Industry Reservation: ಕೈಗಾರಿಕಾ ಪ್ರದೇಶಗಳಲ್ಲಿ ದಲಿತ ಉದ್ಯಮಿಗಳ ಮೀಸಲು ಜಾಗ ಪ್ರಮಾಣ ಏರಿಕೆ
ಬೆಂಗಳೂರು, ಫೆಬ್ರವರಿ 27: ಕರ್ನಾಟಕ ರಾಜ್ಯ ಸರ್ಕಾರವು ದಲಿತ ಉದ್ಯಮಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಈ ದಲಿತ ಉದ್ಯಮಿಗಳಿಗೂ ರಾಜ್ಯ ಕೈಗಾರಿಕೆ ಪ್ರದೇಶಗಳಲ್ಲಿ ಮೀಸಲು ಜಾಗ ಸಿಗಲಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿಯಿಂದ ಅಭಿವೃದ್ಧಿಪಡಿಸಲಾಗಿರುವ ಕೈಗಾರಿಕಾ ಪ್ರದೇಶಗಳಲ್ಲಿ ಇನ್ನು ಮುಂದೆ ದಲಿತ ಉದ್ಯಮಿಗಳಿಗೆ ನಿಯಮಾನುಸಾರವಾಗಿ ಶೇಕಡ 24.1ರಷ್ಟು ಜಾಗವನ್ನು ಮೀಸಲಿಡಲಾಗುವುದು. ಈ ವಿಚಾರದಲ್ಲಿ ನಿಯಮಗಳ ಉಲ್ಲಂಘನೆಗೆ ಅವಕಾಶ ಕೊಡುವುದಿಲ್ಲ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದರು.

ಸೋಮವಾರ ಖನಿಜ ಭವನದಲ್ಲಿ ತಮ್ಮನ್ನು ಭೇಟಿಯಾಗಿ ಈ ವಿಚಾರವನ್ನು ಪ್ರಸ್ತಾಪಿಸಿದ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಶ್ರೀನಿವಾಸನ್ ನೇತೃತ್ವದ ನಿಯೋಗಕ್ಕೆ ಅವರು ಈ ಜಾಗ ಮೀಸಲು ಭರವಸೆ ನೀಡಿದರು.
ಶೇ.16ರಿಂದ ಶೇ.24.1ಕ್ಕೆ ಹೆಚ್ಚಳ
ನಿಯೋಗವು ಸಚಿವರ ಜತೆ ಕೆಲವು ವಿಚಾರಗಳನ್ನು ಚರ್ಚಿಸಿತು. ಕೆಐಎಡಿಬಿ ಅಭಿವೃದ್ಧಿಪಡಿಸುವ ಕೈಗಾರಿಕಾ ಪ್ರದೇಶಗಳಲ್ಲಿ ದಲಿತ ಉದ್ಯಮಗಳಿಗೆ ನಿಯಮಾನುಸಾರ ಶೇಕಡ 24.1ರಷ್ಟು ಜಾಗವನ್ನು ಮೀಸಲಿಡಬೇಕು. ಆದರೆ ವಾಸ್ತವದಲ್ಲಿ ಇದು ಶೇ.16ರಷ್ಟು ಮಾತ್ರ ಜಾರಿಯಲ್ಲಿದೆ.
ವಿಶೇಷವಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಯ 12 ಕೈಗಾರಿಕಾ ಪ್ರದೇಶಗಳಲ್ಲಿ ದಲಿತ ಉದ್ಯಮಿಗಳಿಗೆ 653 ಎಕರೆ ಜಾಗ ಕೊಡುವುದು ಬಾಕಿ ಇದೆ ಎಂದು ಶ್ರೀನಿವಾಸ ಅವರು ಸಚಿವರ ಗಮನಕ್ಕೆ ತಂದರು.

ಅಕ್ಕಪಕ್ಕದ ಕೈಗಾರಿಕಾ ಪ್ರದೇಶಗಳಲ್ಲಿ ಮೀಸಲು
ಇದಕ್ಕೆ ಸ್ಪಂದಿಸಿದ ಸಚಿವರು, ಈಗಾಗಲೇ ಉದ್ದಿಮೆಗಳು ನೆಲೆಯೂರಿರುವ ಕೈಗಾರಿಕಾ ಪ್ರದೇಶಗಳಲ್ಲಿ ಏನನ್ನೂ ಮಾಡುವ ಸ್ಥಿತಿಯಲ್ಲಿಲ್ಲ. ಆದರೆ, ಅಕ್ಕಪಕ್ಕದ ಕೈಗಾರಿಕಾ ಪ್ರದೇಶಗಳಲ್ಲಿ ದಲಿತ ಉದ್ಯಮಿಗಳಿಗೆ ಶೇಕಡ 24.1ರಷ್ಟು ಜಾಗವನ್ನು ಮೀಸಲಿಡಲಾಗುವುದು. ಈ ವಿಷಯದಲ್ಲಿ ಸರ್ಕಾರ ಬದ್ಧತೆಯ ಬಗ್ಗೆ ಅನುಮಾನ ಬೇಡ ಎಂದರು.
ದಲಿತ ಉದ್ಯಮಿಗಳಿಗೆ ಜಾಗ ಮೀಸಲು ಕುರಿತು ಅಧಿಕಾರಿಗಳಿಗೆ ಈ ಬಗ್ಗೆ ತಕ್ಷಣವೇ ಸೂಚನೆ ಕೊಡಲಾಗುವುದು. ಜತೆಗೆ ನಿಮ್ಮ ಸಂಘದ ಜೊತೆ ಇನ್ನೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ಆಶ್ವಾಸನೆ ಕೊಟ್ಟರು.
ಇದು ದಲಿತಪರ ಸರ್ಕಾರ
ದಲಿತ ಉದ್ಯಮಿಗಳಿಗೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅನ್ಯಾಯವಾಗಿಲ್ಲ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಈ ಸಮಸ್ಯೆ ಉಂಟಾಗಿದೆ. ನಮ್ಮ ಸರ್ಕಾರವು ದಲಿತರ ಪರವಾಗಿದೆ. ಇದಕ್ಕೆ ತಕ್ಕಂತೆ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಅವರು ವಿವರಿಸಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕೆಐಎಡಿಬಿ ಸಿಇಒ ಡಾ.ಮಹೇಶ್, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಉಪಸ್ಥಿತರಿದ್ದರು.












Click it and Unblock the Notifications