ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಕ್ಕೆ ಚಿಂತನೆ
ಬೆಂಗಳೂರು, ಫೆಬ್ರವರಿ 22: ರಾಜ್ಯದಲ್ಲಿ ವಿದ್ಯಾರ್ಥಿಗಳ ಮೊಬೈಲ್ ಬಳಕೆಗೆ ನಿಯಂತ್ರಣ ವಿಧಿಸುವ ವಿಚಾರ ಚರ್ಚೆಗೆ ಗ್ರಾಸವಾಗಿದೆ. 16 ವರ್ಷದೊಳಗಿನ ಮಕ್ಕಳು ಶಾಲೆ ಮತ್ತು ಕಾಲೇಜು ಆವರಣದಲ್ಲಿ ಮೊಬೈಲ್ ಫೋನ್ ಬಳಸುವುದನ್ನು ನಿರ್ಬಂಧಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ವಿದ್ಯಾರ್ಥಿಗಳ ಮೇಲೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮ, ಡ್ರಗ್ಸ್ ಬಳಕೆ ಹೆಚ್ಚುತ್ತಿರುವ ಆತಂಕಕಾರಿ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅವರು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳಿಂದ ಮೊಬೈಲ್ ಬ್ಯಾನ್ ಕುರಿತು ಸಲಹೆ ಮತ್ತು ಅಭಿಪ್ರಾಯಗಳನ್ನು ಕೇಳಿದರು. ಸಿಎಂ ಅವರ ಈ ಪ್ರಸ್ತಾಪಕ್ಕೆ ಬಹುತೇಕ ಕುಲಪತಿಗಳು ಒಪ್ಪಿಗೆ ಸೂಚಿಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ, ಯುವಕರು ಡ್ರಗ್ಸ್ ಎಂಬ ಪಿಡುಗಿಗೆ ಬಲಿಯಾಗುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಯನ್ನು ನಿಯಂತ್ರಿಸುವ ಅಗತ್ಯವಿದೆ. ಈ ಬಗ್ಗೆ ಕುಲಪತಿಗಳಿಗೆ ಸಲಹೆ ನೀಡುವಂತೆ ಕೇಳಿದರು. 16 ವರ್ಷ ಒಳಗಿನ ವಿದ್ಯಾರ್ಥಿಗಳಿಗೆ ಮಾತ್ರ ಮೊಬೈಲ್ ಫೋನ್ ಬಳಕೆಗೆ ನಿರ್ಬಂಧ ಹೇರುವ ಚಿಂತನೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು.
"ಆಸ್ಟ್ರೇಲಿಯಾ ಸೇರಿ ಹಲವು ದೇಶಗಳಲ್ಲಿ ಶಾಲಾ ಮಕ್ಕಳಿಗೆ ಮೊಬೈಲ್ ಬಳಕೆಗೆ ನಿರ್ಬಂಧ ಹೇರಲಾಗಿದೆ. ಇದರಿಂದ ಮಕ್ಕಳ ಗಮನ ಅಧ್ಯಯನದ ಕಡೆ ಹೆಚ್ಚು ಕೇಂದ್ರೀಕೃತವಾಗಿದೆ," ಎಂದು ಸಿಎಂ ಸಿದ್ದರಾಮಯ್ಯ ವರು ಹೇಳಿದರು. "ಸೋಶಿಯಲ್ ಮೀಡಿಯಾಗಳಿಂದ ವಿದ್ಯಾರ್ಥಿಗಳು ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲೇಬೇಕು," ಎಂದು ತಿಳಿಸಿದರು.
ಡ್ರಗ್ಸ್ ಜಾಲದ ಕುರಿತು ಮಾತನಾಡಿ, "ಡ್ರಗ್ಸ್ ಇಂದು ಒಂದು ಪಿಡುಗಾಗಿ ಪರಿಣಮಿಸಿದೆ. ವಿಶ್ವವಿದ್ಯಾಲಯ ಕ್ಯಾಂಪಸ್‌ಗಳು ಸಂಪೂರ್ಣ ಡ್ರಗ್ಸ್ ಮುಕ್ತವಾಗಬೇಕು. ಡ್ರಗ್ಸ್ ಮಾಫಿಯಾಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು." ಎಂದು ಕುಲಪತಿಗಳಿಗೆ ಸೂಚಿಸಿದರು.
ಕುಲಪತಿಗಳ ನಿರ್ಧಾರ ಏನು?
ಸಭೆಯಲ್ಲಿ ಭಾಗವಹಿಸಿದ್ದ ಹಲವು ಕುಲಪತಿಗಳು, 16 ವರ್ಷ ಒಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬ್ಯಾನ್ ಮಾಡಬೇಕು. ಕಾಲೇಜು ಮತ್ತು ವಿಶ್ವವಿದ್ಯಾಲಯ ಕ್ಯಾಂಪಸ್‌ವೊಳಗೆ ಮೊಬೈಲ್ ಬಳಕೆಗೆ ನಿರ್ಬಂಧ ವಿಧಿಸುವಂತೆ ಸಲಹೆ ನೀಡಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳ ಶಿಸ್ತು, ಗಮನ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಅಗತ್ಯವೆಂದು ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದ್ದಾರೆ ಎಂದು ತಿಳಿದುಬಂದಿದೆ.
ಇದೀಗ ರಾಜ್ಯದ ಕೆಲವು ಭಾಗಗಳಲ್ಲಿ ಶಾಲಾ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಬಳಕೆ ಮೂಲಕ ತಮ್ಮ ಜೀವನ ಹಾಳುಮಾಡಿಕೊಂಡಿರುವ ಉದಾಹರಣೆಗಳಿವೆ. ಇಂತಹ ಪ್ರಕರಣಗಳು ಪ್ರತಿನಿತ್ಯ ಕೇಳಿಬರುತ್ತಲಿರುತ್ತವೆ. ಇದಕ್ಕೆ ಕಡಿವಾಣ ಬಿದ್ದರೆ ವಿದ್ಯಾರ್ಥಿಗಳು ಶಿಸ್ತು, ಆರೋಗ್ಯ ಕಾಪಾಡಿಕೊಳ್ಳಲು ತುಂಬಾ ಸಹಕಾರಿಯಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹಾಗಾದ್ರೆ, ರಾಜ್ಯ ಸರ್ಕಾರ ಇದನ್ನು ಯಾವಾಗಿನಿಂದ ಜಾರಿ ಮಾಡಲಿದೆಯೋ ಎಂದು ಮಕ್ಕಳ ಪೋಷಕರು ಕಾತರದಿಂದ ಕಾಯುತ್ತಿದ್ದಾರೆ.












Click it and Unblock the Notifications