Karnataka Elections: ಏಪ್ರಿಲ್ 19 ರಂದು ಚನ್ನಪಟ್ಟಣದಿಂದ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ
ರಾಮನಗರ, ಏಪ್ರಿಲ್ 04: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಯಾಗಿ ಏಪ್ರಿಲ್ 19 ರಂದು ನಾಮಪತ್ರ ಸಲ್ಲಿಸುವುದಾಗಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಸೋಮವಾರ ತಿಳಿಸಿದ್ದಾರೆ.
ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಏಪ್ರಿಲ್ 17 ರಂದು ಪಕ್ಕದ ರಾಮನಗರದಿಂದ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಪ್ರಸ್ತುತ ವಿಧಾನಸಭೆಯಲ್ಲಿ ಕುಮಾರಸ್ವಾಮಿ ಚನ್ನಪಟ್ಟಣವನ್ನು ಪ್ರತಿನಿಧಿಸುತ್ತಿದ್ದರೆ, ರಾಮನಗರವನ್ನು ಅವರ ಪತ್ನಿ ಮತ್ತು ನಿಖಿಲ್ ಅವರ ತಾಯಿ ಅನಿತಾ ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದಾರೆ.

ನಟ-ರಾಜಕಾರಣಿ ಮತ್ತು ಜೆಡಿಎಸ್ ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ 2019 ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಭದ್ರಕೋಟೆಯಾದ ಮಂಡ್ಯದಿಂದ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಸೋತಿದ್ದರು.
ಡಿಸೆಂಬರ್‌ನಲ್ಲಿ ಜೆಡಿಎಸ್ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ.
ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಇಂದು ಸಂಜೆ ಸಭೆ ನಡೆಸಲಿದ್ದು, ಸಾಧ್ಯವಾದರೆ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.
'40 ರಿಂದ 50 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ, ಅದನ್ನು ಬಿಡುಗಡೆ ಮಾಡಲಾಗುವುದು. ಮೂರನೇ ಪಟ್ಟಿಗೆ ನಾಲ್ಕರಿಂದ ಐದು ದಿನಗಳು ಬೇಕಾಗಬಹುದು' ಎಂದು ಅವರು ಹೇಳಿದ್ದಾರೆ.

ನನ್ನ ಪತ್ನಿಯನ್ನು ಚುನಾವಣೆಗೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ
'ಹಾಸನದ ರಾಜಕೀಯವೇ ಬೇರೆ, ನನ್ನ ಪತ್ನಿಯ ರಾಜಕೀಯವೇ ಬೇರೆ' ಎಂದು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಮಂಗಳವಾರ ಹೇಳಿದ್ದಾರೆ. ತಮ್ಮ ಪತ್ನಿ ಹಾಗೂ ಪಕ್ಷದ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮಾಧ್ಯಮ ವರದಿಗಳನ್ನು ತಳ್ಳಿಹಾಕಿದ್ದಾರೆ.
ಅನಿತಾ ಅವರು ಈ ಹಿಂದೆ ಪಕ್ಷವನ್ನು ಉಳಿಸಲು ಚುನಾವಣೆಗೆ ಸ್ಪರ್ಧಿಸಿದ್ದರು. ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಅಭ್ಯರ್ಥಿ ಇಲ್ಲದಿದ್ದಾಗ, ಅವರು ಚುನಾವಣಾ ರಾಜಕೀಯಕ್ಕೆ ಬಂದಿದ್ದರು. ಈಗ ಅವರು ಅದರಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಅತ್ತಿಗೆ ಭವಾನಿ ರೇವಣ್ಣ ಹಾಸನ ಟಿಕೆಟ್ ಪಡೆಯಲು ಯಶಸ್ವಿಯಾದರೆ, ತುಮಕೂರು ಗ್ರಾಮಾಂತರ ಟಿಕೆಟ್‌ಗಾಗಿ ಅನಿತಾ ಒತ್ತಡ ಹೇರುತ್ತಾರೆ ಎಂಬ ಮಾಧ್ಯಮಗಳ ವರದಿಗೆ ಮಾಜಿ ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದಾರೆ.

ನಮ್ಮಲ್ಲಿ ಬೇರೆ ಯಾವುದೇ ಗೊಂದಲವಿಲ್ಲ. ಹಾಸನ ವಿಷಯದಲ್ಲೂ ಗೊಂದಲವಿಲ್ಲ. ನಾನು ಪೇಪರ್ ಮತ್ತು ಟಿವಿಯಲ್ಲಿ ನೋಡಿದ ಇನ್ನೊಂದು ವಿಷಯವೆಂದರೆ ಅವರು ಅನಿತಾ ಕುಮಾರಸ್ವಾಮಿ ಹೆಸರಲ್ಲಿ ತಂದಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ದಯವಿಟ್ಟು ಕೈಮುಗಿದು ಹೇಳುತ್ತಿದ್ದೇನೆ. ಮೂರು ಚುನಾವಣೆಗಳಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಕಾರಣ, ಆ ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಇಲ್ಲದಿರುವುದು. ಪಕ್ಷದ ಅಭಿಮಾನ ಉಳಿಸಲು. ಪಕ್ಷ ಮತ್ತು ನಾನು ಆಕೆಯನ್ನು ರಾಜಕೀಯಕ್ಕೆ ಕರೆತಂದೆವು' ಎಂದು ತಿಳಿಸಿದ್ದಾರೆ.
ಹಾಸನ ಟಿಕೆಟ್ ವಿಚಾರವಾಗಿ ಭವಾನಿ ರೇವಣ್ಣ ಅವರು ಪಟ್ಟು ಬಿಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗೌಡರ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಎದ್ದಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 'ಪಕ್ಷದ ನಿಷ್ಠಾವಂತ ಕಾರ್ಯಕರ್ತ'ನನ್ನು ಹಾಸನದಿಂದ ಕಣಕ್ಕಿಳಿಸುವುದಾಗಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.












Click it and Unblock the Notifications