ವೀರಪ್ಪನ್ ಅಡಗು ತಾಣವಾಗಿದ್ದ ಕಾಡಿನಲ್ಲಿ ಆರಂಭವಾಗಲಿದೆ ಸಫಾರಿ
ಬೆಂಗಳೂರು, ಜನವರಿ 07: ತಮಿಳುನಾಡು ಮತ್ತು ಕರ್ನಾಟಕ ಸರ್ಕಾರಕ್ಕೆ ತಲೆ ನೋವಾಗಿದ್ದ ಕಾಡುಗಳ್ಳ ವೀರಪ್ಪನ್ ನೆನಪು ಇಂದಿಗೂ ಮಾಡಿಕೊಳ್ಳಲಾಗುತ್ತದೆ. ವೀರಪ್ಪನ್ ಸಂಚಾರ ನಡೆಸಿದ ಕಾಡಿನಲ್ಲಿ ಈಗ ಅರಣ್ಯ ಇಲಾಖೆ ಸಫಾರಿ ಆರಂಭಿಸುವ ಚಿಂತನೆಯಲ್ಲಿದೆ. 22 ಕಿ. ಮೀ. ಉದ್ದದ ಈ ಸಫಾರಿ ಪ್ರವಾಸಿಗರನ್ನು ಸೆಳೆಯುವ ನಿರೀಕ್ಷೆ ಇದೆ. ಈ ಸಫಾರಿಯಲ್ಲಿ ಪ್ರವಾಸಿಗರು ಆನೆ, ಜಿಂಕೆ, ಕರಡಿ ಮುಂತಾದ ಪ್ರಾಣಿಗಳನ್ನು ವೀಕ್ಷಣೆ ಮಾಡುವ ಅವಕಾಶವಿದೆ.
ಕರ್ನಾಟಕದ ಅರಣ್ಯ ಇಲಾಖೆಯ ಈ ಯೋಜನೆ ಕುರಿತು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಹೊಗನೇಕಲ್ ಜಲಪಾತದಿಂದ ಆರಂಭವಾಗುವ ಸಫಾರಿ, ಕಾವೇರಿ ವಜ್ಯಜೀವಿ ಅಭಯಾರಣ್ಯದಲ್ಲಿ ಸಾಗಲಿದ್ದು, ವೀರಪ್ಪನ್ ಅಡಗುದಾಣಗಳನ್ನು ಮಾಡಿಕೊಂಡಿದ್ದ ಜಾಗದಲ್ಲಿ ಸಾಗಲಿದೆ. ವೀರಪ್ಪನ್ ಕುರಿತು ಈಗಾಗಲೇ ಹಲವು ಸಿನಿಮಾಗಳು ಬಂದಿದ್ದು, ಆತ ಅಡಗಿದ್ದ ಅರಣ್ಯ ಪ್ರದೇಶ ಹೇಗಿದೆ? ಎಂದು ತೆರೆ ಮೇಲೆ ಜನರು ನೋಡಿದ್ದಾರೆ. ಈಗ ಸಫಾರಿ ಮೂಲಕ ಅವುಗಳ ವೀಕ್ಷಣೆ ಮಾಡಬಹುದು.

ಕರ್ನಾಟಕ-ತಮಿಳುನಾಡು ಗಡಿಯ ಹೊಗನೇಕಲ್ ಜಲಪಾತ ಎರಡೂ ರಾಜ್ಯಗಳ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ವೀರಪ್ಪನ್ ಹುಟ್ಟೂರು ಗೋಪಿನಾಥಂನಿಂದ ಈಗಾಗಲೇ ತಮಿಳುನಾಡು ಆರಂಭಿಸಿರುವ ಸಫಾರಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಆದ್ದರಿಂದ ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಸಫಾರಿ ಆರಂಭಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಹೊಗನೇಕಲ್ ಜಲಪಾತ ವೀಕ್ಷಣೆ ಮಾಡಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಸಫಾರಿ ಆರಂಭಿಸಿದರೆ ಇವರನ್ನು ಸಫಾರಿಗೆ ಸೆಳೆದು ಆದಾಯವನ್ನುಗಳಿಸಬಹುದು ಎಂಬುದು ಅರಣ್ಯ ಇಲಾಖೆ ಚಿಂತನೆಯಾಗಿದೆ. ಈ ಕುರಿತು ಕಾವೇರಿ ವನ್ಯಜೀವಿ ಅಭಯಾರಣ್ಯದ ಅಧಿಕಾರಿಗಳು ಈಗಾಗಲೇ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.
22 ಕಿ. ಮೀ. ಸಫಾರಿ: ಪ್ರಸ್ತಾವಿತ ಹೊಗನೇಕಲ್ ಸಫಾರಿ ಸುಮಾರು 22 ಕಿ. ಮೀ. ಒಳಗೊಂಡಿರಲಿದೆ. ಎರಡು ವಾಹನಗಳನ್ನು ಬಳಕೆ ಮಾಡಿಕೊಂಡು ಬೆಳಗ್ಗೆ 2 ಮತ್ತು ಸಂಜೆ 2 ಟ್ರಿಪ್ ಸಫಾರಿ ನಡೆಸುವುದು ಅರಣ್ಯ ಇಲಾಖೆಯ ಯೋಜನೆಯಾಗಿದೆ. ವರದಿಯ ಪ್ರಕಾರ ಸಫಾರಿಗಾಗಿ ಈಗಾಗಲೇ ಹೊಸ ವಾಹನಗಳಿಗೆ ಸಹ ಬೇಡಿಕೆ ಸಲ್ಲಿಕೆ ಮಾಡಲಾಗಿದೆ.
ಹೊಗನೇಕಲ್ ಜಲಪಾತಕ್ಕೆ ಕರ್ನಾಟಕ, ತಮಿಳುನಾಡು ಮಾತ್ರವಲ್ಲ ವಿವಿಧ ರಾಜ್ಯಗಳು, ವಿದೇಶಗಳ ಪ್ರವಾಸಿಗರು ಸಹ ಭೇಟಿ ನೀಡುತ್ತಾರೆ. ಕಾವೇರಿ ನದಿಯ ಅಂದವನ್ನು ಕಣ್ತುಂಬಿಕೊಂಡು, ಮೀನಿನ ಖಾದ್ಯವನ್ನು ಸವಿದು ರಜೆಯನ್ನು ಎಂಜಾಯ್ ಮಾಡುತ್ತಾರೆ.
ಇಂತಹ ಪ್ರವಾಸಿಗರನ್ನು ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಸಫಾರಿ ಕರೆದುಕೊಂಡು ಹೋಗಿ ಆನೆ, ಜಿಂಕೆ, ಕರಡಿ ಸೇರಿದಂತೆ ವಿವಿಧ ಪ್ರಾಣಿ, ಪಕ್ಷಿಗಳನ್ನು ತೋರಿಸುವುದು ಅರಣ್ಯ ಇಲಾಖೆಯ ಯೋಜನೆ. ಅಲ್ಲದೇ ಈ ಮಾದರಿ ಸಫಾರಿಗೆ ದರವನ್ನು ನಿಗದಿ ಮಾಡುವುದರಿಂದ ಇಲಾಖೆಯ ಆದಾಯವೂ ಹೆಚ್ಚಲಿದೆ.
ಈಗಾಗಲೇ ಹುಲಿ, ಸಿಂಹದ ಸಫಾರಿ ರಾಜ್ಯದ ಹಲವು ಕಡೆ ಇದೆ. ಇದಕ್ಕೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ. ಈಗ ವೀರಪ್ಪನ್ ಅಡಗುತಾಣವಾದ ಕಾಡಿನಲ್ಲಿ ಸಫಾರಿ ಆರಂಭಿಸುವುದರಿಂದ ಹೆಚ್ಚಿನ ಜನರು ಸಫಾರಿಯತ್ತ ಆಕರ್ಷಣೆಯಾಗಬಹುದು ಎಂಬುದು ಅರಣ್ಯ ಇಲಾಖೆಯ ಚಿಂತನೆಯಾಗಿದೆ.
ಮಾಹಿತಿಗಳ ಪ್ರಕಾರ ಹೊಗನೇಕಲ್ ಜಲಪಾತಕ್ಕೆ 2024ರ ಜನವರಿಯಲ್ಲಿ 3,500 ಪ್ರವಾಸಿಗರು ಭೇಟಿ ನೀಡಿದ್ದರು. ಮಾರ್ಚ್‌ನಲ್ಲಿ 9,381 ಪ್ರವಾಸಿಗರು ಬಂದಿದ್ದರು. ಕಳೆದ ವರ್ಷ 1,400ಕ್ಕೂ ಅಧಿಕ ವಿದೇಶಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications