Karnataka Elections: ಜೆಡಿಎಸ್-ಎಐಎಂಐಎಂ ಮೈತ್ರಿ ಮಾತುಕತೆ: ಕಾಂಗ್ರೆಸ್‌ಗೆ ಹೆಚ್ಚಿದ ಆತಂಕ- ವಿವರ, ವಿಶ್ಲೇಷಣೆ
ಬೆಂಗಳೂರು, ಏಪ್ರಿಲ್ 6: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ( Karnataka Assembly Elections 2023 ) ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ನೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ( JDS ) ಮುಂದಾಗುವ ಸಾಧ್ಯತೆ ಇದೆ.
ಒಂದು ವೇಳೆ, ಜೆಡಿಎಸ್ ಹಾಗೂ ಎಐಎಂಐಎಂ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದೇ ಆದಲ್ಲಿ, ಇದು ಕಾಂಗ್ರೆಸ್‌ಗೆ ಆತಂಕವನ್ನು ಹೆಚ್ಚಿಸಲಿದೆ ಎಂಬ ಮಾತುಗಳು ಕೇಳಿಬಂದಿವೆ. ಏಕೆಂದರೆ, ಎಐಎಂಐಎಂ- ಜೆಡಿಎಸ್ ಮೈತ್ರಿಕೂಟವು ಮುಸ್ಲಿಂ ಮತಗಳನ್ನು ತಮ್ಮದಾಗಿಸಿಕೊಳ್ಳಬಹುದು. ಇದರಿಂದ ಕಾಂಗ್ರೆಸ್‌ಗೆ ಹಾನಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಬಲ್ಲ ಮೂಲಗಳ ಪ್ರಕಾರ, ಎಐಎಂಐಎಂ ಕನಿಷ್ಠ 25 ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲು ಬಯಸಿದೆ. ಅದರಲ್ಲೂ ವಿಶೇಷವಾಗಿ ಮುಸ್ಲಿಮರ ಮತಗಳನ್ನು ಗಮನಾರ್ಹವಾಗಿ ಸೆಳೆಯಲು ಎಐಎಂಐಎಂ ಯತ್ನಿಸಲಿದೆ. ಇದು ಮುಸ್ಲಿಂ ಬಾಹುಳ್ಯದ ವಿಧಾನಸಭೆ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಈ ಭಾಗಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಂತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದ ಜನಸಂಖ್ಯೆಯಲ್ಲಿ ಶೇ 13 ರಷ್ಟಿರುವ ಮುಸ್ಲಿಮರು
ಎಐಎಂಐಎಂ ನೀಡಿರುವ ಚುನಾವಣಾ ಪೂರ್ವ ಮೈತ್ರಿ ಪ್ರಸ್ತಾಪಕ್ಕೆ ಪಕ್ಷವು ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಆದರೆ, ಕುಮಾರಸ್ವಾಮಿಯವರ ಆಪ್ತ ಮೂಲಗಳು ಹೇಳಿರುವ ಪ್ರಕಾರ, 'ಮೈತ್ರಿ ಪ್ರಸ್ತಾಪಕ್ಕೆ ಮುದ್ರೆಯೊತ್ತಲಾಗಿದೆ ಮತ್ತು ಅಧಿಕೃತ ಘೋಷಣೆ ಆಗುವುದಷ್ಟೇ ಬಾಕಿ ಇದೆ' ಎಂದು ತಿಳಿಸಿವೆ.

'ನಾವು ಎಐಎಂಐಎಂ ನೀಡಿರುವ ಪ್ರಸ್ತಾಪವನ್ನು ಸ್ವೀಕರಿಸಿದ್ದೇವೆ. ಅದಕ್ಕೆ ನಾವು ಇನ್ನೂ ಪ್ರತಿಕ್ರಿಯಿಸಿಲ್ಲ' ಎಂದು ಕುಮಾರಸ್ವಾಮಿ ಅವರು 'ಡೆಕ್ಕನ್ ಹೆರಾಲ್ಡ್' ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶದ ( ಹೈದರಾಬಾದ್ ಕರ್ನಾಟಕ ) ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಚಿಂತನೆ ನಡೆಸಿದೆ. ಈ ಭಾಗಗಳಲ್ಲಿ ಹೆಚ್ಚಾಗಿ ಮುಸ್ಲಿಂ ಜನಸಂಖ್ಯೆ ಇದೆ.
ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಅರ್ಹ ಅಭ್ಯರ್ಥಿಗಳಿಲ್ಲ. ಮೈತ್ರಿ ನಮಗೆ ಸಹಾಯ ಮಾಡುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. 10 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪೂರ್ವ ಮೈತ್ರಿಗಾಗಿ ಎಐಎಂಐಎಂ ಜೊತೆ ಜೆಡಿಎಸ್ ಮಾತುಕತೆ ನಡೆಸುವ ಸಾಧ್ಯತೆಯಿದೆ.
2018 ರ ವಿಧಾನಸಭಾ ಚುನಾವಣೆಯಲ್ಲಿ, ಎಐಎಂಐಎಂ ಸ್ಪರ್ಧಿಸದಿರಲು ನಿರ್ಧರಿಸಿತು, ಬದಲಿಗೆ ಜೆಡಿಎಸ್ ಅನ್ನು ಬೆಂಬಲಿಸಲು ತೀರ್ಮಾನ ಮಾಡಿತು.
ಎಐಎಂಐಎಂ ಮತ್ತು ಜೆಡಿಎಸ್ ಬಿಜೆಪಿಯ 'ಬಿ' ತಂಡಗಳಾಗಿವೆ. ಓವೈಸಿ ಮತ ಒಡೆಯುವ ವ್ಯಕ್ತಿ. ನಮ್ಮ ಮತಗಳಿಗೆ ಧಕ್ಕೆಯಾಗುವುದಿಲ್ಲ ಎಂಬ ವಿಶ್ವಾಸ ನಮಗಿದೆ ಎಂದು ಕಾಂಗ್ರೆಸ್ ಮುಖಂಡ ಮನ್ಸೂರ್ ಅಲಿ ಖಾನ್ ' ಡೆಕ್ಕನ್ ಹೆರಾಲ್ಡ್ 'ಗೆ ತಿಳಿಸಿದ್ದಾರೆ
ಎಐಎಂಐಎಂ ಜೊತೆಗೆ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( ಎಸ್‌ಡಿಪಿಐ ) 100 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸಿದೆ.
ನಿಷೇಧಿತ ಪಿಎಫ್‌ಐನ ರಾಜಕೀಯ ಅಂಗ ಪಕ್ಷವಾದ ಎಸ್‌ಡಿಪಿಐ ಈಗಾಗಲೇ 19 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ. ಎಸ್‌ಡಿಪಿಐ ಕೂಡ ಮುಸ್ಲಿಂ ಮತಗಳನ್ನು ವಿಭಜಿಸುವ ಸಾಮರ್ಥ್ಯ ಹೊಂದಿದೆ.
ಆದರೆ, ಯಾರೊಬ್ಬರ ಮತ ಬ್ಯಾಂಕ್‌ಗೆ ಧಕ್ಕೆ ತರುವ ಉದ್ದೇಶ ನಮ್ಮ ಪಕ್ಷಕ್ಕಿಲ್ಲ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದ್ದಾರೆ.
ನಾವು 19 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದೇವೆ. ಇನ್ನು 54 ಮಂದಿಯ ಹೆಸರನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಒಟ್ಟು 100 ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆ. ಬದಲಾವಣೆಯನ್ನು ಬಯಸುತ್ತಿರುವ ಜನರು ಎಸ್‌ಡಿಪಿಐ ಅನ್ನು ಆಯ್ಕೆ ಮಾಡುತ್ತಾರೆ ಎಂದು ನಾವು ಬಲವಾಗಿ ನಂಬುತ್ತೇವೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications