ಸರಕಾರದ ಸುಪರ್ದಿಗಿಲ್ಲ ಮಠ ಮಾನ್ಯ, ನಿರ್ಧಾರ ಕೈ ಬಿಟ್ಟ ಸಿದ್ದರಾಮಯ್ಯ

Subscribe to Oneindia Kannada

ಬೆಂಗಳೂರು, ಫೆಬ್ರವರಿ 8: ತಮ್ಮ ಮಹತ್ವಾಕಾಂಕ್ಷಿ ತೀರ್ಮಾನದಿಂದ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ಸರಿದಿದ್ದಾರೆ. ಮಠ ಮಾನ್ಯಗಳನ್ನು ಧಾರ್ಮಿಕ ದತ್ತಿ ಇಲಾಖೆ ಅಡಿಗೆ ತರುವ ನಿರ್ಧಾರವನ್ನು ಅವರು ಎರಡನೇ ಬಾರಿಗೆ ಕೈ ಬಿಟ್ಟಿದ್ದಾರೆ.

ಬಿಜೆಪಿ ನಾಯಕರು ಹಾಗೂ ಧಾರ್ಮಿಕ ಮುಖಂಡರ ತೀವ್ರ ವಿರೋಧದ ಹಿನ್ನಲೆಯಲ್ಲಿ ಮಠ ಮಾನ್ಯಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ನಿರ್ಧಾರದಿಂದ ಕಾಂಗ್ರೆಸ್ ಸರಕಾರ ಹಿಂದೆ ಸರಿದಿದೆ.

ಧರ್ಮದ ಮುಖವಾಡದಲ್ಲಿ ವ್ಯವಹಾರ ಮಾಡೋರಿಗೆ ಸರಕಾರದ ಕಡಿವಾಣ ಬೇಡವೆ?

"ದೇವಸ್ಥಾನ, ಮಠಗಳನ್ನು ಮತ್ತು ಧಾರ್ಮಿಕ ಸಂಸ್ಥೆಗಳನ್ನು ವಶಕ್ಕೆ ಪಡೆದುಕೊಳ್ಳುವ ಯಾವುದೇ ಚಿಂತನೆ ಸರಕಾರದ ಮುಂದಿಲ್ಲ. ಇಲಾಖೆ ಅಡಿಯಲ್ಲಿರುವ ಸಂಸ್ಥೆಗಳ ಬಗ್ಗೆ ನಾವು ಹೆಚ್ಚಿನ ಗಮನಹರಿಸಲಿದ್ದೇವೆ. ನಾವು ಬೇರೆ ಸಂಸ್ಥೆಗಳನ್ನು ವಶಕ್ಕೆ ಪಡೆದುಕೊಂಡು ಯಾಕೆ ಹೆಚ್ಚಿನ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬೇಕು.." ಎಂದು ಸಿದ್ದರಾಮಯ್ಯ ವಿಧಾನ ಪರಿಷತ್ತಿನಲ್ಲಿ ಪ್ರತಿಕ್ರಿಯೆ ನೀಡಿದರು.

Karnataka govt backs out of move on mutts

ಇತ್ತೀಚೆಗೆ ಮಠಗಳನ್ನು ಮತ್ತು ದೇವಸ್ಥಾನಗಳನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳುವ ಬಗ್ಗೆ ಸಾರ್ವಜನಿಕ ಸುತ್ತೋಲೆ ಹೊರಡಿಸಲಾಗಿತ್ತು. ಇದನ್ನು ಬಿಜೆಪಿ ನಾಯಕರು ಸರಕಾರದ ಹಿಂದೂ ವಿರೋಧಿ ನೀತಿ ಎಂದು ಬಣ್ಣಿಸಿದ್ದರು. ಮತ್ತು ಸರಕಾರಕ್ಕೆ ತಾಕತ್ತಿದ್ದರೆ ಮಸೀದಿ, ದರ್ಗಾ ಮತ್ತು ಚರ್ಚುಗಳನ್ನು ವಶಕ್ಕೆ ಪಡೆದುಕೊಳ್ಳಲಿ ಎಂದು ಸವಾಲು ಹಾಕಿದ್ದರು.

ನೋಟಿಸ್ ನಲ್ಲಿ ಜೈನ, ಬೌದ್ಧ ಮತ್ತು ಸಿಖ್ ಧರ್ಮದ ಸಂಸ್ಥೆಗಳನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಅಧಿನಿಯಮ 1997ರ ಅಡಿಯಲ್ಲಿ ತರುವ ಬಗ್ಗೆಯೂ ಪ್ರಸ್ತಾಪ ಮಾಡಲಾಗಿತ್ತು.

ಇದಕ್ಕೆ ರಾಜ್ಯದ ಹಲವು ಹಿರಿಯ ಮಠಾಧೀಶರು ವಿರೋಧ ವ್ಯಕ್ತಪಡಿಸಿದ್ದರು. ಸರಕಾರ ಮಠವನ್ನು ವಶಕ್ಕೆ ಪಡೆದುಕೊಂಡಲ್ಲಿ ಮಠದಿಂದ ಹೊರಬರುವುದಾಗಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮಿಗಳು ಹೇಳಿದ್ದರು. ಸಿದ್ದಗಂಗಾ ಮಠದ ಕಿರಿಯ ಶ್ರೀಗಳು ಕೂಡ ಸರಕಾರದ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಇದೀಗ ಸರಕಾರ ತನ್ನ ತೀರ್ಮಾನದಿಂದ ಸಂಪೂರ್ಣ ಹಿಂದೆ ಸರಿದಿದೆ. "ಅಂಥಹ ಯಾವುದೇ ಪ್ರಸ್ತಾಪ ಇಲ್ಲ. ಆ ರೀತಿ ತಪ್ಪು ಸಂದೇಶ ರವಾನೆಯಾಗಿದೆ ಅಷ್ಟೇ...," ಎಂದು ಮುಖ್ಯಮಂತ್ರಿಗಳು ಬಿಜೆಪಿಗರ ಆಕ್ಷೇಪಕ್ಕೆ ಉತ್ತರ ನೀಡಿದರು.

ಇದಕ್ಕೆ ಪ್ರತ್ಯುತ್ತರ ನೀಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ, ಈ ಬಗ್ಗೆ ಸಾರ್ವಜನಿಕ ಸುತ್ತೋಲೆ ಹೊರಡಿಸಲಾಗಿದೆ ಎಂದು ವಾದಿಸಿದರು. ಇದಕ್ಕೆ ಉತ್ತರಿಸಿದ ಸಿಎಂ, "ಕೇವಲ ಅಭಿಪ್ರಾಯ ಮಾತ್ರ ಕೇಳಲಾಗಿದೆ.. ನಾನು (ಅಧಿಕಾರಿಗಳಲ್ಲಿ) ಸಾರ್ವಜನಿಕ ಅಭಿಪ್ರಾಯವನ್ನೂ ಕೇಳದಂತೆ ಹೇಳಿದ್ದೇನೆ. ನಾನು ಅವರಿಗೆ ನೋಟಿಸ್ ನ್ನು ಹಿಂಪಡೆಯಲು ಸೂಚಿಸಿದ್ದೇನೆ," ಎಂದರು.

2006ರಲ್ಲಿ ವಿಭಾಗಿಯ ಪೀಠ ನೀಡಿದ ಆದೇಶದ ಮೇಲೆ ಹೊಸ ನಿಯಂತ್ರಣವನ್ನು ಸ್ಥಾಪಿಸಲು ಈ ನೋಟಿಸ್ ನೀಡಲಾಗಿದೆ. "ಇದು ಮಠಗಳನ್ನು ಮತ್ತು ದೇವಸ್ಥಾನಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ನೀಡಿದ್ದಲ್ಲ," ಎಂದು ಅವರು ಇದೇ ಸಂದರ್ಭದಲ್ಲಿ ವಿವರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Under flak from BJP and spiritual heads, the Siddaramaiah-led Congress government in Karnataka today backed out of its proposed move to bring mutts and also temples and other religious institutions run by them under the ambit of the religious endowment act.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ