ವಿಧಾನಸೌಧದ ಮುಂದೆ ಆಂಧ್ರ ಪ್ರದೇಶಕ್ಕೆ 6 ಆನೆಗಳ ಹಸ್ತಾಂತರ
ಬೆಂಗಳೂರು, ಮೇ 19: ಆಂಧ್ರ ಪ್ರದೇಶದ ಬೇಡಿಕೆಯಂತೆ ಕರ್ನಾಟಕ ಸರ್ಕಾರ 6 ಆನೆಗಳನ್ನು ನೀಡಲಿದೆ. ರಾಜ್ಯದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಆನೆಗಳನ್ನು ಸ್ವೀಕಾರ ಮಾಡಲಿದ್ದಾರೆ. ಕರ್ನಾಟಕ-ಆಂಧ್ರಪ್ರದೇಶ ಗಡಿಗಳಲ್ಲಿ ಮಾನವ ಪ್ರಾಣಿ ಸಂಘರ್ಷವನ್ನು ತಡೆಯಲು ಈ ಕುಮ್ಕಿ ಆನೆಗಳು ರಾಜ್ಯಕ್ಕೆ ಸಹಕಾರ ನೀಡಲಿವೆ.
ಕರ್ನಾಟಕದ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಈ ಕುರಿತು ಮಾಹಿತಿ ನೀಡಿದ್ದಾರೆ. ಮೇ 21ರಂದು ವಿಧಾನಸೌಧದ ಮುಂಭಾಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂಕೇತಿಕವಾಗಿ ಆನೆಗಳನ್ನು ಆಂಧ್ರ ಪ್ರದೇಶಕ್ಕೆ ಹಸ್ತಾಂತರ ಮಾಡಲಿದ್ದಾರೆ.

ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ಪರಿಸರ ಮತ್ತು ಅರಣ್ಯ ಖಾತೆ ಸಚಿವ ಪವನ್ ಕಲ್ಯಾಣ್ ಈಗಾಗಲೇ ಸಚಿವ ಈಶ್ವರ ಖಂಡ್ರೆ ಜೊತೆ ರಾಜ್ಯದಿಂದ ಕುಮ್ಕಿ ಆನೆಗಳನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಈ ಕುರಿತು ಸಭೆಯೂ ಸಹ ನಡೆದಿತ್ತು. ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಗಡಿಗಳಲ್ಲಿ ಆನೆ-ಮಾನವ ಸಂಘರ್ಷ ತಡೆಗೆ ಒಪ್ಪಂದವನ್ನು ಸಹ ಮಾಡಿಕೊಂಡಿವೆ.
ಕುಮ್ಕಿ ಆನೆಗಳನ್ನು ಆಂಧ್ರ ಪ್ರದೇಶ ಸರ್ಕಾರದ ಬೇಡಿಕೆಯಂತೆ ಹಸ್ತಾಂತರ ಮಾಡಲಾಗುತ್ತಿದೆ. ಆದರೆ ಕರ್ನಾಟಕದ ಹೆಮ್ಮೆಯ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಅಥವಾ ದಸರಾ ಮಹೋತ್ಸವಕ್ಕೆ ಈಗಾಗಲೇ ಗುರುತಿಸಲಾಗಿರುವ ಯಾವುದೇ ಕುಮ್ಕಿ ಆನೆಗಳನ್ನು ಆಂಧ್ರ ಪ್ರದೇಶಕ್ಕೆ ನೀಡಲಾಗುತ್ತಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಯಾವ-ಯಾವ ಆನೆಗಳು ಹಸ್ತಾಂತರ?: ಆಂಧ್ರ ಪ್ರದೇಶಕ್ಕೆ ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದ ರಂಜನ್, ದೇವಾ, ಮಾಸ್ತಿ, ಕರುಣಾ ಮತ್ತು ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರದಿಂದ ಕೃಷ್ಣಾ ಮತ್ತು ಅಭಿಮನ್ಯು ಆನೆಗಳನ್ನು ಕಳಿಸಲಾಗುತ್ತದೆ. ಕೆಲವು ಆನೆಗಳ ಜೊತೆ ಮಾವುತರು ಮತ್ತು ಕಾವಾಡಿಗಳನ್ನು ಕಳಿಸಲಾಗುತ್ತಿದೆ. ಆನೆಗಳು ಅಲ್ಲಿನ ಪರಿಸರಕ್ಕೆ ಹೊಂದಿಕೊಂಡ ಬಳಿಕ ಅವರು ವಾಪಸ್ ಆಗಲಿದ್ದಾರೆ.
ಅರಣ್ಯ ಸಚಿವ ಈಶ್ವರ ಖಂಡ್ರೆ ಈ ಕುರಿತು ಮಾತನಾಡಿ, 'ಪಕ್ಕದ ಆಂಧ್ರ ಪ್ರದೇಶ ರಾಜ್ಯಕ್ಕೆ ಮೇ 21ರಂದು 6 ಕುಮ್ಕಿ ಆನೆಗಳನ್ನು ಹಸ್ತಾಂತರ ಮಾಡಲಾಗುತ್ತದೆ. ಇದು ಪಕ್ಕದ ರಾಜ್ಯದೊಂದಿಗಿನ ಸೌಹಾರ್ದ ಸಂಬಂಧವನ್ನು ಹೆಚ್ಚಿಸುವ ಜೊತೆಗೆ, ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿ ಭಾಗದಲ್ಲಿ ಆನೆ-ಮಾನವ ಸಂಘರ್ಷವನ್ನು ತಡೆಯಲು ಸಹಕಾರ ನೀಡಲಿದೆ" ಎಂದು ಹೇಳಿದ್ದಾರೆ.
"2024ರ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಆನೆ-ಮಾನವ ಸಂಘರ್ಷ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ವೇಳೆ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ನಡುವೆ ಆಗಿರುವ ಒಪ್ಪಂದದ ಭಾಗವಾಗಿ ಆನೆಗಳನ್ನು ಆಂಧ್ರ ಪ್ರದೇಶಕ್ಕೆ ಹಸ್ತಾಂತರ ಮಾಡಲಾಗುತ್ತದೆ" ಎಂದು ಸಚಿವರು ತಿಳಿಸಿದ್ದಾರೆ.
ಆಗಸ್ಟ್‌ನಲ್ಲಿ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಬೆಂಗಳೂರಿಗೆ ಆಗಮಿಸಿದ್ದರು. ರಾಜ್ಯದಲ್ಲಿ ಹೆಚ್ಚುತ್ತಿರುವ ಪುಂಡಾನೆಗಳನ್ನು ಸೆರೆ ಹಿಡಿಯಲು ಕುಮ್ಕಿ ಆನೆಗಳನ್ನು ನೀಡುವಂತೆ ಹಾಗೂ ರಾಜ್ಯದ ಮಾವುತರು ಮತ್ತು ಅರಣ್ಯ ಸಿಬ್ಬಂದಿಗೆ ಆನೆ ಸೆರೆ ಹಿಡಿಯುವ ಕಾರ್ಯಾಚರಣೆ ತರಬೇತಿ ನೀಡಲು ಮನವಿ ಮಾಡಿಕೊಂಡಿದ್ದರು. ಕರ್ನಾಟಕ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿತ್ತು. ಯಾವ-ಯಾವ ಆನೆಗಳನ್ನು ಹಸ್ತಾಂತರ ಮಾಡಬಹುದು ಎಂದು ಪಟ್ಟಿ ತಯಾರು ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು.
ಸೆಪ್ಟೆಂಬರ್ 27ರಂದು ಅರಣ್ಯ ಸಚಿವ ಈಶ್ವರ ಖಂಡ್ರೆ ನೇತೃತ್ವದ ನಿಯೋಗ ವಿಜಯವಾಡಕ್ಕೆ ಭೇಟಿ ನೀಡಿತ್ತು. ಆಗ ಎರಡೂ ರಾಜ್ಯಗಳ ನಡುವೆ ಈ ಕುರಿತು ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಈಗ ಮೇ 21ರಂದು 6 ಆನೆಗಳನ್ನು ಆಂಧ್ರ ಪ್ರದೇಶಕ್ಕೆ ಹಸ್ತಾಂತರ ಮಾಡಲಾಗುತ್ತಿದೆ.












Click it and Unblock the Notifications