ಸಿಹಿ ಸುದ್ದಿ: ಕನ್ನಡ ಕಡ್ಡಾಯ ವಿಧೇಯಕಕ್ಕೆ ಸರ್ಕಾರ ಅನುಮೋದನೆ: ಶೇ.60 ಕಡ್ಡಾಯಕ್ಕೆ ಕಣ್ಗಾವಲು ಆಪ್
ಬೆಂಗಳೂರು, ಫೆಬ್ರವರಿ 15: ಕನ್ನಡಿಗರ ಬಹುದಿನಗಳ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಿದೆ. ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಕಡ್ಡಾಯಕ್ಕೆ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ -2024ಕ್ಕೆ ವಿಧಾನ ಸಭೆಯು ಗುರುವಾರ ಅನುಮೋದನೆ ನೀಡಿದೆ.
ಇದರ ಭಾವಾಗಿ ಇನ್ನುಮುಂದೆ ನಾಮಫಲಕಗಳಲ್ಲಿ ಶೇಕಡಾ 60ರಷ್ಟು ಕನ್ನಡ ಕಡ್ಡಾಯವಾಗಬೇಕು. ಈ ಕನ್ನಡ ಕಡ್ಡಾಯಗೊಳಿಸಲು ಕಣ್ಗಾವಲು ಮೊಬೈಲ್ ಅಪ್ಲಿಕೇಷನ್ ರೂಪಿಸಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ -2024 ಕ್ಕೆ ಅನುಮೋದನೆ ದೊರತೆ ನಂತರ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ವಿಧೇಯಕ ಬಗ್ಗೆ ಮಾತನಾಡಿದರು. ರಾಜ್ಯ ಸರ್ಕಾರದ ಇಲಾಖೆಗಳು, ಉದ್ಯಮಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಬ್ಯಾಂಕುಗಳು, ಇತರ ಹಣಕಾಸು ಸಂಸ್ಥೆಗಳು, ಖಾಸಗಿ ಕೈಗಾರಿಕೆಗಳು ಮತ್ತು ವಿಶ್ವವಿದ್ಯಾಲಯಗಳ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸಬೇಕು.
ನಾಮಫಲಕದಲ್ಲಿ ಕನ್ನಡಕ್ಕೆ ಅಗ್ರ ಸ್ಥಾನ
ನಾಮಫಲಕಗಳ ಒಟ್ಟಾರೆ ವಿಸ್ತೀರ್ಣದಲ್ಲಿ ಕನ್ನಡ ಭಾಷೆಯನ್ನು ಮೇಲ್ಭಾಗದಲ್ಲಿ ಶೇಕಡಾ 60 ರಷ್ಟು ಪ್ರದರ್ಶಿಸುವುದು ಕಡ್ಡಾಯ ಮಾಡಲಾಗಿದೆ. ಶೇ.40 ರಷ್ಟು ಇತರ ಭಾಷೆಯನ್ನು ಕೆಳಭಾಗದಲ್ಲಿ ಬಳಸಬಹುದಾಗಿದೆ. ಈ ಹಿಂದೆ ಇದನ್ನು ಶೇ.50:50 ಎಂದು ಆದೇಶ ಹೊರಡಿಸಲಾಗಿತ್ತು ಎಂದು ಅವರು ವಿವರಿಸಿದರು.

ವಿಧೇಯಕದ 07 (02) ರಲ್ಲಿ ಜಾರಿ ಸಮಿತಿಯಲ್ಲಿ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರನ್ನು ಸಂಚಾಲಕರೆಂದು ಯೋಜಿಸಲಾಗಿತ್ತು. ಆದರೆ ಇಲಾಖೆಯ ನಿರ್ದೇಶಕರಿಗೆ ಸಾಕಷ್ಟು ಹೊಣೆಗಾರಿಕೆ ಇದ್ದವು. ಹೀಗಾಗಿ ಕೆಲವು ಬದಲಾವಣೆ ಮಾಡಬೇಕಾಯಿತು ಎಂದು ತಿಳಿಸಿದರು.
ಕನ್ನಡ ಕಣ್ಗಾವಲು ಆಪ್ ಸಹಕಾರಿ
ಕನ್ನಡ ಭಾಷೆಯ ಬಳಕೆ ಕುರಿತು ಯಾವುದೇ ವ್ಯಕ್ತಿ ದೂರು ನೀಡಲು ಅನುಕೂಲವಾಗುವಂತೆ ಕನ್ನಡ ಕಣ್ಗಾವಲು ಎಂಬ ಆಪ್ ಅನ್ನು ರೂಪಿಸಲಾಗುವುದು. ಇದರ ಮೂಲಕ ಬರುವ ದೂರುಗಳನ್ನು ಸಂಬಂಧಪಟ್ಟ ಸಮಿತಿಗಳಿಗೆ ಕಳುಹಿಸಿ, ಅವರು ಆ ದೂರುಗಳ ಬಗ್ಗೆ ಕ್ರಮವಹಿಸುವಂತೆ ವ್ಯವಸ್ಥೆ ರೂಪಿಸಲಾಗುತ್ತಿದೆ. ಈ ಮೂಲಕ ಕನ್ನಡ ಕಡ್ಡಾಯಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸದನಕ್ಕೆ ಶಿವರಾಜ ತಂಗಡಗಿ ಮಾಹಿತಿ ನೀಡಿದರು.
ರಾಜಧಾನಿಯಲ್ಲೇ ಸಮಸ್ಯೆ ಉದ್ಭವ ನಿರೀಕ್ಷೆ
ಬೆಂಗಳೂರೇ ದೊಡ್ಡ ಸಮಸ್ಯೆ ಉದ್ಘರಿಸಿದ ಸಚಿವ ಶಿವರಾಜ್ ತಂಗಡಿಗಿಯವರು, ಬೆಂಗಳೂರಿನಲ್ಲಿ ಸಮರ್ಪಕವಾಗಿ ಕನ್ನಡ ಬಳಕೆಯಾದರೆ ರಾಜ್ಯದ ಇತರ ಭಾಗಗಳಲ್ಲಿ ಇದು ಸುಲಭವಾಗುತ್ತದೆ. ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಂಟೂ ವಲಯಗಳ ಆಯುಕ್ತರ ನೇತೃತ್ವದಲ್ಲಿ ಎಂಟು ಜಾರಿ ಸಮಿತಿಯನ್ನು ರಚಿಸಲಾಗುವುದು. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.
ವಿಧೇಯಕ ಸ್ವಾಗತಿಸಿದ ವಿಪಕ್ಷಗಳು
ತಿದ್ದುಪಡಿ ವಿಧೇಯಕ ಸ್ವಾಗತಿಸಿ ಮಾತನಾಡಿದ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು, ಆತಂಕವೇನೆಂದರೆ, ಬಹುರಾಷ್ಟ್ರೀಯ ಕಂಪನಿಗಳು, ದೊಡ್ಡ ದೊಡ್ಡ ಮಾಲ್‌ಗಳು, ಕನ್ನಡ ಕಡ್ಡಾಯ ನಿಯಮ ಪಾಲಿಸುತ್ತವೆಯೇ?. ದೊಡ್ಡ ಮೊತ್ತದ ದಂಡ ಹಾಕಿದಾಗ ಮಾತ್ರ ಅವು ಹೆದರುತ್ತವೆಯೇ ಹೊರತು. ನೋಟಿಸ್ ಗಳಿಗೆ ಹೆದರುವುದಿಲ್ಲ. ಆದ್ದರಿಂದ ನಿಯಮ ರೂಪಿಸುವಾಗ ಈ ಆದೇಶವನ್ನು ಪಾಲಿಸದ ಸಂಸ್ಥೆಗಳಿಗೆ ದೊಡ್ಡ ಮೊತ್ತದ ದಂಡವನ್ನು ಹಾಕಬೇಕು. ಸಾಧ್ಯವಾದರೆ ಪೊಲೀಸ್ ಅಧಿಕಾರಿಗಳು ಸಮಿತಿಯಲ್ಲಿರುವಂತೆ ನೋಡಿಕೊಳ್ಳಿ ಎಂದು ಅವರು ಸಲಹೆ ನೀಡಿದರು.
ಕನ್ನಡ ಭಾಷಾ ಅನುಷ್ಠಾನ ಸಮರ್ಪಕವಾಗಲಿ
ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಮಾತನಾಡಿ, ಕನ್ನಡ ಭಾಷೆ ಬಳಕೆಗೆ ವಿಧೇಯಕವನ್ನು ಮಂಡನೆ ಮಾಡುತ್ತಿರುವ ಸಂದರ್ಭ ಎದುರಾಗಿರುವುದು ನನಗೆ ಅತೀವ ಬೇಸರವುಂಟು ಮಾಡಿದೆ. ನಮ್ಮ ಮನಸ್ಥಿತಿಗಳನ್ನು ಮೊದಲು ಬದಲಾಯಿಸಿಕೊಳ್ಳಬೇಕು. ಇತರ ಭಾಷಿಕರಿಗೆ ಬೆಂಗಳೂರಿನ ಬಗ್ಗೆ ಲಸ್ಟ್ ಇದೆ, ಲವ್ ಇಲ್ಲ ಇಂತಹ ಕೆಟ್ಟ ಮನಸ್ಥಿತಿ ಬದಲಾಗಬೇಕಿದೆ. ಇನ್ನು ಮುಂದಾದರೂ ಕನ್ನಡ ಭಾಷಾ ಅನುಷ್ಠಾನ ಸಮರ್ಪಕವಾಗಲಿ ಎಂದು ತಿಳಿಸಿದರು.
ಶಾಸಕ ಚಂದ್ರಕಾಂತ ಬೆಲ್ಲದ ಹಾಗೂ ಮಾಜಿ ಸಚಿವ ಅರಗ ಜ್ಞಾನೇಂದ್ರ ಅವರು ಸಹ ತಿದ್ದುಪಡಿ ವಿಧೇಯಕ ಮಂಡನೆಯನ್ನು ಸ್ವಾಗತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ ತಂಗಡಗಿಯವರು ಸದನದಲ್ಲಿ ಶಾಸಕರು ವ್ಯಕ್ತಪಡಿಸಿದ ಎಲ್ಲಾ ಅಭಿಪ್ರಾಯಗಳನ್ನು ಗೌರವಿಸುತ್ತೇನೆ ಹಾಗೂ ಅವರ ಸಲಹೆಗಳನ್ನು ನಿಯಮ ರೂಪಿಸುವಾಗ ಅಳವಡಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.












Click it and Unblock the Notifications