ಬಹಿರಂಗ ಪ್ರಚಾರಕ್ಕೆ ತೆರೆ, ಇನ್ನು ಸೀಟುಗಳಿಗೆ ಲೆಕ್ಕಾಚಾರ
ಬೆಂಗಳೂರು, ಮೇ 11 : ಕರ್ನಾಟಕ ವಿಧಾನಸಭೆ ಚುನಾವಣೆ 2018ರ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಶನಿವಾರದ ಎಷ್ಟು ಪ್ರಮಾಣದ ಮತದಾನವಾಗಲಿದೆ?, ಯಾರು ಎಷ್ಟು ಸೀಟುಗಳಲ್ಲಿ ಜಯಗಳಿಸಬಹುದು? ಎಂಬ ಲೆಕ್ಕಾಚಾರ ಆರಂಭವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದ ಹಿನಕಲ್‌ನಲ್ಲಿ ಕೊನೆಯ ರೋಡ್ ಶೋ ನಡೆಸಿ ಪ್ರಚಾರವನ್ನು ಅಂತ್ಯಗೊಳಿಸಿದರು. ಸಿದ್ದರಾಮಯ್ಯ ಅವರು, ಮೈಸೂರಿನ ಚಾಮುಂಡೇಶ್ವರಿ ಮತ್ತು ಬಾಗಲಕೋಟೆಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಕರ್ನಾಟಕ ಬಿಜೆಪಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಸ್ವ ಕ್ಷೇತ್ರ ಶಿಕಾರಿಪುರದಲ್ಲಿ ಪ್ರಚಾರ ನಡೆಸಿ, ಚುನಾವಣಾ ಪ್ರಚಾರವನ್ನು ಅಂತ್ಯಗೊಳಿಸಿದ್ದಾರೆ. ಶಿಕಾರಿಪುರದಿಂದ ಅವರು ಕಣಕ್ಕಿಳಿದಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರೋಡ್ ಶೋ ನಡೆಸುವ ಮೂಲಕ ಪ್ರಚಾರವನ್ನು ಅಂತ್ಯಗೊಳಿಸಿದ್ದಾರೆ. ಕುಮರಸ್ವಾಮಿ ಅವರು ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ರಾಷ್ಟ್ರೀಯ ನಾಯಕರ ಪ್ರಚಾರ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ 17 ದಿನಗಳ ಕಾಲ ಪ್ರಚಾರ ನಡೆಸಿದ್ದು, ರಾಜ್ಯವನ್ನು ಒಂದು ಬಾರಿ ಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು 24 ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಮೇ 12ರ ಶನಿವಾರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 15ರ ಮಂಗಳವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications