Kolar BJP Candidate : ರಾಜಕೀಯ ಗುರುವಿನ ವಿರುದ್ಧ ಕೋಲಾರದಲ್ಲಿ ಮುನಿರತ್ನ ಸ್ಪರ್ಧೆ; ಆರ್ ಆರ್ ನಗರದಿಂದ ಯಾರು ಕಣಕ್ಕೆ?
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ದ ಮುನಿರತ್ನ ಅವರನ್ನ ಕಣಕ್ಕಿಳಿಸಲು ಬಿಜೆಪಿ ಸಿದ್ದತೆಯನ್ನ ನಡೆಸಿದೆ ಎನ್ನಲಾಗಿದೆ.
ಕೋಲಾರ,ಫೆಬ್ರವರಿ22: ರಾಜಕೀಯ ಎದುರಾಳಿಯಾಗಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಲು ರಾಜ್ಯ ಬಿಜೆಪಿ ಮಾಸ್ಟರ್ ಪ್ಲಾನ್ ನಡೆಸಿದೆ.
ಹೌದು, ಕೋಲಾರ ಉಸ್ತುವಾರಿ ಸಚಿವರಾಗಿರೋ ಮುನಿರತ್ನ ಅವರನ್ನ ಕೋಲಾರದಿಂದ ಕಣಕ್ಕಿಳಿಸಲು ಹೈಕಮಾಂಡ್ ಡೈರೆಕ್ಟ್ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೋಲಾರಕ್ಕೆ ಖುದ್ದು ಭೇಟಿ ನೀಡಿದ್ದು, ಸಂತೋಷ್ ನೇತೃತ್ವದಲ್ಲೇ ಕೋಲಾರ ವಿಧಾನಸಭಾ ಚುನಾವಣೆಗೆ ಸ್ಟ್ರಾಟಜಿ ರೆಡಿಯಾಗಿದೆ. ಕೋಲಾರ ಉಸ್ತುವಾರಿ ಸಚಿವರಾಗಿರೋ ಮುನಿರತ್ನ ಅವರನ್ನ ಕಣಕ್ಕಿಳಿಸಲು ವೇದಿಕೆ ಸಜ್ಜಾಗಿದೆ ಎಂದು ಬಿಜೆಪಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಸಿದ್ದರಾಮಯ್ಯ ಅವರನ್ನ ಸೋಲಿಸಲು ಜಾತಿ ವ್ಯೂಹವನ್ನ ಬಿ ಎಲ್ ಸಂತೋಷ್ ಅವರು ರಚನೆ ಮಾಡಿದ್ದಾರೆ. ಕೋಲಾರಕ್ಕೆ ಸೂಕ್ತ ಅಭ್ಯರ್ಥಿಯಾಗಿ ಮುನಿರತ್ನ ಹೊರಹೊಮ್ಮಿದ್ದಾರೆ. ಮುನಿರತ್ನ ಪರ ಕುರುಬ ಮತ ಒಗ್ಗೂಡಿಸಲು ಈಶ್ವರಪ್ಪ, ಬೈರತಿ, ವರ್ತೂರು ಪ್ರಕಾಶ್ , ಎಸ್ ಸಿ ಮತ ಸೆಳೆಯಲು ಮುನಿಸ್ವಾಮಿ, ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಇರಲಿದ್ದಾರೆ ಎಂದು ಹೇಳಲಾಗಿದೆ.

ಕೋಲಾರದಲ್ಲಿ ಸ್ಪರ್ಧೆ ಕುರಿತು ಮುನಿರತ್ನ ಹೇಳಿದ್ದೇನು.?
ಹೈಕಮಾಂಡ್ ವರಿಷ್ಠರು ಸೂಚಿಸಿದರೆ ನಾನು ಕೋಲಾರದಿಂದ ಸ್ಪರ್ಧೆ ಮಾಡಲು ಸಿದ್ಧ ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೇಳಿದ್ದಾರೆ. ಪಕ್ಷ ಎಲ್ಲಿ ಹೋಗಲು ಸೂಚನೆ ಕೊಡುತ್ತೋ ಅಲ್ಲಿ ಹೋಗಿ ಸ್ಪರ್ಧೆ ಮಾಡುತ್ತೇನೆ, ನಮ್ಮ ಪಕ್ಷ ದೊಡ್ಡದು ಎನ್ನುವ ಮೂಲಕ ಸಿದ್ದರಾಮಯ್ಯ ವಿರುದ್ದ ಚುನಾವಣಾ ಕ್ಷಣಕ್ಕಿ ಇಳಿಯಲು ಸಿದ್ಧ ಎಂಬ ಸಂದೇಶವನ್ನ ರವಾನಿಸಿದ್ದಾರೆ.

ಕೋಲಾರದಿಂದ ಸಿದ್ದು ಸ್ಪರ್ಧೆ;ಚುನಾವಣೆಗೆ ಸಜ್ಜಾಗುತ್ತಿರುವ ಕೈ ಪಡೆ
ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಿಸಿಕೊಂಡ ಬಳಿಕ ರಾಜ್ಯ ರಾಜಕಾರಣದಲ್ಲಿ ಕೋಲಾರ ಕ್ಷೇತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತ ಸಿದ್ದರಾಮಯ್ಯ ಕೋಲಾರ ಸ್ಪರ್ಧೆಯ ಕುರಿತು ಸಾಕಷ್ಟು ಟೀಕೆಗಳು, ರಾಜಕೀಯ ಲೆಕ್ಕಾಚಾರಗಳು ಶುರುವಾಗಿವೆ.
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಒತ್ತಾಯಿಸಿದ್ದ ಕಾಂಗ್ರೆಸ್ ನ ಸ್ಥಳೀಯ ನಾಯಕರು ತಮ್ಮ ತಮ್ಮ ಶಕ್ತಿ ಸಾಮರ್ಥ್ಯವನ್ನ ಬಳಸಿಕೊಂಡು ಸಿದ್ದರಾಮಯ್ಯ ಪರ ಪ್ರಚಾರ ನಡೆಸಲು ಸಿದ್ದತೆಯನ್ನ ನಡೆಸಿದ್ದಾರೆ. ಕೋಲಾರದಲ್ಲಿ ಸಿದ್ದರಾಮಯ್ಯ ಅವರಿಗೆ ಎದುರಾಳಿಯಾಗಿರು ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಕಾರ್ಯವೈಖರಿಯ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ ಬೆಂಬಲಿಗರು ಕೋಲಾರದಲ್ಲಿ ಚುನಾವಣಾ ತಂತ್ರಗಾರಿಕೆಯನ್ನ ನಡೆಸಿದ್ದಾರೆ. ಕೋಲಾರ ಜನರ ನಾಡಿಮಿಡಿತವನ್ನ ತಿಳಿದುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಕೋಲಾರದಲ್ಲಿ ವಾರ್ ರೂ ತರೆದಿರುವ ಸಿದ್ದರಾಮಯ್ಯ, ಕೋಲಾರದಲ್ಲಿ ಮನೆ ಮಾಡಲು ತಿರ್ಮಾನಿಸಿದ್ದಾರೆ.

ಕೋಲಾರದಲ್ಲಿ ಮುನಿರತ್ನಸ್ಪರ್ಧೆ; ವರ್ತೂರ್ ಪ್ರಕಾಶ್ ನಿಲುವೇನು.?
ಒಂದು ವೇಳೆ ಕೋಲಾರದಲ್ಲಿ ಮುನಿರತ್ನ ಸ್ಪರ್ಧೆ ಮಾಡಿದ್ರೆ ವರ್ತೂರು ಪ್ರಕಾಶ್ ತಟಸ್ಥವಾಗಬಹುದು. ಯಾಕೆಂದರೆ ಸಿದ್ದರಾಮಯ್ಯ ಅವರನ್ನೇ ರಾಜಕೀಯ ಗುರು ಎಂದು ವರ್ತೂರು ಪ್ರಕಾಶ್ ಭಾವಿಸಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ವಿರುದ್ಧವಾಗಿ ಪ್ರಚಾರ ಮಾಡದೇ ಇರಬಹುದು. ಅದರ ಜೊತೆ ಬಿಜೆಪಿ ಜೊತೆ ಇದ್ದು ಇಲ್ಲದಂತೆಯೂ ಇರುವ ಸಾಧ್ಯತೆ ಇದೆ. ಪಕ್ಷಾಂತರ ಮಾಡುವ ಯಾವುದೇ ಸಾಧ್ಯತೆ ಇಲ್ಲ. ಕಾಂಗ್ರೆಸ್‌ನಲ್ಲಿ ಭಾಗಶಃ ಸಿದ್ದರಾಮಯ್ಯ ಅವರೇ ಕೋಲಾರಕ್ಕೆ ಅಭ್ಯರ್ಥಿಯಾಗಲಿದ್ದು, ಜೆಡಿಎಸ್‌ಗೆ ಸಿಎಂಆರ್ ಶ್ರೀನಾಥ್ ಅವರನ್ನು ಅಭ್ಯರ್ಥಿ ಆಗಿ ಘೋಷಿಸಲಾಗಿದೆ. ಈ ಎರಡು ಪಕ್ಷಗಳ ಟಿಕೆಟ್ ಬಾಗಿಲು ವರ್ತೂರು ಪ್ರಕಾಶ್‌ಗೆ ಮುಚ್ಚಿದ್ದು, ಈ ಹಿಂದೆ ಪಕ್ಷೇತರರಾಗಿ ಸ್ಪರ್ಧಿಸಿದಂತೆ ಕೋಲಾರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಆರ್ ಆರ್ ನಗರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರು?
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಹಳ ಪ್ರತಿಷ್ಠೆಯ ಕಣವಾಗಿರುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ 2018 ರ ಬಿಜೆಪಿ ಅಭ್ಯರ್ಥಿಯಾಗಿದ್ದ ತುಳಸಿ ಮುನಿರಾಜು ಅವರಿಗೆ ಈ ಬಾರಿ ಟಿಕೆಟ್ ನೀಡುವ ಸಾಧ್ಯತೆ ಇದೆ.
ಈ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಗೆ ಬಂದಿದ್ದ ಮುನಿರತ್ನ ಅವರಿಗೆ ಬಿಜೆಪಿ ರಾಜ ರಾಜೇಶ್ವರಿ ನಗರಕ್ಕೆ ಟಿಕೆಟ್ ನೀಡಿದಕ್ಕೆ ಪಕ್ಷದ ವಿರುದ್ದ ಅಸಮಾಧಾನಗೊಂಡಿದ್ದ ತುಳುಸಿ ಮುನಿರಾಜು ಅವರನ್ನ ಎಂಎಲ್ ಸಿ ಯನ್ನಾಗಿ ಮಾಡಿ ಅಸಮಾಧಾನ ಶಮನ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಇದೀಗ ಸಿದ್ದರಾಮಯ್ಯ ವಿರುದ್ದ ಸಚಿವ ಮುನಿರತ್ನ ಅವರನ್ನ ಕೋಲಾರದಿಂದ ಕಣಕ್ಕಿಳಿಸಲು ಬಿಜೆಪಿ ಸಜ್ಜಾಗಿದ್ದು, ಕೋಲಾರದಲ್ಲಿ ಮುನಿರತ್ನ ಸ್ಪರ್ಧಿಸಿದರೇ ತುಳಸಿ ಮುನಿರಾಜು ಅವರಿಗೆ ರಾಜರಾಜೇಶ್ವರಿ ಕ್ಷೇತ್ರದಿಂದ ಟಿಕೆಟ್ ಕೊಟ್ಟು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.












Click it and Unblock the Notifications