ವಿಧಾನಸಭೆ ಚುನಾವಣೆ: ಲಕ್ಷಾಂತರ ಪ್ರಯಾಣಿಕರಲ್ಲಿ ಮತದಾನದ ಜಾಗೃತಿ ಮೂಡಿಸುತ್ತಿವೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ
ಬೆಂಗಳೂರು, ಏಪ್ರಿಲ್.24: ಇದು ಚುನಾವಣಾ ಸಮಯ. ಈ ಸಮಯದಲ್ಲಿ ದೇಶದ ಪ್ರಜೆಗಳ ಪ್ರಮುಖ ಕರ್ತವ್ಯ ಮತದಾನ ಮಾಡುವುದು. ಆದರೆ, ರಜೆ ಸಿಕ್ಕಿದೆ ಎಂದು ಟ್ರಿಪ್, ಪಿಕ್‌ನಿಕ್ ಹೋಗುವವರು, ಹಾಯಾಗಿ ನಿದ್ದೆ ಮಾಡುವ ಎನ್ನುವವರನ್ನು ಬಡಿದೆಚ್ಚರಿಸಲು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ನಿಗಮಗಳು ನಿರ್ಧರಿಸಿದ್ದು, ಮತದಾರರಲ್ಲಿ ಜಾಗೃತಿ ಮೂಡಿಸುತ್ತಿವೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವಿಧಾನಸಭೆ ಚುನಾವಣೆಗೆ ಮತದಾನದ ಕುತುರಿ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿವೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಟಿಕೆಟ್ ಖರೀದಿಸುವ ಪ್ರಯಾಣಿಕರು ಪ್ರತಿ ಟಿಕೆಟ್‌ನ ಕೊನೆಯಲ್ಲಿ ಕನ್ನಡದಲ್ಲಿ ಮತದಾನದ ಕುರಿತ ಸಂದೇಶವನ್ನು ಓದಬಹುದು.

"ಮೇ 10 ರಂದು ಮತದಾನ ಮಾಡಲು ಮರೆಯಬೇಡಿ. ಮತದಾನ ನಿಮ್ಮ ಹಕ್ಕು" ಎಂದು ಕೆಎಸ್‌ಆರ್‌ಟಿಸಿ ಟಿಕೆಟ್‌ನಲ್ಲಿ ಬರೆದಿದ್ದರೆ, ಬಿಎಂಟಿಸಿಯ ಟಿಕೆಟ್‌ನಲ್ಲಿ " ಮೇ 10 ರಂದು ತಪ್ಪದೇ ಮತದಾನ ಮಾಡಿ. ಮತದಾನ ನಮ್ಮೆಲ್ಲರ ಹಕ್ಕು" ಎಂದು ಬರೆಯಲಾಗಿದೆ. ಈ ಮೂಲಕ ಬಸ್‌ಗಳಲ್ಲಿ ಪ್ರತಿದಿನ ಸಂಚರಿಸುವ ಲಕ್ಷಾಂತರ ಪ್ರಯಾಣಿಕರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ನಿಗಮಗಳು ಪ್ರಯತ್ನಿಸುತ್ತಿವೆ.
ಮತದಾನ ಜಾಗೃತಿ ಬಗ್ಗೆ ಕೆಎಸ್‌ಆರ್‌ಟಿಸಿ ಎಂಡಿ ಅನ್ಬು ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿ, "ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕಸ ಸಂಗ್ರಹಿಸಲು ಪ್ರತಿ ಬೀದಿಗೆ ಹೋಗುವ ಆಟೋ-ಟಿಪ್ಪರ್‌ಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸುವ ಮೂಲಕ ಬೆಂಗಳೂರಿಗರಲ್ಲಿ ಮತದಾನದ ಜಾಗೃತಿ ಮೂಡಿಸುತ್ತಿದೆ" ಎಂದು ಹೊಸ ವಿಷಯವನ್ನು ತಿಳಿಸಿದ್ದಾರೆ.
ಪ್ರತಿದಿನ 20 ಲಕ್ಷಕ್ಕೂ ಹೆಚ್ಚು ಜನರು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳನ್ನು ಬಳಸುತ್ತಾರೆ. ಮತದಾನದ ಮಹತ್ವದ ಬಗ್ಗೆ ನಮ್ಮ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ನಾವು ಬಯಸುತ್ತೇವೆ. ಕಾಗದದ ಟಿಕೆಟ್‌ಗಳ ಮೇಲೆ ಈ ಬಗ್ಗೆ ಜಾಗೃತಿ ಅಭಿಯಾನ ನಡೆಸಲು ಪ್ರಾರಂಭಿಸಿದ್ದೇವೆ, ಜನರನ್ನು ಮತ ಚಲಾಯಿಸುವಂತೆ ತಿಳಿಸುತ್ತೇವೆ ಎಂದಿದ್ದಾರೆ.
"ಮತದಾನ ಜಾಗೃತಿ ಅಭಿಯಾನದ ಭಾಗವಾಗಿರುವುದಕ್ಕೆ ನಮಗೆ ಸಂತೋಷವಾಗಿದೆ. ಮತದಾನ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ ಮತ್ತು ಅವರ ಹಕ್ಕು ಚಲಾಯಿಸುವುದನ್ನು ನೆನಪಿಸುವುದು ನಮ್ಮ ಕರ್ತವ್ಯವಾಗಿದೆ. ಮತದಾರರಲ್ಲಿ ಚುನಾವಣೆ ಕುರಿತು ಜಾಗೃತಿ ಮೂಡಿಸಲು ಬಸ್ ನಿಗಮ ತನ್ನ ಕೈಲಾದ ಪ್ರಯತ್ನ ಮಾಡುತ್ತಿದೆ. ಚುನಾವಣೆ ಮುಗಿಯುವವರೆಗೂ ಮತದಾನ ಜಾಗೃತಿ ಅಭಿಯಾನ ನಡೆಯಲಿದೆ" ಕೆಎಸ್‌ಆರ್‌ಟಿಸಿ ಎಂಡಿ ಅನ್ಬು ಕುಮಾರ್ ಹೇಳಿದ್ದಾರೆ.












Click it and Unblock the Notifications