PSI Scam: 545 ಪಿಎಸ್ಐ ನೇಮಕಾತಿ ಹಗರಣ ನ್ಯಾಯಾಂಗ ತನಿಖೆಗೆ ಆದೇಶ
ಬೆಂಗಳೂರು, ಜುಲೈ 22: ರಾಜ್ಯದಲ್ಲಿ ಭಾರೀ ಸುದ್ದು ಮಾಡಿದ್ದ 545 ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣವನ್ನು ಆಡಳಿತರೂಢ ಕಾಂಗ್ರೆಸ್ ಸರ್ಕಾರ ತನಿಖೆಗೆ ಆದೇಶ ಮಾಡಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಈ ಅಕ್ರಮ ನೇಮಕಾತಿ ಪ್ರಕರಣವನ್ನು ಸರ್ಕಾರ ಈಗ ತನಿಖೆಗೆ ಒಪ್ಪಿಸಿದೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಸದ್ದು ಮಾಡಿದ್ದ 545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ತನಿಖೆಗಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದಲ್ಲಿ ಏಕ ಸದಸ್ಯ ತನಿಖಾ ಆಯೋಗವನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. 545 ಪಿಎಸ್ಐ ನೇಮಕಾತಿ ಲಿಖಿತ ಪರೀಕ್ಷಾ ಅಕ್ರಮ ಪ್ರಕರಣದ ತನಿಖೆಯನ್ನು 3 ತಿಂಗಳೊಳಗಾಗಿ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಭಾರೀ ಸದ್ದು ಮಾಡಿತ್ತು. ಇದೇ ವಿಚಾರವಾಗಿ ಬಿಜೆಪಿ ಸರ್ಕಾರ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್ ಬೃಹತ್ ಹೋರಾಟವನ್ನೇ ನಡೆಸಿತ್ತು. ಈ ಅಕ್ರಮವನ್ನು ತನಿಖೆ ನಡೆಸುವುದಾಗಿ ಕಾಂಗ್ರೆಸ್ ಮೊದಲಿನಿಂದಲೂ ಹೇಳುತ್ತಿತ್ತು. ಅದರಂತೆ ಇದೀಗ ಅಧಿಕಾರಕ್ಕೆ ಬಂದ ತಕ್ಷಣ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಕ್ರಮವನ್ನು ಹೈ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದೆ.
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) 545 ಖಾಲಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಜನವರಿ 21, 2021ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅಕ್ಟೋಬರ್ 3, 2021 ರಂದು ರಾಜ್ಯದ 92 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಲಿಖಿತ ಪರೀಕ್ಷೆಯಲ್ಲಿ ಅಕ್ರಮಗಳು ಕಂಡು ಬಂದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಸಿಐಡಿ ತನಿಖೆಗೆ ಒಳಪಡಿಸಿತ್ತು.
ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿನ 52 ಅಭ್ಯರ್ಥಿಗಳು ಒಳಗೊಂಡಂತೆ ಇತರೆ ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಸಂಬಂಧಪಟ್ಟ ನ್ಯಾಯಾಲಯಗಳಲ್ಲಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿದ್ದು, ಹೆಚ್ಚುವರಿ ತನಿಖೆಯನ್ನು ಮುಂದುವರಿಸಲಾಗಿದೆ.
ಆರೋಪಿತ 52 ಅಭ್ಯರ್ಥಿಗಳು ಕಾನೂನುಬಾಹಿರವಾಗಿ ಪರೀಕ್ಷೆಯನ್ನು ಬರೆದಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ 1977ರ ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮಗಳಲ್ಲಿ ನಿಯಮ 20 ರಲ್ಲಿ ನಮೂದಿಸಿರುವ ದುರ್ನಡತೆಯನ್ನು ಎಸಗಿರುವ ಕಾರಣ ನೇಮಕಾತಿ ಡಿಜಿಪಿಯನ್ನು ಜೂನ್ 20, 2023ರಲ್ಲಿ ಪೊಲೀಸ್ ಇಲಾಖೆ ನಡೆಸುವ ಎಲ್ಲಾ ವೃಂದದ ಹುದ್ದೆಗಳ ನೇಮಕಾತಿಯಲ್ಲಿ ಭಾಗವಹಿಸಲು ಶಾಶ್ವತವಾಗಿ ನಿಷೇಧಿಸಲಾಗಿತ್ತು.
545 ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ನೇರ ನೇಮಕಾತಿ ಪ್ರಕಿಯೆಯಲ್ಲಿ ಬಹು ಆಯಾಮದ ಅಕ್ರಮಗಳು ನಡೆದಿರುವುದು ಕಂಡುಬಂದಿರುವುದರಿಂದ ಹಾಗೂ ಈ ಅಕ್ರಮ ಪ್ರಕರಣವು ಗಂಭೀರ ಸ್ವರೂಪದ್ದಾಗಿದೆ. ಸಾರ್ವಜನಿಕ ಮಹತ್ವವುಳ್ಳ ವಿಷಯವಾಗಿರುವುದರಿಂದ, ಇನ್ನುಮುಂದೆ ನಡೆಯುವ ಪೊಲೀಸ್ ನೇಮಕಾತಿಗಳು ಅತ್ಯಂತ ಪಾರದರ್ಶಕವಾಗಿ ನಡೆಸುವ ಅಗತ್ಯವಿರುವುದರಿಂದ ಈ ಪ್ರಕರಣದಲ್ಲಿ ನ್ಯಾಯಾಂಗ ತನಿಖೆಯ ಅಗತ್ಯವಿರುವುದನ್ನು ಮನಗಂಡು ಕಮಿಷನ್ ಆಪ್ ಎನ್‌ಕ್ವಾರಿ ಆಕ್ಟ್ 1952ರ ನಿಯಮ 3ರ ಉಪ ನಿಯಮ ರನ್ವಯ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಲು ವಿಚಾರಣಾ ಆಯೋಗ ರಚಿಸಲು ಸರ್ಕಾರ ನಿರ್ಧರಿಸಿದೆ.
ವಿಚಾರಣಾ ಆಯೋಗ 21.01.2021 ರನ್ವಯ ಜರುಗಿದ 545 ಗಳ ಆಯ್ಕೆ ಪ್ರಕ್ರಿಯೆಗಳಲ್ಲಿ ನೇಮಕಾತಿ ನಿಯಮಗಳನ್ನು ಉಲ್ಲಂಘಿಸಲಾಗಿದೆಯೇ? ಎಂದು ತನಿಖೆ ನಡೆಸಬೇಕು. ಆಯ್ಕೆ ಪ್ರಕ್ರಿಯೆಗಳಲ್ಲಿ ನೇಮಕಾತಿ ನಿಯಮಗಳು ಉಲ್ಲಂಘನೆಯಾಗಿದ್ದಲ್ಲಿ ಅಂತಹ ಉಲ್ಲಂಘನೆ / ಅಕ್ರಮಗಳು ಯಾವುವು ಮತ್ತು ಆ ಅಕ್ರಮಗಳು ಯಾವ ಹಂತದಲ್ಲಿ ಜರುಗಿವೆ? ಎಂದು ತನಿಖೆ ನಡೆಸಬೇಕು.
ಅಕ್ರಮಗಳಲ್ಲಿ ಭಾಗಿಗಳಾಗಿ ದುರ್ಲಾಭ ಪಡೆದಿರುವ ವ್ಯಕ್ತಿಗಳು ಯಾರು? ಪಿಎಸ್ಐ ಹುದ್ದೆಗೆ ಅಭ್ಯರ್ಥಿಗಳ ನೇರ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಯಮಾನುಸಾರ, ಪಾರದರ್ಶಕವಾಗಿ ಮತ್ತು ಲೋಪರಹಿತವಾಗಿ ನಡೆಸುವ ನಿಟ್ಟಿನಲ್ಲಿ ಸರ್ಕಾರವು ಕೈಗೊಳ್ಳಬಹುದಾದ ಕ್ರಮಗಳಾವುವು ಎಂಬುದನ್ನು ತನಿಖೆ ನಡೆಸಲು ಆದೇಶದಲ್ಲಿ ತಿಳಿಸಲಾಗಿದೆ.












Click it and Unblock the Notifications