ಕರ್ನಾಟಕ ಚುನಾವಣೆ; ನಾನೇ ಕಿಂಗ್ ಮೇಕರ್‌ ಎಂದ ಜನಾರ್ದನ ರೆಡ್ಡಿ!

ಬಾಗಲಕೋಟೆ, ಏಪ್ರಿಲ್ 03; ಕರ್ನಾಟಕದ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಮೇ 10ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ರ ಶನಿವಾರ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿಯ ಚುನಾವಣೆಯಲ್ಲಿ ಕುತೂಹಲ ಕೆರಳಿಸಿರುವುದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ರಾಜಕೀಯ ಪಕ್ಷ ಸ್ಥಾಪನೆ ಮಾಡಿ ಈ ಬಾರಿಯ ಚುನಾವಣೆಯನ್ನು ಫುಟ್‌ಬಾಲ್ ಗುರುತಿನ ಮೂಲಕ ಎದುರಿಸುತ್ತಿದ್ದಾರೆ ಜನಾರ್ದನ ರೆಡ್ಡಿ. ಬಿಜೆಪಿಯ ಮತಗಳನ್ನು ಸೆಳೆಯುವ ಮೂಲಕ ಪಕ್ಷಕ್ಕೆ ಜನಾರ್ದನ ರೆಡ್ಡಿ ಹಿನ್ನಡೆ ಉಂಟು ಮಾಡಲಿದ್ದಾರೆ ಎಂಬ ಲೆಕ್ಕಾಚಾರವಿದೆ. ಇಂತಹ ಸಂದರ್ಭದಲ್ಲಿ ಅವರ ಹೇಳಿಕೆಯೊಂದು ವೈರಲ್‌ ಆಗಿದೆ.

Karnataka Elections 2023: I Will Be A King Maker Says Janardhana Reddy

ಸೋಮವಾರ ಜನಾರ್ದನ ರೆಡ್ಡಿ ಬಾಗಲಕೋಟೆಯ ಕೂಡಲಸಂಗಮಕ್ಕೆ ಭೇಟಿ ನೀಡಿದರು. ವಚನಕಾರ ಬಸವಣ್ಣನವರ ಐಕ್ಯಸ್ಥಳ ಹಾಗೂ ಕೂಡಲಸಂಗಮೇಶ್ವರ ದೇವಾಲಯಕ್ಕೆ ತೆರಳಿ ಲೋಕಕಲ್ಯಾಣಾರ್ಥ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದರು.

"ಯಾವುದೇ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ನಮ್ಮ ಪಕ್ಷ ಅನಿವಾರ್ಯವಾಗಿದೆ. ನಾನು ಈ ಮಾತನ್ನು ಬಹಿರಂಗವಾಗಿಯೇ ಹೇಳಿದ್ದೇನೆ. ಆ ಮಟ್ಟಕ್ಕೆ ಜನರ ಆಶೀರ್ವಾದ ನಮ್ಮ ಪಕ್ಷಕ್ಕೆ ಸಿಗುತ್ತದೆ. ನಮ್ಮನ್ನು ಬಿಟ್ಟು ಸರ್ಕಾರ ಮಾಡುವ ಪರಿಸ್ಥಿತಿಯಲ್ಲಿ ಯಾರೂ ಇರಲಿಕ್ಕಿಲ್ಲ ಎಂದು ಸ್ಪಷ್ಟವಾಗಿ ಕಾಣುತ್ತಿದೆ, ಆ ವಿಶ್ವಾಸವೂ ನನ್ನಲ್ಲಿ ಇದೆ" ಎಂದು ಜನಾರ್ದನ ರೆಡ್ಡಿ ಹೇಳಿದರು.

Karnataka Elections 2023: I Will Be A King Maker Says Janardhana Reddy

"ಹಿಂದೆ ಕೆಲವರು ನನ್ನನ್ನು ಪುಟ್ಬಾಲ್‌ನಂತೆ ಬಳಸಿಕೊಂಡರು. ನನ್ನವರು ಎಂದು ನಂಬಿ ರಾಜಕಾರಣ ಮಾಡಿದೆ. ಅದನ್ನೇ ಕೆಲವರು ದುರುಪಯೋಗ ಮಾಡಿಕೊಂಡರು. ಕೆಲ ನಾಯಕರು ನನ್ನನ್ನು ಸಮಸ್ಯೆಗೆ ಸಿಲುಕಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಅವರಿಗೆ ಪುಟ್ಬಾಲ್ ಮಾದರಿಯಲ್ಲಿ ಆಡಿ ಜನರು ತಕ್ಕಪಾಠ ಕಲಿಸುತ್ತಾರೆ" ಎಂದು ಜನಾರ್ದನ ರೆಡ್ಡಿ ತಿಳಿಸಿದರು.

"ನನಗೆ ವಿಶ್ವಾಸವಿದೆ, ಇದು ನನ್ನ ಮೊದಲ ಹೆಜ್ಜೆ ಆಗಿರಬಹುದು. ಆದರೆ ಖಂಡಿತವಾಗಿಯೂ ನಾನು ಇತರ ಪಕ್ಷಗಳಿಗೆ ಅನಿವಾರ್ಯ ಆಗುತ್ತೇನೆ. ನಮ್ಮನ್ನು ಬಿಟ್ಟು ಯಾರೂ ಸಹ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ" ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

30 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ; ಭಾನುವಾರ ಹಾಸನದಲ್ಲಿ ಮಾತನಾಡಿದ್ದ ಜನಾರ್ದನ ರೆಡ್ಡಿ, "ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಗಳನ್ನು 50 ಕ್ಷೇತ್ರಗಳಲ್ಲಿ ಕಣಕ್ಕಿಳಿಸಲಾಗುತ್ತಿದೆ. 30ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವ ವಿಶ್ವಾಸವಿದೆ. ಆದ್ದರಿಂದ ಚುನಾವಣೆ ಬಳಿಕ ಸರ್ಕಾರ ರಚನೆಯಲ್ಲಿ ನಮ್ಮ ಪಕ್ಷ ನಿರ್ಣಾಯಕ ಪಾತ್ರ ವಹಿಸಲಿದೆ" ಎಂದು ಹೇಳಿದ್ದರು.

"ನನ್ನನ್ನು ರಾಜಕೀಯವಾಗಿ ಮುಗಿಸಲು ಬಂದವರನ್ನು ಮುಂದಿನ ದಿನಗಳಲ್ಲಿ ರಾಜಕೀಯವಾಗಿಯೇ ಎದುರಿಸುತ್ತೇನೆ. ಜನರ ಸೇವೆ ಮಾಡಲು ಆದ್ಯತೆ ನೀಡುತ್ತೇನೆ. ಈ ತೀರ್ಮಾನ ಕೈಗೊಳ್ಳಲು ನಾನು 12 ವರ್ಷಗಳ ಸಮಯ ತೆಗೆದುಕೊಂಡಿದ್ದೇನೆ. ಇಟ್ಟ ಹೆಜ್ಜೆಯನ್ನು ಯಾವುದೇ ಕಾರಣಕ್ಕೂ ಹಿಂದೆ ತೆಗೆದುಕೊಳ್ಳುವುದಿಲ್ಲ" ಎಂದು ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದರು.

"ಹಿತ ಶತ್ರುಗಳ ಕುತಂತ್ರಕ್ಕೆ ಒಳಗಾಗಿ ನಾನು 12 ವರ್ಷಗಳ ಕಾಲ ರಾಜಕೀಯ ಸನ್ಯಾಸತ್ವವನ್ನು ತೆಗೆದುಕೊಳ್ಳುವ ಪರಿಸ್ಥಿತಿ ಬಂತು, ಜೈಲುವಾಸವನ್ನೂ ಅನುಭವಿಸಬೇಕಾಯಿತು. ಯಾವುದೇ ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳಲು ನಾನು ಮತ್ತೆ ರಾಜಕೀಯಕ್ಕೆ ಬಂದಿಲ್ಲ. ನನ್ನಿಂದ ಜನರಿಗೆ ಕೈಲಾದ ಸೇವೆ ಮಾಡಲು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿದ್ದೇನೆ. ನಮ್ಮ ಪಕ್ಷದಿಂದ ಹಲವಾರು ಪ್ರಗತಿಪರ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಸ್ವ ಪ್ರಯತ್ನದಿಂದ ತಳ ಮಟ್ಟದಿಂದ ಪಕ್ಷವನ್ನು ಕಟ್ಟುತ್ತೇನೆ. ಯಾವುದೇ ಪಕ್ಷದ ನಾಯಕರನ್ನು ಸಹ ಪಕ್ಷಕ್ಕೆ ಆಹ್ವಾನಿಸುವುದಿಲ" ಎಂದರು.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅವರ ಪತ್ನಿ ಲಕ್ಷ್ಮೀ ಅರುಣಾ ಸಹ ಚುನಾವಣಾ ಕಣಕ್ಕೆ ಇಳಿಯಲಿದ್ದು, ಬಳ್ಳಾರಿ ನಗರದಿಂದ ಅಭ್ಯರ್ಥಿಯಾಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+