ಬರ ಸಂಕಷ್ಟದ ರೈತರಿಗೆ ಶುಭಸುದ್ದಿ: ತಲಾ ₹2,500 ಇನ್‌ಪುಟ್ ಸಬ್ಸಿಡಿ ನೀಡಲಿದೆ ರಾಜ್ಯ ಸರ್ಕಾರ
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ಬರಗಾಲದಿಂದ ತುತ್ತಾಗಿ ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ಗುಡ್‌ನ್ಯೂಸ್ ನೀಡಿದೆ. ತಕ್ಷಣ ನೆರವು ತಲುಪಿಸುವ ಉದ್ದೇಶದಿಂದ NDRF ಅನುದಾನವನ್ನು ನಿರೀಕ್ಷಿಸಿಕೊಂಡು, ರಾಜ್ಯ ಸರ್ಕಾರದಿಂದ ಪ್ರತಿ ರೈತನಿಗೆ 2,500 ರೂಪಾಯಿ ಇನ್‌ಪುಟ್ ಸಬ್ಸಿಡಿ ನೀಡಲು ತೀರ್ಮಾನಿಸಲಾಗಿದೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಘೋಷಿಸಿದರು.
50 ಲಕ್ಷ ರೈತರಿಗೆ ಪ್ರಯೋಜನ
ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ಕುರಿತ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸಿದ ಅವರು, ಪ್ರತಿ ರೈತನಿಗೆ ₹2,500 ಇನ್‌ಪುಟ್ ಸಬ್ಸಿಡಿ ನೀಡುವುದರಿಂದ ರಾಜ್ಯದ ಬೊಕ್ಕಸಕ್ಕೆ ಸುಮಾರು ₹1,250 ಕೋಟಿ ವೆಚ್ಚವಾಗಲಿದೆ. ಮೊದಲ ಹಂತದಲ್ಲಿಯೇ ಈ ಮೊತ್ತವನ್ನು ರೈತರಿಗೆ ನೀಡಲಾಗುವುದು. ಅಂದಾಜು 45ರಿಂದ 50 ಲಕ್ಷ ರೈತರಿಗೆ ಇದರ ಪ್ರಯೋಜನ ದೊರೆಯಲಿದ್ದು, ಇದನ್ನು ತಕ್ಷಣ ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ರಾಜ್ಯದ ಅನ್ನದಾತ ಇಂದು ಕಷ್ಟದಲ್ಲಿದ್ದಾನೆ. ಹೀಗಾಗಿ NDRF ಅನುದಾನವನ್ನು ನಿರೀಕ್ಷಿಸಿಕೊಂಡು ರಾಜ್ಯ ಸರ್ಕಾರದಿಂದ ಪ್ರತಿ ರೈತನಿಗೆ ₹2,500 ಇನ್‌ಪುಟ್ ಸಬ್ಸಿಡಿ ನೀಡಲು ಸರ್ಕಾರ ನಿರ್ಧರಿಸಿದೆ. ₹1,250 ಕೋಟಿ ಮೊತ್ತವನ್ನು ಮೊದಲ ಹಂತದಲ್ಲಿಯೇ ನಮ್ಮ ರೈತರಿಗೆ ನೀಡಲಿದ್ದೇವೆ. ಇದು ಸಣ್ಣ ಮೊತ್ತವಲ್ಲ. ಅಂದಾಜು 45ರಿಂದ 50 ಲಕ್ಷ ರೈತರಿಗೆ ಇದರ ಪ್ರಯೋಜನ ದೊರೆಯಲಿದೆ. ಈ ನೆರವನ್ನು ನೀಡಲಾಗುವುದು. ಇದರ ಜೊತೆಗೆ ಬೇರೆ ಎಲ್ಲ ರೀತಿಯಲ್ಲಿಯೂ ರೈತರಿಗೆ ಸರ್ಕಾರ ಸಹಾಯಹಸ್ತ ನೀಡಲಿದ್ದೇವೆ ಎಂದರು.
ಕರ್ನಾಟಕಕ್ಕೆ ಕೇಂದ್ರ ಸರ್ಕಾರ ನೆರವು ನೀಡಲಿ
ಕರ್ನಾಟಕ ಮಾತ್ರವಲ್ಲದೆ ಸುಮಾರು 17-18 ರಾಜ್ಯಗಳು ಇಂದು ಬರ ಪರಿಸ್ಥಿತಿಯಲ್ಲಿವೆ ಎಂಬುದನ್ನು ಅಂಕಿ-ಅಂಶಗಳ ಸಹಿತ ವಿವರಿಸಿದ್ದೇನೆ. ಬೇರೆ ರಾಜ್ಯಗಳಲ್ಲಿ ಎಷ್ಟು ಪ್ರಮಾಣದ ಬರ ಪರಿಸ್ಥಿತಿ ಇದೆ ಎಂಬುದನ್ನೂ ಸುಮಾರು 17 ರಾಜ್ಯಗಳ ಅಂಕಿ-ಅಂಶಗಳ ಮೂಲಕ ತಿಳಿಸಿದ್ದೇನೆ. ಹೀಗಾಗಿ, ಈ ಸದನ ಕೂಡ ಒಪ್ಪಿದರೆ, ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಬೇಕು. ಈವರೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರಕ್ರಿಯೆ ನಡೆದಿಲ್ಲ. ನಮ್ಮ ಪತ್ರಗಳಿಗೂ ಉತ್ತರ ಬಂದಿಲ್ಲ. ಕೇಂದ್ರ ಸರ್ಕಾರದ ತಂಡವನ್ನು ತಕ್ಷಣ ರಾಜ್ಯಕ್ಕೆ ಕಳುಹಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ 101 ತಾಲೂಕುಗಳಿಗೆ ನಷ್ಟ
ನಾವು ಈಗ 100-101 ತಾಲೂಕುಗಳಿಗೆ ಸಂಬಂಧಿಸಿದಂತೆ 18,000 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಿದ್ದೇವೆ. ₹3,800 ಕೋಟಿ ಪರಿಹಾರ ಕೇಳಿದ್ದೇವೆ. ಇನ್ನೂ ಸುಮಾರು 120 ತಾಲೂಕುಗಳು ಬರಪೀಡಿತ ಪ್ರದೇಶಗಳೆಂದು ಘೋಷಣೆಯಾಗಲಿವೆ. ಅವುಗಳನ್ನೂ ಸೇರಿಸಿ ಮತ್ತೊಂದು ಮೆಮೊರಾಂಡಮ್ ಸಲ್ಲಿಸುತ್ತೇವೆ ಎಂದು ಹೇಳಿದರು.
ಇವೆಲ್ಲವನ್ನೂ ಒಟ್ಟುಗೂಡಿಸಿದರೆ ಸುಮಾರು ₹40,000 ಕೋಟಿ ನಷ್ಟವಾಗುವ ಸಾಧ್ಯತೆ ಇದೆ ಎಂದು ನನಗೆ ಅನಿಸುತ್ತದೆ. NDRF ಮಾರ್ಗಸೂಚಿಗಳ ಪ್ರಕಾರ ಇದರಲ್ಲಿ ಎಷ್ಟು ಪರಿಹಾರಕ್ಕೆ ಅರ್ಹವಾಗುತ್ತದೆ ಎಂಬುದನ್ನು ಲೆಕ್ಕ ಹಾಕಬೇಕು. ಅದು ₹15,000 ಕೋಟಿ ಆಗುತ್ತದೆಯೇ ಎಂಬುದನ್ನು ನೋಡಬೇಕು. ಕಳೆದ ಬಾರಿ ₹18,000 ಕೋಟಿ ಆಗಿತ್ತು. ಈ ವರ್ಷವೂ ಎಷ್ಟು ಸಾವಿರ ಕೋಟಿ ಆಗುತ್ತದೆ ಎಂಬುದನ್ನು ಲೆಕ್ಕ ಹಾಕಿ ಆ ಮೊತ್ತವನ್ನು ಕೇಳುತ್ತೇವೆ. ಆ ಹಣವನ್ನು ಆದಷ್ಟು ಶೀಘ್ರವಾಗಿ ನಮಗೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರಿಗೆ ದೊರೆತಿರುವ ಬೆಳೆ ವಿಮೆ ಪರಿಹಾರವನ್ನು ಗಮನಿಸಿದರೆ, 2020-21ರಲ್ಲಿ ₹700 ಕೋಟಿ, 2021-22ರಲ್ಲಿ ₹881 ಕೋಟಿ, 2022-23ರಲ್ಲಿ ₹1,090 ರಿಂದ ₹1,092 ಕೋಟಿ ಹಾಗೂ 2023-24ರಲ್ಲಿ ₹1,600 ಕೋಟಿ ಬಂದಿದೆ ಎಂಬ ಅಂಕಿ ಅಂಶ ಸದನಕ್ಕೆ ಕೊಟ್ಟರು.
2023-24ರಲ್ಲಿ ಬೆಳೆ ವಿಮೆಯಡಿ ₹1,600 ಕೋಟಿ ಈಗಾಗಲೇ ನಮ್ಮ ರೈತರಿಗೆ ವಿತರಣೆಯಾಗಿದೆ. ಇದು ದಾಖಲೆ ಪ್ರಮಾಣ. ಇಲ್ಲಿಯವರೆಗೆ ಈ ಪ್ರಮಾಣದಲ್ಲಿ ನಮ್ಮ ರೈತರಿಗೆ ಬೆಳೆ ವಿಮೆ ಪರಿಹಾರ ಸಿಕ್ಕಿರಲಿಲ್ಲ. ನಮ್ಮ ಕೃಷಿ ಸಚಿವರು ಬಹಳ ಮುತುವರ್ಜಿಯಿಂದ ಈ ಬೆಳೆ ವಿಮೆಯನ್ನು ರೈತರಿಗೆ ತಲುಪಿಸುವ ಕೆಲಸ ಮಾಡಿದ್ದಾಕ್ಕಾಗಿ ಅವರಿಗೆ ಡಿಸಿಎಂ ಧನ್ಯವಾದ ಅರ್ಪಿಸಿದರು.
ಕುಡಿಯುವ ನೀರಿಗೆ ಎಲ್ಲಿಯಾದರೂ ತೊಂದರೆಯಾದರೆ ಖಾಸಗಿ ಕೊಳವೆಬಾವಿಗಳನ್ನು ವಶಕ್ಕೆ ಪಡೆದುಕೊಳ್ಳಿ, ಅದಕ್ಕೆ ಬಾಡಿಗೆ ಪಾವತಿಸಿ ನೀರು ಸರಬರಾಜು ಮಾಡಿ ಎಂದು ಸ್ಪಷ್ಟ ನಿರ್ದೇಶನ ನೀಡಿದ್ದೇವೆ. ಟ್ಯಾಂಕರ್‌ಗಳ ಮೂಲಕವೂ ನೀರು ಸರಬರಾಜು ಮಾಡುವಂತೆ ತಿಳಿಸಿದ್ದೇವೆ. ಮೇವಿನ ಅಭಾವ ಎದುರಾದಾಗ ಮೇವಿನ ಕಿಟ್‌ಗಳನ್ನು ನೀಡಿ ಮೇವು ಬೆಳೆಯಲು ಪ್ರೋತ್ಸಾಹಿಸಿದ್ದೇವೆ. ಇಂದು ಗೋಶಾಲೆಗಳನ್ನು ತೆರೆದು ಜಾನುವಾರುಗಳಿಗೆ ರಕ್ಷಣೆ ನೀಡುವ ಕೆಲಸವನ್ನೂ ನಮ್ಮ ಸರ್ಕಾರ ಮಾಡಿದೆ. ಆದ್ದರಿಂದ ಈ ಬರಗಾಲದ ಸಂದರ್ಭದಲ್ಲಿ ನಮ್ಮ ಸರ್ಕಾರ ರೈತರ ಜೊತೆ, ಬಡವರ ಜೊತೆ ಮತ್ತು ಗ್ರಾಮೀಣ ಜನರ ಜೊತೆ ಭದ್ರವಾಗಿ ನಿಂತಿದೆ ಎಂದು ತಿಳಿಸಿದರು.
ಮೈಕ್ರೋ ಫೈನಾನ್ಸ್ ಕಿರುಕುಳ ನೀಡಿದ್ರೆ ಕ್ರಮ
ರೈತರ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಮೊರಟೋರಿಯಂ ಅವಧಿಯನ್ನು 12 ತಿಂಗಳಿಗೆ ಹಾಗೂ ಸಾಲ ಮರುಪಾವತಿ ಅವಧಿಯನ್ನು 36 ತಿಂಗಳಿಂದ 60 ತಿಂಗಳವರೆಗೆ ವಿಸ್ತರಿಸಲಾಗಿದೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಯಾರಾದರೂ ರೈತರಿಗೆ ಕಿರುಕುಳ ನೀಡಿದರೆ ಅಥವಾ ತೊಂದರೆ ಮಾಡಿದರೆ ಅವರ ವಿರುದ್ಧ ಈಗಾಗಲೇ ಇರುವ ಕಠಿಣ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಕೆಲವು ಕಡೆ ರೈತರಿಗೆ ತೊಂದರೆ ಮಾಡಲಾಗುತ್ತಿದೆ ಎಂಬ ವರದಿಗಳು ಈಗಾಗಲೇ ಬರುತ್ತಿವೆ. ಹೀಗಾಗಿ ಯಾರಾದರೂ ರೈತರಿಗೆ ಕಿರುಕುಳ ನೀಡಿದರೆ ಅವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.


Click it and Unblock the Notifications
