ವಿಧಾನಸಭಾ ಚುನಾವಣೆಗೆ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಘೋಷಿಸಿರುವ ಈ ಗ್ಯಾರಂಟಿಗಳು ಸಾಕೆ?
ಬೆಂಗಳೂರು, ಏಪ್ರಿಲ್.24: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತಮ್ಮ ಚುನಾವಣಾ ಭರವಸೆಗಳನ್ನು ಪುನರುಚ್ಚರಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿರುವ ಕಾಂಗ್ರೆಸ್, ರಾಜ್ಯದಲ್ಲಿ ಸರ್ಕಾರ ರಚನೆಯ ನಂತರ ಭರವಸೆಯ ಯೋಜನೆಗಳನ್ನು ಶೀಘ್ರದಲ್ಲೇ ಜಾರಿಗೆ ತರುವುದಾಗಿ ಘೋಷಿಸಿದೆ.
ತಾವು ಘೋಷಿಸಿರುವ ಗ್ಯಾರಂಟಿಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾವು ಈ ಹಿಂದೆ ನಮ್ಮ ನಾಲ್ಕು ಚುನಾವಣಾ ಭರವಸೆಗಳನ್ನು ಘೋಷಿಸಿದ್ದೇವೆ . ನಮ್ಮ ಪಕ್ಷವು ಸರ್ಕಾರ ರಚಿಸಿದ ನಂತರ ಅವುಗಳನ್ನು ಖಂಡಿತ ಈಡೇರಿಸಲಿದೆ ಎಂದು ನಾನು ಭರವಸೆ ನೀಡುತ್ತೇನೆ. ಕರ್ನಾಟಕದಲ್ಲಿ ನಮ್ಮ ಗೆಲುವಿನ ಬಗ್ಗೆ ಯಾವುದೇ ಅನುಮಾನವಿಲ್ಲ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

*ಕಾಂಗ್ರೆಸ್ ಘೋಷಿಸಿರುವ ನಾಲ್ಕು ಭರವಸೆಗಳು ಹೀಗಿವೆ*
*ಗೃಹ ಜ್ಯೋತಿ ಯೋಜನೆ*
ಕಾಂಗ್ರೆಸ್ ಈ ವರ್ಷದ ಜನವರಿಯಲ್ಲಿ ತಮ್ಮ ಮೊದಲ ಭರವಸೆ ಎಂದು ಗೃಹ ಜ್ಯೋತಿ ಯೋಜನೆಯನ್ನು ಘೋಷಿಸಿತು. ನಂತರ ಪಕ್ಷವು, "ಬೆಲೆ ಏರಿಕೆಯ ವಿರುದ್ಧ ಹೋರಾಡಲು ಕನ್ನಡಿಗರಿಗೆ ಸಹಾಯ ಮಾಡಲು ಮತ್ತು ಆಹಾರ, ಮಕ್ಕಳಿಗೆ ಶಿಕ್ಷಣ ಮತ್ತು ಆರೋಗ್ಯದಂತಹ ಅಗತ್ಯ ವಸ್ತುಗಳನ್ನು ಉಳಿಸಲು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಿದೆ" ಎಂದಿದೆ.
*ಗೃಹ ಲಕ್ಷ್ಮೀ ಯೋಜನೆ*
ತನ್ನ ಎರಡನೇ ಚುನಾವಣಾ ಭರವಸೆಯಲ್ಲಿ, ಪಕ್ಷವು ಗೃಹ ಲಕ್ಷ್ಮೀ ಯೋಜನೆಯನ್ನು ಘೋಷಿಸಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಈ ಯೋಜನೆಯಡಿ ರಾಜ್ಯದ ಪ್ರತಿ ಗೃಹಿಣಿಯರಿಗೆ ತಿಂಗಳಿಗೆ 2,000 ರೂಪಾಯಿಗಳನ್ನು ನೀಡಲಾಗುತ್ತದೆ. ಈ ಯೋಜನೆಯಿಂದ 1.5 ಕೋಟಿ ಗೃಹಿಣಿಯರಿಗೆ ಅನುಕೂಲವಾಗಲಿದೆ. ಈ ಯೋಜನೆಯು ಕುಟುಂಬದ ಮುಖ್ಯಸ್ಥ ಮಹಿಳೆಗೆ ನೀಡಲಾಗುತ್ತದೆ.

*ಅನ್ನ ಭಾಗ್ಯ*
ಅನ್ನಭಾಗ್ಯ ಯೋಜನೆ ಕಾಂಗ್ರೆಸ್ ಸರ್ಕಾರವನ್ನು ಮತ್ತು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜನಪ್ರಿಯ ಮಾಡಿದ ಯೋಜನೆ. ಈ ಯೋಜನೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ಉತ್ತಮವಾಗಿ ಜಾರಿ ಮಾಡಲಾಗುತ್ತದೆ. 'ಅನ್ನ ಭಾಗ್ಯ' ಯೋಜನೆಯ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಜನರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.
*ಯುವ ನಿಧಿ*
ನಿರುದ್ಯೋಗದ ವಿರುದ್ಧ ಹೋರಾಡಲು,ಕಾಂಗ್ರೆಸ್ ಪಕ್ಷವು ಯುವ ನಿಧಿ ಯೋಜನೆಯನ್ನು ಘೋಷಿಸಿದೆ. ನಿರುದ್ಯೋಗಿ ಯುವಕರಿಗೆ ನೆರವಾಗಲು ಈ ಯೋಜನೆಯನ್ನು ಝಾರಿಗೆ ತರಲಾಗುತ್ತಿದೆ. ಯೋಜನೆ ಅಡಿಯಲ್ಲಿ ಪದವಿ ಪಡೆದಿರುವ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 3000 ರೂಪಾಯಿ ನೀಡಲಾಗುತ್ತದೆ. ಜೊತೆಗೆ ರಾಜ್ಯದಲ್ಲಿ ಡಿಪ್ಲೊಮಾ ಪದವಿ ಪಡೆದ ನಿರುದ್ಯೋಗಿಗಳಿಗೆ ಭತ್ಯೆಯಾಗಿ ಪ್ರತಿ ತಿಂಗಳು 1500 ರೂಪಾಯಿ ನೀಡಲಾಗುತ್ತದೆ.












Click it and Unblock the Notifications