ಸರ್ಕಾರಿ ಕಚೇರಿ, ಕಾರ್ಯಕ್ರಮಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ ನಿಷೇಧ
ಬೆಂಗಳೂರು, ಫೆಬ್ರವರಿ 06: ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕ ಸರ್ಕಾರ ಸರ್ಕಾರಿ ಕಚೇರಿ, ಕಾರ್ಯಕ್ರಮಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ ನಿಷೇಧಿಸಿದೆ. ಈ ಹಿಂದೆಯೇ ಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಬಳಸಿ ಬಿಸಾಡಬಹುದಾದ ಪ್ಲಾಸ್ಟಿಕ್ ಕುಡಿಯುವ ನೀರಿನ ಬಾಟಲ್‌ಗಳನ್ನು ಬಳಸುವಂತಿಲ್ಲ ಎಂದು ಸರ್ಕಾರ ಹೇಳಿತ್ತು. ಈ ಬಗ್ಗೆ ಈಗ ಸುತ್ತೋಲೆಯ ಮೂಲಕ ಮಾಹಿತಿಯನ್ನು ನೀಡಲಾಗಿದೆ.
ಈ ಕುರಿತು ಕೆ. ರವೀಂದ್ರ, ಸರ್ಕಾರದ ಉಪ ಕಾರ್ಯದರ್ಶಿ ಸಿ.ಆ.ಸು.ಇ (ಕಾರ್ಯಕಾರಿ) ಆದೇಶವನ್ನು ಹೊರಡಿಸಿದ್ದಾರೆ. ಕರ್ನಾಟಕ ಸರ್ಕಾರದ ಸಚಿವಾಲಯದ ಮೂಲಕ ಈಗ ಆದೇಶವನ್ನು ಹೊರಡಿಸಲಾಗಿದೆ. ಕಟ್ಟುನಿಟ್ಟಾಗಿ ಆದೇಶವನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ.

ಆದೇಶದ ವಿವರಗಳು: ಆದೇಶದಲ್ಲಿ ಸರ್ಕಾರದ ಅಧಿಸೂಚನೆ ಸಂಖ್ಯೆ ದಿನಾಂಕ 11.03.2016 ಉಲ್ಲೇಖಿಸಲಾಗಿದೆ. ಅಧಿಸೂಚನೆಯಲ್ಲಿ ಪ್ಲಾಸ್ಟಿಕ್ ವಸ್ತುಗಳ ಅತಿಯಾದ ಬಳಕೆಯಿಂದ ಆರೋಗ್ಯ ಮತ್ತು ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ ದೃಷ್ಟಿಯಿಂದ ಸಚಿವಾಲಯ ಸೇರಿದಂತೆ ರಾಜ್ಯಾದ್ಯಾಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸರ್ಕಾರಿ ಸೌಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾನಿಲಯಗಳು ಹಾಗೂ ಸರ್ಕಾರದಿಂದ ಅನುದಾನ ಪಡೆಯುವಂತಹ ಯಾವುದೇ ಸಂಸ್ಥೆಗಳ ವತಿಯಿಂದ ಏರ್ಪಡಿಸಲ್ಪಡುವ ಸಭೆ ಸಮಾರಂಭಗಳಲ್ಲಿ ಏಕಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲ್‌ನ (Single use packaged water bottles) ನೀರಿನ ಬಳಕೆ/ ಸರಬರಾಜು ಮಾಡುವುದನ್ನು ನಿಷೇಧಿಸಲಾಗಿದೆ.
ಇಂತಹ ಸಭೆ/ ಸಮಾರಂಭಗಳಲ್ಲಿ ಕುಡಿಯುವ ನೀರನ್ನು ಸಂದರ್ಭಾನುಸಾರ ಶುಚಿತ್ವ ರೀತಿಯಲ್ಲಿ ಗ್ಲಾಸ್, ಸ್ಟೀಲ್, ಪೇಪರ್ ಮತ್ತಿತರ ಪ್ಲಾಸ್ಟಿಕ್ ಅಲ್ಲದ ಲೋಟಗಳಲ್ಲಿ ಸರಬರಾಜು ಮಾಡಲು ಕ್ರಮವಹಿಸುವಂತೆ ಅಧಿಸೂಚನೆ/ ಆದೇಶ/ ಸುತ್ತೋಲೆ ಹೊರಡಿಸಲಾಗಿದೆ.
ಮುಂದುವರಿದು ಆದೇಶ ದಿನಾಂಕ 05.09.2018 ಹಾಗೂ ಸುತ್ತೋಲೆ ದಿನಾಂಕ 08.11.2024ರ ರಲ್ಲಿ ಮತ್ತೊಮ್ಮೆ ಏಕ ಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲ್ ನೀರಿನ ಬಳಕೆ/ ಸರಬರಾಜು ಮಾಡುವುದನ್ನು ನಿಷೇಧಿಸಿದೆ ಹಾಗೂ ಸೂಕ್ತ ಸಾಮೂಹಿಕ ಕುಡಿಯುವ ನೀರು ವಿತರಣಾ ಏರ್ಪಡಿಸುವಂತೆ ಸೂಚಿಸಿ ಆದೇಶ/ ಸುತ್ತೋಲೆಗಳನ್ನು ಹೊರಡಿಸಲಾಗಿಯೂ ಸಹ ಸಚಿವಾಲಯವೂ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಈ ನಿಯಮವನ್ನು ಪಾಲಿಸದಿರುವುದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದೆ.
ಆದಕಾರಣ, ಇನ್ನು ಮುಂದೆ ಮೇಲಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಪ್ಲಾಸ್ಟಿಕ್ ಬಳಕೆಯ ಬದಲಾಗಿ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ಪರಿಕರಗಳನ್ನು ಬಳಕೆ ಮಾಡುವಂತೆ ಮತ್ತೊಮ್ಮೆ ಸೂಚನೆ ನೀಡಲಾಗಿದೆ. ಮುಂದುವರೆದು, ಎಲ್ಲಾ ಇಲಾಖೆಯ ಮುಖ್ಯಸ್ಥರುಗಳು ತಮ್ಮ ಅಧೀನದಲ್ಲಿ ಬರುವ ಎಲ್ಲಾ ಕ್ಷೇತ್ರ ಇಲಾಖೆ/ ಮಂಡಳಿ/ ನಿಗಮಗಳಿಗೆ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡುವಂತೆ ಸೂಚಿಸಿದೆ ಎಂದು ತಿಳಿಸಿದೆ.
ಏಕ ಬಳಕೆ ಪ್ಲಾಸ್ಟಿಕ್ ನಿಷೇಧ: ಕರ್ನಾಟಕ ಸರ್ಕಾರ 2016ರ ಮಾರ್ಚ್ 11ರಂದು ಪ್ಲಾಸ್ಟಿಕ್ ವಸ್ತುಗಳ ಮಾರಾಟ, ದಾಸ್ತಾನು ನಿಷೇಧಿಸಿ ಆದೇಶ ಹೊರಡಿಸಿದೆ. ಹಲವು ಮಾದರಿಯ ಪ್ಲಾಸ್ಟಿಕ್ ಕವರ್, ತಟ್ಟೆ, ಚಮಚ, ಟೇಬಲ್ ಮೇಲೆ ಹಾಸುವ ಶೀಟ್‌ಗಳ ಬಳಕೆಯನ್ನು ನಿಷೇಧಿಸಲಾಗಿದೆ.
ಒಮ್ಮೆ ಬಳಕೆ ಮಾಡಿ ಬಿಸಾಕುವ ಪ್ಲಾಸ್ಟಿಕ್ ಕುಡಿಯುವ ನೀರಿನ ಬಾಟಲ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ, ಇದರ ಖರೀದಿ ವೆಚ್ಚವೂ ಅಧಿಕವಾಗಿತ್ತು. ಆದ್ದರಿಂದ, ಅರಣ್ಯ ಮತ್ತು ಪರಸರ ಇಲಾಖೆ ಈ ಮಾದರಿ ಬಾಟಲ್ ಬಳಕೆ ನಿಷೇಧಿಸುವ ಪ್ರಸ್ತಾವನೆ ಸಿದ್ಧಪಡಿಸಿತ್ತು, ಅದನ್ನು ಸರ್ಕಾರವು ಒಪ್ಪಿತ್ತು.
ಆದ್ದರಿಂದ ಸರ್ಕಾರಿ ಕಚೇರಿಗಳಲ್ಲಿ, ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಕುಡಿಯುವ ನೀರಿನ ಬಾಟಲ್ ಬಳಕೆ ನಿಷೇಧಿಸಿ ದೊಡ್ಡ ಕ್ಯಾನ್‌ಗಳಲ್ಲಿ ನೀರನ್ನು ತಂದು ಸ್ಟೀಲ್, ಗಾಜು ಅಥವ ಕಾಗದದ ಲೋಟಗಳ ಮೂಲಕ ನೀರು ಪೂರೈಕೆ ಮಾಡಬೇಕು ಎಂದು ಸೂಚನೆ ನೀಡಲಾಗಿತ್ತು.
ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಈ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಲಾಗಿತ್ತು. ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಆದ್ದರಿಂದ, ದೊಡ್ಡ ಸರ್ಕಾರಿ ಕಚೇರಿಯಾದರೆ ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಬೇಕಾಗುತ್ತದೆ ಎಂದು ತಿಳಿಸಲಾಗಿತ್ತು.












Click it and Unblock the Notifications