Roopa vs Rohini : ರೋಹಿಣಿ ಸಿಂಧೂರಿ, ಡಿ. ರೂಪಾ ವರ್ಗಾವಣೆ
ಕರ್ನಾಟಕ ಸರ್ಕಾರ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಐಪಿಎಸ್ ಅಧಿಕಾರಿ ಡಿ. ರೂಪಾ ವರ್ಗಾವಣೆ ಮಾಡಿದೆ.
ಬೆಂಗಳೂರು, ಫೆಬ್ರವರಿ 21; ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿ ನೋಡಿದ್ದ ಕರ್ನಾಟಕ ಸರ್ಕಾರ ವರ್ಗಾವಣೆಯ ತೀರ್ಮಾನ ಕೈಗೊಂಡಿದೆ.
ಮಂಗಳವಾರ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಎಂಡಿ ರೂಪಾ ಮೌದ್ಗಿಲ್ ಮತ್ತು ರಾಜ್ಯ ಮುಜರಾಯಿ ಇಲಾಖೆಯ ಆಯುಕ್ತರಾಗಿದ್ದ ರೋಹಿಣಿ ಸಿಂಧೂರಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ಸರ್ಕಾರ ರೂಪಾ ಮೌದ್ಗಿಲ್ ಮತ್ತು ರೋಹಿಣಿ ಸಿಂಧೂರಿ ನಡುವಿನ ಜಟಾಪಟಿಗೆ ತಡೆ ಹಾಕಲು ಮುಂದಾಗಿತ್ತು. ಇಬ್ಬರೂ ಅಧಿಕಾರಿಗಳಿಗೆ ಮಂಗಳವಾರ ನೋಟಿಸ್ ಜಾರಿ ಮಾಡಲಾಗಿತ್ತು. ಈ ನೋಟಿಸ್ ಜಾರಿಯಾದ ಕೆಲವೇ ಗಂಟೆಗಳಲ್ಲಿ ವರ್ಗಾವಣೆ ಮಾಡಲಾಗಿದೆ.

ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಯಾವುದೇ ಸ್ಥಳ ನಿಯೋಜನೆ ಮಾಡದೇ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಅಲ್ಲದೇ ರೂಪಾ ಮೌದ್ಗಿಲ್ ಪತಿ ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್ ಸಹ ವರ್ಗಾವಣೆ ಮಾಡಲಾಗಿದೆ.
ಕರ್ನಾಟಕ ಸರ್ಕಾರ ರೂಪಾ ಮೌದ್ಗಿಲ್ ವರ್ಗಾವಣೆಯಿಂದ ತೆರವಾದ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಎಂಡಿ ಸ್ಥಾನಕ್ಕೆ ಡಿ. ಭಾರತಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ರೋಹಿಣಿ ಸಿಂಧೂರಿ ವರ್ಗಾವಣೆಯಿಂದ ತೆರವಾದ ರಾಜ್ಯ ಮುಜರಾಯಿ ಇಲಾಖೆಯ ಆಯುಕ್ತ ಹುದ್ದೆಗೆ ಹೆಚ್. ಬಸವರಾಜೇಂದ್ರ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಆದರೆ ರೂಪಾ ಮೌದ್ಗಿಲ್, ರೋಹಿಣಿ ಸಿಂಧೂರಿಗೆ ಯಾವುದೇ ಸ್ಥಳ ನಿಯೋಜನೆ ಮಾಡಿಲ್ಲ.
ಮೌನೀಶ್ ಮೌದ್ಗಿಲ್ (ಕೆಎನ್ 1998) ಆಯುಕ್ತರು, ಭೂಮಾಪನ ಹಾಗು ಕಂದಾಯ ವ್ಯವಸ್ಥೆ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಂಡಿದ್ದಾರೆ. ಮುಂದಿನ ಆದೇಶದ ತನಕ ಪ್ರಿನ್ಸಿಪಾಲ್ ಸೆಕರೆಟರಿ ಟು ಗೌರ್ನಮೆಂಟ್, ಪರ್ಸನಲ್ ಮತ್ತು ಆಡ್ಮಿನಿಸ್ಟೇಟೀವ್ ರಿಫಾರ್ಮ್ಸ್ ಆಗಿ ನೇಮಕಗೊಂಡಿದ್ದಾರೆ.
ಸರ್ಕಾರಕ್ಕೆ ಮುಜುಗರ; ರೂಪಾ ಮೌದ್ಗಿಲ್ ಮತ್ತು ರೋಹಿಣಿ ಸಿಂಧೂರಿ ನಡುವಿನ ಜಟಾಪಟಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದರಿಂದಾಗಿ ಕರ್ನಾಟಕ ಸರ್ಕಾರಕ್ಕೆ ಸಹ ಮುಜುಗರ ಉಂಟಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ಅಧಿಕಾರಿಗಳ ಕಿತ್ತಾಟದ ಬಗ್ಗೆ ಚರ್ಚೆ ನಡೆದಿತ್ತು.
ಸೋಮವಾರ ಸಿಎಂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾಗೆ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದ್ದರು. ವಿಧಾನಸೌಧದಲ್ಲಿ ಇಬ್ಬರೂ ಅಧಿಕಾರಿಗಳು ವಂದಿತಾ ಶರ್ಮಾ ಭೇಟಿಯಾಗಿ ತಮ್ಮ ದೂರುಗಳನ್ನು ದಾಖಲು ಮಾಡಿದ್ದರು.












Click it and Unblock the Notifications