ಯುವಜನರಲ್ಲಿ ಹೆಚ್ಚುತ್ತಿರುವ HIV ಸೋಂಕು: ರಾಜ್ಯದ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ತಪಾಸಣೆ ಕಡ್ಡಾಯ
ಬೆಂಗಳೂರು: ಕರ್ನಾಟಕದಲ್ಲಿ ಯುವಜನರ ನಡುವೆ ಎಚ್‌ಐವಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಒಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಯುವ ಸಮುದಾಯದಲ್ಲಿ ಹರಡುತ್ತಿರುವ ಈ ಸೋಂಕನ್ನ ಆರಂಭಿಕ ಹಂತದಲ್ಲೇ ಪತ್ತೆಹಚ್ಚುವ ನಿಟ್ಟಿನಲ್ಲಿ, ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲಾ ಪದವಿ ಹಾಗೂ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಎಚ್‌ಐವಿ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಜಂಟಿಯಾಗಿ ನಿರ್ಧರಿಸಿವೆ.
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ಎನ್‌ಎಸಿಒ) ವರದಿಗಳ ಪ್ರಕಾರ, ಎಚ್‌ಐವಿ ಸೋಂಕಿತರ ಪ್ರಮಾಣದಲ್ಲಿ ಕರ್ನಾಟಕವು ದೇಶದಲ್ಲೇ 3ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಪ್ರಸ್ತುತ 2.60 ಲಕ್ಷ ಸೋಂಕಿತರಿದ್ದು, ಇದರಲ್ಲಿ 2.05 ಲಕ್ಷ ಜನರು ಆಂಟಿ ರೆಟ್ರೊವೈರಲ್ ಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅತ್ಯಂತ ಕಳವಳಕಾರಿ ವಿಚಾರವೆಂದರೆ, ಸುಮಾರು 54 ಸಾವಿರ ಮಂದಿಗೆ ತಾವು ಸೋಂಕಿಗೆ ತುತ್ತಾಗಿರುವ ವಿಚಾರವೇ ಇನ್ನೂ ತಿಳಿದಿಲ್ಲ.

ಕರ್ನಾಟಕ ರಾಜ್ಯ ಏಡ್ಸ್ ತಡೆ ಸೊಸೈಟಿ ವರದಿಯ ಪ್ರಕಾರ, 18ರಿಂದ 35 ವರ್ಷದ ಯುವಜನರಲ್ಲಿ ಈ ಸೋಂಕು ವೇಗವಾಗಿ ಹರಡುತ್ತಿದೆ. 2023-24ನೇ ಸಾಲಿನಲ್ಲಿ 44,500 ಇದ್ದ ಸೋಂಕಿತರ ಸಂಖ್ಯೆ 2025-26ರ ವೇಳೆಗೆ 66,600ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಂಕಿ ಅಂಶಗಳನ್ನಾ ನೋಡುವುದಾದರೆ ಕೇವಲ 18-25 ವಯೋಮಾನದ 7,000ಕ್ಕೂ ಹೆಚ್ಚು ಯುವಕ-ಯುವತಿಯರಲ್ಲಿ ಸೋಂಕು ದೃಢಪಟ್ಟಿರುವುದು ಎಲ್ಲರಲ್ಲಿ ಆತಂಕ ಮೂಡಿಸಿದೆ.
ಆರೋಗ್ಯ ಇಲಾಖೆ ಮತ್ತು ವಿಟಿಯು ಎಂಜಿನಿಯರಿಂಗ್ ಕಾಲೇಜುಗಳ ಮಹತ್ವದ ಹೆಜ್ಜೆ
ಈ ಸೋಂಕನ್ನ ಆರಂಭದಲ್ಲೇ ಪತ್ತೆಹಚ್ಚುವ ಸಲುವಾಗಿ ಕಾಲೇಜು ಶಿಕ್ಷಣ ಇಲಾಖೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಆರೋಗ್ಯ ಶಿಬಿರಗಳನ್ನ ಆಯೋಜಿಸಲಾಗುತ್ತಿದೆ. ಈ ಶಿಬಿರಗಳ ಮೂಲಕ ವಿದ್ಯಾರ್ಥಿಗಳಿಗೆ ಉಚಿತ ಎಚ್‌ಐವಿ ಪರೀಕ್ಷೆ ಮತ್ತು ಆಪ್ತ ಸಮಾಲೋಚನೆ ಒದಗಿಸಲಾಗುತ್ತದೆ. ವಿಟಿಯು ಕೂಡ ತನ್ನ ವ್ಯಾಪ್ತಿಗೆ ಬರುವ ಎಲ್ಲಾ ಎಂಜಿನಿಯರಿಂಗ್ ಮತ್ತು ಸ್ನಾತಕೋತ್ತರ ಕೇಂದ್ರಗಳಲ್ಲಿ ಈ ತಪಾಸಣೆಯನ್ನ ಕಡ್ಡಾಯವಾಗಿ ನಡೆಸಲು ಸೂಚನೆ ನೀಡಿದೆ. ಇದರ ಜೊತೆಗೆ ಯುವಜನರಲ್ಲಿ ಜಾಗೃತಿ ಮೂಡಿಸಲು ಜುಲೈ 2026 ರಿಂದ ಫೆಬ್ರವರಿ 2027 ರವರೆಗೆ ಬೀದಿ ನಾಟಕಗಳು, ರಸಪ್ರಶ್ನೆ ಸ್ಪರ್ಧೆಗಳು ಹಾಗೂ ತಜ್ಞರ ಉಪನ್ಯಾಸಗಳನ್ನು ಹಮ್ಮಿಕೊಳ್ಳಲು ಮಾರ್ಗಸೂಚಿ ಪ್ರಕಟಿಸಲಾಗಿದೆ.
ಗೌಪ್ಯತೆ ಕಾಯ್ದುಕೊಳ್ಳಲು ಕ್ಯೂಆರ್ ಕೋಡ್ ವ್ಯವಸ್ಥೆ
ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಬಗ್ಗೆ ಇರುವ ಮುಜುಗರವನ್ನ ಹೋಗಲಾಡಿಸಲು ಹಾಗೂ ಮಾಹಿತಿ ಗೌಪ್ಯತೆಯನ್ನ ಕಾಪಾಡಲು ವಿಶೇಷವಾದ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. "ನಿಮ್ಮ ಎಚ್‌ಐವಿ ಸ್ಥಿತಿ ತಿಳಿದುಕೊಳ್ಳಿ" ಎಂಬ ವಿನೂತನ ಕ್ಯೂಆರ್ ಕೋಡ್ ವ್ಯವಸ್ಥೆ ಮತ್ತು ಸ್ವಯಂ-ಅಪಾಯ ಮೌಲ್ಯಮಾಪನವನ್ನ ಪರಿಚಯಿಸಲಾಗಿದೆ.
ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಈ ಕ್ಯೂಆರ್ ಕೋಡ್ ಕಡ್ಡಾಯವಾಗಿ ಪ್ರದರ್ಶಿಸುವಂತೆ ಪ್ರಾಂಶುಪಾಲರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು ಈ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಥವಾ www.breakfreeindia.org ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಮ್ಮ ಆರೋಗ್ಯದ ಅಪಾಯವನ್ನ ಮೌಲ್ಯಮಾಪನ ಮಾಡಿಕೊಳ್ಳಬಹುದು ಹಾಗೂ ತಜ್ಞರಿಂದ ಗೌಪ್ಯವಾಗಿ ಮಾರ್ಗದರ್ಶನ ಪಡೆಯಬಹುದು.
ಒಂದೆಡೆ ಮಾದಕ ವ್ಯಸನದಿಂದ ಯುವಜನತೆಯನ್ನು ಪಾರುಮಾಡುವ ಸವಾಲು ಎದುರಿಸುತ್ತಿರುವ ಸರ್ಕಾರಕ್ಕೆ, ಇದೀಗ ಎಚ್‌ಐವಿ ಸೋಂಕಿನಿಂದಲೂ ಅವರನ್ನು ರಕ್ಷಿಸುವ ಬಹುದೊಡ್ಡ ಹೊಣೆಗಾರಿಕೆ ಎದುರಾಗಿದೆ. ಸೋಂಕಿತರಿದ್ದು, ಅದರ ಅರಿವಿಲ್ಲದೆ ಇತರರಿಗೆ ಹರಡುವ ಅಪಾಯವನ್ನು ತಡೆಯಲು ಈ ತಪಾಸಣಾ ಶಿಬಿರಗಳು ಅತ್ಯಂತ ಮಹತ್ವದ ಪಾತ್ರ ವಹಿಸಲಿವೆ. ರಾಜ್ಯದ ಸರ್ಕಾರಿ, ಅನುದಾನಿತ ಕಾಲೇಜುಗಳ ಸುಮಾರು 3 ಲಕ್ಷ ಮತ್ತು ವಿಟಿಯು ಮತ್ತಿತರ ಕಾಲೇಜುಗಳ ಸುಮಾರು 4 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ವ್ಯಾಪ್ತಿಗೆ ಒಳಗೊಂಡಿದ್ದಾರೆ.


Click it and Unblock the Notifications
