ರಾಜ್ಯದ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ಶಾಕ್: FDA, SDA ಪರೀಕ್ಷೆಗೆ ಇನ್ಮುಂದೆ ನೆಗೆಟಿವ್ ಅಂಕ!

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಲಕ್ಷಾಂತರ ಯುವಕ ಯುವತಿಯರಿಗೆ ಇದು ಬಹುಮುಖ್ಯ ಮಾಹಿತಿ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ (FDA) ಮತ್ತು ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ನೇಮಕಾತಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನ ತರಲಾಗಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಕರಡು ಅಧಿಸೂಚನೆಯನ್ನು ಹೊರಡಿಸಿದೆ.

ಕರ್ನಾಟಕ ನಾಗರಿಕ ಸೇವೆಗಳ ತಿದ್ದುಪಡಿ ನಿಯಮಗಳು 2026 ಅನ್ನ ರೂಪಿಸಿ ಗ್ಯಾಜೆಟ್‌ನಲ್ಲಿ ಕರಡು ಪ್ರಕಟಿಸಲಾಗಿದ್ದು, ಈ ಹೊಸ ನಿಯಮಗಳ ಅನ್ವಯ ಪರೀಕ್ಷಾ ಮಾದರಿಯಲ್ಲಿ ಕಠಿಣ ಮಾನದಂಡಗಳನ್ನ ಅಳವಡಿಸಲಾಗಿದೆ. ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೆಗೆಟಿವ್ ಅಂಕಗಳನ್ನ ಪರಿಚಯಿಸಿರುವುದು ಆಕಾಂಕ್ಷಿಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Karnataka

ಹೊಸ ಕರಡು ನಿಯಮದ ಪ್ರಕಾರ, ಇನ್ನು ಮುಂದೆ ಎಫ್‌ಡಿಎ ಮತ್ತು ಎಸ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆಯ ಎರಡೂ ಪತ್ರಿಕೆಗಳಲ್ಲೂ ಋಣಾತ್ಮಕ ಅಂಕ ಅಂದರೆ ನೆಗೆಟಿವ್‌ ಅಂಕಗಳು ಅನ್ವಯವಾಗಲಿವೆ. ಅಭ್ಯರ್ಥಿಗಳು ನೀಡುವ ಪ್ರತಿಯೊಂದು ತಪ್ಪು ಉತ್ತರಕ್ಕೂ, ಆ ಪ್ರಶ್ನೆಗೆ ನಿಗದಿಪಡಿಸಲಾದ ಅಂಕಗಳ ನಾಲ್ಕನೇ ಒಂದು ಭಾಗದಷ್ಟು (1/4) ಅಂಕಗಳನ್ನ ಕಡಿತಗೊಳಿಸಲಾಗುತ್ತದೆ.

ಈ ಹಿಂದಿನ ನೇಮಕಾತಿ ಪರೀಕ್ಷೆಗಳಲ್ಲಿ ಇಂತಹ ಯಾವುದೇ ನೆಗೆಟಿವ್ ಅಂಕಗಳ ವ್ಯವಸ್ಥೆ ಇರಲಿಲ್ಲ. ಇದರ ಜೊತೆಗೆ, ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆಯಲು ಅಭ್ಯರ್ಥಿಗಳು ಕನಿಷ್ಠ ಶೇ. 35ರಷ್ಟು ಅಂಕಗಳನ್ನ ಕಡ್ಡಾಯವಾಗಿ ಗಳಿಸಲೇಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಶೈಕ್ಷಣಿಕ ಅರ್ಹತೆ

ಸಹಾಯಕರು ಅಥವಾ ಎಫ್‌ಡಿಎ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ ಪದವಿ ಮುಗಿಸಿರಬೇಕು. ಅದೇ ರೀತಿ ಕಿರಿಯ ಸಹಾಯಕರು ಅಥವಾ ಎಸ್‌ಡಿಎ ಸಮಾನಾಂತರ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯನ್ನ ಕನಿಷ್ಠ ಮಾನದಂಡವಾಗಿ ನಿಗದಿಪಡಿಸಲಾಗಿದೆ.

ಪತ್ರಿಕೆ 1ರ ಪಠ್ಯಕ್ರಮವನ್ನ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ರೂಪಿಸಲಾಗುತ್ತದೆ. ಆದರೆ, ಪತ್ರಿಕೆ 2ರ ಪಠ್ಯಕ್ರಮವನ್ನ ಆಯಾ ಹುದ್ದೆಯ ಸ್ವರೂಪವನ್ನ ಆಧರಿಸಿ, ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಹಾಗೂ ನೇಮಕಾತಿ ಪ್ರಾಧಿಕಾರದೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ಅಂತಿಮಗೊಳಿಸಲಾಗುತ್ತದೆ.

ಪರೀಕ್ಷಾ ಅವಧಿ ವಿಸ್ತರಣೆ

ಇದರ ಜೊತೆಗೆ ಅಭ್ಯರ್ಥಿಗಳಿಗೆ ಒಂದು ಸಿಹಿಸುದ್ದಿ ಎಂದರೆ ಪರೀಕ್ಷಾ ಅವಧಿಯ ವಿಸ್ತರಣೆ. ಈ ಹಿಂದಿನ ನೇಮಕಾತಿ ಪರೀಕ್ಷೆಗಳಲ್ಲಿ ಪ್ರತಿ ಪತ್ರಿಕೆಗೆ ಕೇವಲ 90 ನಿಮಿಷಗಳ ಕಾಲಾವಕಾಶ ನೀಡಲಾಗುತ್ತಿತ್ತು. ಆದರೆ, ಈಗ ತಂದಿರುವ ಕರ್ನಾಟಕ ನಾಗರಿಕ ಸೇವಾ ನಿಯಮ ತಿದ್ದುಪಡಿ ಅನ್ವಯ ಪರೀಕ್ಷಾ ಅವಧಿಯನ್ನ ಎರಡು ಗಂಟೆಗಳಿಗೆ ವಿಸ್ತರಿಸಲಾಗಿದೆ. ಇದರಿಂದ ಅಭ್ಯರ್ಥಿಗಳಿಗೆ ಪ್ರಶ್ನೆಗಳನ್ನ ಅರ್ಥಮಾಡಿಕೊಂಡು ಉತ್ತರಿಸಲು ಹೆಚ್ಚಿನ ಸಮಯ ಸಿಗಲಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿದ ಬಳಿಕ, ನಿಗದಿತ ಕಾಲಮಿತಿಯೊಳಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿದ್ದರೆ, ಅವರ ಬದಲಿಗೆ ಹೆಚ್ಚುವರಿ ಪಟ್ಟಿಯಲ್ಲಿರುವ ಇತರ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ಅಲ್ಲದೆ, ಆಯ್ಕೆಯಾದ ಅಭ್ಯರ್ಥಿಗಳು ರಾಜ್ಯದ ಯಾವುದೇ ಮೂಲೆಯಲ್ಲಿ ಸೇವೆ ಸಲ್ಲಿಸಲು ಮಾನಸಿಕವಾಗಿ ಸಿದ್ಧರಿರಬೇಕು ಎಂದು ಅಧಿಸೂಚನೆಯಲ್ಲಿ ಕಟ್ಟುನಿಟ್ಟಾಗಿ ತಿಳಿಸಲಾಗಿದೆ.

ಸದ್ಯ ಪ್ರಕಟವಾಗಿರುವ ಈ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದ್ದು, ಆ ಬಳಿಕವಷ್ಟೇ ಅಂತಿಮ ಅಧಿಸೂಚನೆ ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+