ ಎಂದು ಜಯಚಂದ್ರ ಹೇಳಿದ್ದಾರೆ.

ಕಲಬುರಗಿ ವಿಭಾಗ ಮತ್ತು ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಈ ಭಾರಿ 101 ಲಕ್ಷ ಕ್ವಿಂಟಾಲ್ ತೊಗರಿ ಉತ್ಪಾದನೆಯಾಗಿದೆ. ಇದರಲ್ಲಿ ಇನ್ನೂ ಮಾರಾಟವಾಗದೆ 42.48 ಲಕ್ಷ ಕ್ವಿಂಟಾಲ್ ತೊಗರಿ ಬೆಳೆ ಇದೆ. ಇದನ್ನು ಖರೀದಿಸಲು ಕೇಂದ್ರ ಸರಕಾರದ ಅನುಮತಿ ಕೋರಲಾಗಿದೆ. ಶೀಘ್ರದಲ್ಲಿ ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಖರೀದಿಗೆ ಅನುಮತಿ ನೀಡಿದ್ದಲ್ಲಿ ರಾಜ್ಯ ಸಚಿವ ಸಂಪುಟದ ಒಪ್ಪಿಗೆ ಪಡೆದು ಪ್ರೋತ್ಸಾಹಧನ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ರಾಜ್ಯದಲ್ಲಿ ಬಂಪರ್ ತೊಗರಿಬೆಳೆ ಬಂದಿರುವ ಹಿನ್ನೆಲೆಯಲ್ಲಿ 1.10 ಕೋಟಿ ಕುಟುಂಬಗಳಿಗೆ ತಲಾ ಒಂದು ಕೆ.ಜಿ.ಯಂತೆ ತೊಗರಿ ಬೇಳೆಯನ್ನು ವಿತರಿಸಿದಲ್ಲಿ ಸರ್ಕಾರದ ಮೇಲೆ 1,100 ಕೋಟಿ ರೂಪಾಯಿ ಹೊರೆಯಾಗಲಿದ್ದು ಕೇಂದ್ರ ಅಗತ್ಯ ಸಹಾಯಧನ ನೀಡುವ ಬಗ್ಗೆ ಮನವಿ ಮಾಡಲಾಗುವುದು ಎಂದರು.
ಅಲ್ಲದೆ ಪಡಿತರ ಚೀಟಿದಾರರಿಗೆ ಪ್ರತಿ ಕೆ.ಜಿ.ಗೆ 30 ರೂ. ರಿಯಾಯಿತಿ ದರದಲ್ಲಿ ತೊಗರಿ ಬೇಳೆಯನ್ನು ನೀಡುವ ಬಗ್ಗೆ ಸಚಿವ ಸಂಪುಟಕ್ಕೆ ಶಿಫಾರಸ್ಸು ಮಾಡಲಾಯಿತು ಎಂದು ಸಚಿವರು ತಿಳಿಸಿದ್ದಾರೆ.
ಮೌಢ್ಯ ಪ್ರತಿಬಂಧಕ ಕಾಯ್ದೆಗೆ ಅಂತಿಮ ಮುದ್ರೆ
ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಸಂಬಂಧಿಸಿದಂತೆಯೂ ನನ್ನ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪ ಸಮಿತಿ ರಚಿಸಲಾಗಿದೆ. ಶೀಘ್ರ ಸಭೆ ಸೇರಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.












Click it and Unblock the Notifications