Mekedatu Dam: ಮೇಕೆದಾಟು ಡ್ಯಾಂಗಾಗಿ ಸುಪ್ರೀಂ ಮೊರೆಹೋದ ಕರ್ನಾಟಕ
ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ಕದನ ಜೋರಾಗಿರುವ ಸಂದರ್ಭದಲ್ಲೇ ಕರ್ನಾಟಕ ಮಹತ್ವದ ಹೆಜ್ಜೆ ಇಟ್ಟಿದೆ. ಕಾವೇರಿ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿದಿನ 5,000 ಕ್ಯೂಸೆಕ್ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಅಲ್ಲದೆ ಮೇಕೆದಾಟು ವಿಚಾರದಲ್ಲೂ ಈಗ ತಮಿಳುನಾಡಿಗೆ ಬಿಗ್ ಶಾಕ್ ಕೊಟ್ಟಿದೆ ಕರ್ನಾಟಕ.
ಅಂದಹಾಗೆ ಕರ್ನಾಟಕದಲ್ಲಿ ಬರ ಆವರಿಸಿದ್ದು, ಕಾವೇರಿ ಕೊಳ್ಳದ ಜಲಾಶಯಗಳು ಖಾಲಿ, ಖಾಲಿ ಕಾಣುತ್ತಿವೆ. ಪರಿಸ್ಥಿತಿ ಹೀಗಿದ್ದರೂ ಭಾರಿ ಪ್ರಮಾಣದ ನೀರು ಬಿಡಿಸಿಕೊಳ್ಳಲು ನೆರೆ ರಾಜ್ಯ ತಮಿಳುನಾಡು ಯತ್ನಿಸಿದೆ. ಇಂತಹ ಸಮಯದಲ್ಲಿ ಕರ್ನಾಟಕ ಸರ್ಕಾರ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದು, 5,000 ಕ್ಯೂಸೆಕ್ ನೀರು ಬಿಡಲು ಸಾಧ್ಯವಿಲ್ಲ ಎಂದು ತನ್ನ ಅರ್ಜಿಯಲ್ಲಿ ಮನವಿ ಮಾಡಿದೆ. ಹಾಗೇ ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಮೇಕೆದಾಟು ಡ್ಯಾಂ ನಿರ್ಮಿಸಲು ಕೇಂದ್ರ ತಕ್ಷಣ ಮಧ್ಯ ಪ್ರವೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಕರ್ನಾಟಕದಲ್ಲಿ ಭೀಕರ ಬರ ಪರಿಸ್ಥಿತಿ
ಅಂದಹಾಗೆ ಕಾವೇರಿ ಜಲಾನಯನ ಪ್ರದೇಶದ 4 ನದಿಗಳಿಂದ ನೀರಿನ ಲಭ್ಯತೆಯ ಕೊರತೆ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿದಂತೆ 5,000 ಕ್ಯೂಸೆಕ್ ಬಿಡುಗಡೆ ಮಾಡಲು ಎದುರಾಗಿರುವ ಸಮಸ್ಯೆಯನ್ನ ಉಲ್ಲೇಖಿಸಿ ಅರ್ಜಿ ಸಲ್ಲಿಸಲಾಗಿದೆ. ಈ ಮೂಲಕ ಕರ್ನಾಟಕ ನಿಗದಿತ ಪ್ರಮಾಣದ ನೀರನ್ನು ಏಕೆ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂಬ ಕಾರಣಗಳ ಬಗ್ಗೆ ಸುಪ್ರೀಂ ಕೋರ್ಟ್‌ಗೆ ತಿಳಿಸಲು ಮುಂದಾಗಿದೆ.
ಮೇಕೆದಾಟು ಅಸ್ತ್ರ ಮುಂದಿಟ್ಟ ಕರ್ನಾಟಕ
ಈಗಿನ ಸ್ಥಿತಿಯಲ್ಲಿ ಮೇಕೆದಾಟು ಡ್ಯಾಂ ಕಟ್ಟಿದರೆ ತಮಿಳುನಾಡು ಸರ್ಕಾರ ಪದೇ ಪದೆ ಕಾವೇರಿ ವಿಚಾರದಲ್ಲಿ ಮಾಡುವ ಕಿರಿಕ್ ನಿಂತು ಹೋಗಲಿದೆ. ಹೀಗಾಗಿ ತಕ್ಷಣ ಮೇಕೆದಾಟು ಕಾಮಗಾರಿ ಆರಂಭ ಮಾಡಬೇಕು ಅಂತಿದ್ದಾರೆ ತಜ್ಞರು. ಕರ್ನಾಟಕ ಯೋಜನೆ ಪೂರ್ಣಗೊಳಿಸಿದ್ರೆ ಸಾಕಷ್ಟು ಪ್ರಯೋಜನ ಇದೆ. ಇನ್ಮುಂದೆ ತಮಿಳುನಾಡಿಗೂ ಹೆಚ್ಚು ನೀರು ಬಿಡುವ ಜೊತೆಗೆ ಕರ್ನಾಟಕದ ಜನರಿಗೂ ನೀರು ಸಿಗಲಿದೆ. ಇದೇ ವಾದ ಮುಂದಿಟ್ಟು ಈಗ ಸುಪ್ರೀಂ ಕೋರ್ಟ್ ಎದುರು ಕರ್ನಾಟಕದ ಪರಿಸ್ಥಿತಿ ಬಿಡಿಸಿ ಹೇಳಲು ಕರ್ನಾಟಕ ಸರ್ಕಾರ ಮುಂದಾಗಿದೆ.
ಒಟ್ನಲ್ಲಿ ತಮಿಳುನಾಡು ಕಾವೇರಿ ನೀರಿನ ವಿಚಾರಕ್ಕೆ ಕಿರಿಕ್ ತೆಗೆದರೆ ಕರ್ನಾಟಕ ಸರ್ಕಾರವು ಈ ವಿಚಾರದಲ್ಲಿ ಬೇರೆಯದ್ದೇ ಅಸ್ತ್ರ ಪ್ರಯೋಗ ಮಾಡಿದೆ. ಅದ್ರಲ್ಲೂ ಮೇಕೆದಾಟು ಡ್ಯಾಂ ಅಸ್ತ್ರ ತಮಿಳುನಾಡಿಗೆ ಶಾಕ್ ಕೊಟ್ಟಿದೆ. ಈಗ ಎಲ್ಲಾ ಅಂದುಕೊಂಡಂತೆ ನಡೆದು, ಡ್ಯಾಂ ನಿರ್ಮಾಣಕ್ಕೆ ಅನುಮತಿ ಸಿಕ್ಕರೆ ಕರ್ನಾಟಕದ ನೀರಿನ ಸಮಸ್ಯೆಗಳು ಅದರಲ್ಲೂ ರಾಜಧಾನಿ ಬೆಂಗಳೂರಿನ ನೀರಿನ ಸಮಸ್ಯೆ ಭಾಗಶಃ ಕಡಿಮೆ ಆಗಲಿದೆ.












Click it and Unblock the Notifications