ಕುಟುಂಬ, ವಿದೇಶಿ ಕುಟುಂಬ, ಭಾರತೀಯ ಕುಟುಂಬದ ಬಗ್ಗೆ ಹೇಳಿಕೆ: ನಟಿ, ಬಿಜೆಪಿ ನಾಯಕಿ ಶ್ರುತಿ ವಿರುದ್ಧ ಜೆಡಿಎಸ್ ದೂರು
ಬೆಂಗಳೂರು, ಏಪ್ರಿಲ್ 08: ನಟಿ ಹಾಗೂ ಬಿಜೆಪಿ ನಾಯಕಿ ಶ್ರುತಿ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ದೂರು ದಾಖಲಿಸಿದೆ. ಜೆಡಿಎಸ್ ಕರ್ನಾಟಕ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಎಸ್ ಪಿ ಅವರು ಪಕ್ಷದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದಾರೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ಕ್ಷೇತ್ರದಲ್ಲಿ ನಟಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಮತದಾರರನ್ನು ಓಲೈಸಲು ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ನಟಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಶ್ರುತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರುತ್ತೇವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಒಂದು ಕುಟುಂಬದ ಬೆಳವಣಿಗೆಗೆ ಸಹಾಯ ಮಾಡಬೇಕಾದರೆ ಜೆಡಿಎಸ್‌ಗೆ ಮತ ನೀಡಿ. ವಿದೇಶಿ ಕುಟುಂಬ ಬೆಳೆಯಲು ಸಹಾಯ ಮಾಡಬೇಕಾದರೆ ಕಾಂಗ್ರೆಸ್‌ಗೆ ಮತ ನೀಡಿ. ಭಾರತೀಯರ ಕುಟುಂಬ ಬೆಳವಣಿಗೆಗೆ ನೆರವಾಗಬೇಕಾದರೆ ಬಿಜೆಪಿಗೆ ಮತ ನೀಡಿ ಎಂದು ಶ್ರುತಿ ತಮ್ಮ ಭಾಷಣದ ವೇಳೆ ಹೇಳಿದ್ದಾರೆಂದು ಜೆಡಿಎಸ್ ದೂರಿನಲ್ಲಿ ತಿಳಿಸಿದ್ದಾರೆ. ಶ್ರುತಿ ಕರ್ನಾಟಕದಲ್ಲಿ ಬಿಜೆಪಿಯ ಮಹಿಳಾ ವಿಭಾಗದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಿಚ್ಚ ಸುದೀಪ್ ಕುರಿತಾಗಿಯೂ ಜೆಡಿಎಸ್ ಪತ್ರ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಬಹುದು ಎಂದು ಆರೋಪಿಸಿ ಕಿಚ್ಚ ಸುದೀಪ್ ಅವರ ಚಲನಚಿತ್ರಗಳು, ಕಾರ್ಯಕ್ರಮಗಳು ಮತ್ತು ಜಾಹೀರಾತುಗಳ ಪ್ರದರ್ಶನ ಮತ್ತು ಪ್ರಸಾರವನ್ನು ನಿಷೇಧಿಸುವಂತೆ ಕೋರಿ ಜನತಾ ದಳ (ಜಾತ್ಯತೀತ) ಶುಕ್ರವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಪರ ಪ್ರಚಾರ ಮಾಡುವುದಾಗಿ ಸುದೀಪ್ ಬುಧವಾರ ತಿಳಿಸಿದ್ದಾರೆ.

ಬುಧವಾರ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸುದೀಪ್, 'ನಾನು ಇಲ್ಲಿಗೆ ಬರುವ ಅವಶ್ಯಕತೆ ಇರಲಿಲ್ಲ. ನಾನು ಯಾವುದೇ ವೇದಿಕೆ ಅಥವಾ ಹಣಕ್ಕಾಗಿ ಇಲ್ಲಿಗೆ ಬಂದಿಲ್ಲ. ನಾನು ಇಲ್ಲಿ ಒಬ್ಬ ವ್ಯಕ್ತಿಗಾಗಿ ಮಾತ್ರ ಬಂದಿದ್ದೇನೆ. ನನಗೆ ಹೆಚ್ಚಿನ ಗೌರವವಿದೆ. ನಾನು ಸಿಎಂ ಮಾಮಾ (ಬೊಮ್ಮಾಯಿ) ಅವರಿಗೆ ನನ್ನ ಸಂಪೂರ್ಣ ಬೆಂಬಲವನ್ನು ಘೋಷಿಸುತ್ತಿದ್ದೇನೆ' ಎಂದು ತಿಳಿಸಿದ್ದಾರೆ.
ಅವರು ಬಿಜೆಪಿಯ ಸಿದ್ಧಾಂತವನ್ನು ನಂಬುತ್ತಾರೆಯೇ ಎಂದು ಕೇಳಲಾದ ಪ್ರಶ್ನೆಗೆ ಸುದೀಪ್, 'ಒಬ್ಬ ನಾಗರಿಕನಾಗಿ, ನಾನು ಪ್ರಧಾನಿ ಮೋದಿ ತೆಗೆದುಕೊಂಡ ಕೆಲವು ನಿರ್ಧಾರಗಳನ್ನು ಸಂಪೂರ್ಣವಾಗಿ ಗೌರವಿಸುತ್ತೇನೆ. ಆದರೆ ಅದು ನನ್ನ ದೃಷ್ಟಿಕೋನವಾಗಿದೆ. ಆದರೆ ಇಂದು ನಾನು ಇಲ್ಲಿ ಕುಳಿತುಕೊಳ್ಳುವುದಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ' ಎಂದು ಹೇಳಿದ್ದಾರೆ.

ಇದೇ ವೇಳೆ ಬುಧವಾರ ಶಿವಮೊಗ್ಗ ಮೂಲದ ವಕೀಲ ಕೆ.ಪಿ.ಶ್ರೀಪಾಲ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವವರೆಗೆ ಕಿಚ್ಚ ಸುದೀಪ್ ಅವರ ಅಭಿನಯದ ಚಲನಚಿತ್ರಗಳು, ಕಾರ್ಯಕ್ರಮಗಳು ಮತ್ತು ಜಾಹೀರಾತುಗಳ ಪ್ರದರ್ಶನ ಮತ್ತು ಪ್ರಸಾರವನ್ನು ನಿಷೇಧಿಸುವಂತೆ ಕೋರಿದ್ದಾರೆ.
ಕರ್ನಾಟಕದಲ್ಲಿ ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಈಗಾಗಲೇ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಅಂತಿಮಗೊಳಿಸಲಿದೆ.











Click it and Unblock the Notifications