#BJPvsBJP: ಕಟೀಲ್ ಕಾರು ಅಲ್ಲಾಡಿಸಿದ ಕಾರ್ಯಕರ್ತರೇ ಬಿಜೆಪಿಯ ಬುಡ ಅಲ್ಲಾಡಿಸುತ್ತಾರೆ ಎಂದ ಕಾಂಗ್ರೆಸ್
ಬೆಂಗಳೂರು, ಮಾರ್ಚ್ 30: ಬಿಜೆಪಿ ( BJP ) ಶಾಸಕರ ವಿರುದ್ದ ಪಕ್ಷದ ಕಾರ್ಯಕರ್ತರೇ ತಿರುಗಿಬಿದ್ದಿದ್ದು, Go back ಎನ್ನುತ್ತಿರುವುದೇ ಇದಕ್ಕೆ ಉದಾಹರಣೆ ಎಂದು ಕಾಂಗ್ರೆಸ್ ಹೇಳಿದೆ. #BJPvsBJP ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಘಟಕವು ರಾಜ್ಯ ಬಿಜೆಪಿಯನ್ನು ಟೀಕಿಸಿದೆ.
'ಹಿಂದೆ ನಳೀನ್ ಕುಮಾರ್ ಕಟೀಲ್ ಅವರ ಕಾರು ಅಲ್ಲಾಡಿಸಿದ ಬಿಜೆಪಿ ಕಾರ್ಯಕರ್ತರೇ ಈಗ ಚುನಾವಣೆಯಲ್ಲಿ ಬಿಜೆಪಿಯ ಬುಡ ಅಲ್ಲಾಡಿಸುತ್ತಾರೆ. #40PercentSarkara ದ ಮೇಲೆ ಸ್ವತಃ ಬಿಜೆಪಿ ಕಾರ್ಯಕರ್ತರಿಗೇ ಅಸಹ್ಯ ಹುಟ್ಟಿದೆ. ಹಲವು ಬಿಜೆಪಿ ಶಾಸಕರ ವಿರುದ್ಧ ಕಾರ್ಯಕರ್ತರು ತಿರುಗಿಬಿದ್ದಿದ್ದು, Go back ಎನ್ನುತ್ತಿರುವುದೇ ಇದಕ್ಕೆ ಉದಾಹರಣೆ' ಎಂದು ಕೆಪಿಸಿಸಿ ಹೇಳಿದೆ.

'ಗೌರವಾನ್ವಿತ ಯಡಿಯೂರಪ್ಪನವರೇ, ನಿಮ್ಮನ್ನು ಜೈಲಿಗೆ ಕಳುಹಿಸಿದ್ದು, ಪಕ್ಷದಿಂದ ಹೊರಹಾಕಿದ್ದು, ಕಣ್ಣೀರು ಹಾಕಿಸಿ ಅಧಿಕಾರ ಕಿತ್ತುಕೊಂಡು ಕಡ್ಡಾಯ ನಿವೃತ್ತಿಗೆ ನೂಕಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್ ಪಕ್ಷವಲ್ಲ. ಈಗ ನಿಮ್ಮ ಪುತ್ರನ ಮೇಲಿನ ಪ್ರಕರಣಗಳನ್ನು ಮುಂದಿಟ್ಟುಕೊಂಡು ನಿವೃತ್ತಿಯಾಗಿರುವ ನಿಮ್ಮನ್ನು ಮುಂದೆ ಬಿಟ್ಟಿದೆ' ಎಂದೂ ಕೆಪಿಸಿಸಿ ಹೇಳಿದೆ.
'ಚುನಾವಣಾ ಫಲಿತಾಂಶ ಏನೇ ಇರಲಿ, ಚುನಾವಣೆಯ ಬಳಿಕ ಬಿಜೆಪಿ ನಿಮ್ಮನ್ನು ನೋಡಿಕೊಳ್ಳುವ ರೀತಿ ಹೇಗೆನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಹೀಗಿರುವಾಗ ನಿಮಗೆ ಹಾಗು ರಾಜ್ಯಕ್ಕೆ ಇಷ್ಟೊಂದು ಅನ್ಯಾಯ ಎಸಗಿರುವವರ ಕಾಲ ಕೆಳಗೆ ರಾಜ್ಯದ ಸ್ವಾಭಿಮಾನವನ್ನು ಒಪ್ಪಿಸಲು ನೀವು ಶ್ರಮಿಸುತ್ತಿರುವುದು ರಾಜ್ಯಕ್ಕೆ ಬಗೆಯುವ ದ್ರೋಹವಲ್ಲವೇ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

'ಆರ್. ಅಶೋಕ್ ಅವರಿಗೆ - Go back, ವಿ. ಸೊಮ್ಮಣ್ಣರಿಗೆ - Go back, ಅರುಣ್ ಸೋಮಣ್ಣರಿಗೆ - Go back, ನಳಿನ್ ಕಟೀಲರಿಗೆ - Go back, ಇದು ಬಿಜೆಪಿ ಕಾರ್ಯಕರ್ತರೇ ಬಿಜೆಪಿ ನಾಯಕರಿಗೆ ತೋರಿದ ಪ್ರೀತಿಯ ನಿದರ್ಶನಗಳು.ಈ ಚುನಾವಣೆಯಲ್ಲಿ ಬಿಜೆಪಿಯನ್ನು ಅದರ ಕಾರ್ಯಕರ್ತರೇ ಒದ್ದೋಡಿಸುತ್ತಾರೆ' ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
'ಕಡುಭ್ರಷ್ಟ ಬಿಜೆಪಿ ಸರ್ಕಾರದ ದುರಾಡಳಿತ ಅಂತ್ಯವಾಗಿದೆ, ಚುನಾವಣೆಯ ನಂತರ ಕರ್ನಾಟಕದಿಂದ ಬಿಜೆಪಿ ತೊಲಗಿ ರಾಜ್ಯಕ್ಕೆ ಭರವಸೆಯ ದಿನಗಳು ಶುರುವಾಗುವುದು ನಿಶ್ಚಿತ. ಭ್ರಷ್ಟಾಚಾರದ ಮಹಾಪರ್ವತವನ್ನೇ ಹೊತ್ತಿರುವ ಬಿಜೆಪಿ ಚುನಾವಣೆಯಲ್ಲಿ ಹೇಳ ಹೆಸರಿಲ್ಲದಂತೆ ಧೂಳಿಪಟವಾಗಿವುದು ನಿಶ್ಚಿತ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ' ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.

#BJPvsBJP ಕಿತ್ತಾಟವು ಬಂಡಾಯ ಪರ್ವವಾಗಿ ಬದಲಾಗಿದೆ. ಬಿಜೆಪಿಯ ಸಾಲು ಸಾಲು ಶಾಸಕರು, ಸಚಿವರ ವಿರುದ್ಧ ಅವರ ಕಾರ್ಯಕರ್ತರೇ ತಿರುಗಿಬಿದ್ದಿದ್ದಾರೆ. ಇದು ಆಕ್ರೋಶವು ಸರ್ಕಾರದ ವೈಫಲ್ಯಕ್ಕಾಗಿಯೋ, ಶಾಸಕರ ವೈಫಲ್ಯಕ್ಕಾಗಿಯೋ ಬಿಜೆಪಿ? ಸ್ವಂತ ಕಾರ್ಯಕರ್ತರನ್ನೇ ಮೆಚ್ಚಿಸಲಾಗದ ಬಿಜೆಪಿ ಜನಸಾಮಾನ್ಯರನ್ನು ಮೆಚ್ಚಿಸಲು ಸಾಧ್ಯವೇ? ಎಂದು ಕೆಪಿಸಿಸಿ ಪ್ರಶ್ನಿಸಿದೆ.
ಹಿಂದಿ ಹೇರಿಕೆ ಸಲ್ಲ
'ಕರ್ನಾಟಕದಲ್ಲಿ ಮಾರಾಟವಾಗುವ ನಂದಿನಿ ಮೊಸರಿನ ಪಾಕೆಟ್ ಮೇಲೆ ಹಿಂದಿಯಲ್ಲಿ ಕಡ್ಡಾಯವಾಗಿ 'ದಹಿ' ಎಂದು ಹಾಕಬೇಕೆಂಬ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆದೇಶ ಮೂರ್ಖತನದ ಪರಮಾವಧಿ. ನಿಧಾನವಾಗಿ ನಂದಿನಿಯನ್ನು ಅಮುಲ್ ಜೊತೆ ವಿಲೀನಗೊಳಿಸುವ ಹುನ್ನಾರ. ಈ ರೀತಿಯ ಹಿಂದಿ ಹೇರಿಕೆ ಸಲ್ಲ. ಇದನ್ನು ನಾವು ವಿರೋಧಿಸುತ್ತೇವೆ. ಈ ಆದೇಶವನ್ನು ಕೇಂದ್ರ ಸರ್ಕಾರ ಈ ಕೂಡಲೇ ಹಿಂಪಡೆಯಬೇಕು' ಎಂದು ಕೆಪಿಸಿಸಿ ಒತ್ತಾಯಿಸಿದೆ.












Click it and Unblock the Notifications