ಬಿಜೆಪಿಯ ಪ್ರಭಾವಿ ನಾಯಕರ ಮಹಾಕೋಪಕ್ಕೆ ಗುರಿಯಾದ ಬಿಎಲ್ ಸಂತೋಷ್ ಹೊಸ ಪ್ರಯೋಗಗಳು
ಬೆಂಗಳೂರು, ಏಪ್ರಿಲ್ 24: ಕರ್ನಾಟಕದ ಚುನಾವಣೆಗೂ ಮುನ್ನ ರಾಜ್ಯದಾದ್ಯಂತ ಹೆಚ್ಚು ಪ್ರಚಲಿತದಲ್ಲಿರುವ ಹೆಸರು ಬಿಎಲ್ ಸಂತೋಷ್. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಆಗಿರುವ ಅವರು ಹೊಸ ಪ್ರಯೋಗಳಿಗೆ ಕೈಹಾಕಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ 70 ಕ್ಕೂ ಹೆಚ್ಚು ಹೊಸ ಮುಖಗಳಿಗೆ ಟಿಕೆಟ್ ಕೊಡಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಇದು ಪಕ್ಷದ ಪ್ರಭಾವಿ ನಾಯಕರ ಆಕ್ರೋಶಕ್ಕೆ ಗುರಿಯಾಗಿದೆ.
ಪಕ್ಷದ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಮತ್ತು ಕೆಎಸ್ ಈಶ್ವರಪ್ಪ ಅವರಿಗೆ ವಿಶ್ರಾಂತಿ ನೀಡಲು ಬಿಜೆಪಿ ತೀರ್ಮಾಣಿಸಿದೆ. ಈ ನಿರ್ಧಾರದ ಹಿಂದೆ ಬಿಎಲ್ ಸಂತೋಷ್ ಅವರು ಇರುವುದು ಗೊತ್ತಾಗಿದೆ.
2018 ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್ ನಿರಾಕರಿಸುವುದಕ್ಕೂ ಸಂತೋಷ್ ಕಾರಣ ಎನ್ನಲಾಗುತ್ತಿದೆ.

ಯಡಿಯೂರಪ್ಪ ಮತ್ತು ಸಂತೋಷ್ ಅವರ ನಡುವೆ ದಶಕದ ಹಿಂದೆಯೇ ಸಂಘರ್ಷ ಶುರುವಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಆಶ್ಚರ್ಯಕರವಾಗಿ ಯಡಿಯೂರಪ್ಪ ಈಗ ಸಂತೋಷ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ ಮತ್ತು ಅವರ ವಿರುದ್ಧದ ಹೇಳಿಕೆಗಳನ್ನು ಖಂಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಸಿಎಂ ಆಗುವುದಕ್ಕೂ ಮೊದಲು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನೆ) ಕಾರ್ಯನಿರ್ವಹಿಸುತ್ತಿದ್ದರು. ಈಗ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಬಿಎಲ್ ಸಂತೋಷ್ ಅವರು ಕರ್ನಾಟಕದ ಸಿಎಂ ಆಗುವ ಮಹತ್ವಾಕಾಂಕ್ಷೆಯಲ್ಲಿದ್ದಾರೆ ಎಂದು ಹೇಳಲಾಗಿದೆ.
ಹಿಂಬಾಗಿಲಿನಿಂದ ಸಿಎಂ ಹುದ್ದೆಯನ್ನು ಅಲಂಕರಿಸಲು ಬಿಎಲ್ ಸಂತೋಷ್ ಬಯಸಿದ್ದಾರೆ. ಅವರು ಪಕ್ಷವನ್ನು ಬಲಪಡಿಸುವ ನೆಪದಲ್ಲಿ ಇದನ್ನು ಸಾಧಿಸುತ್ತಿದ್ದಾರೆ ಎಂದು ಅವರ ವಿರೋಧಿ ಬಿಜೆಪಿ ಬಣ ಹೇಳುತ್ತಿದೆ. ಸಂತೋಷ್ ಅವರು ಬಿಜೆಪಿ ಭವಿಷ್ಯಕ್ಕಾಗಿ ಹೊಸ ತಲೆಮಾರಿನ ನಾಯಕರನ್ನು ರೂಪಿಸುತ್ತಿದ್ದಾರೆ. ಅವರಿಗೆ ಅಧಿಕಾರದ ಬಗ್ಗೆ ಆಸಕ್ತಿ ಇಲ್ಲ ಎಂದು ಅವರ ಪರವಾಗಿರುವವರು ಹೇಳುತ್ತಾರೆ.
ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಬಿಜೆಪಿಯ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಂತೋಷ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೇಸರಿ ಪಕ್ಷದಿಂದ ಹೊರಬರಲು ಸಂತೋಷ್ ಅವರೇ ಕಾರಣ ಎಂದು ಹೇಳಿದ್ದಾರೆ. ಬಿಜೆಪಿ ಒಂದರ ಹಿಂದೆ ಒಂದರಂತೆ ಸ್ಥಾನಗಳನ್ನು ಕಳೆದುಕೊಳ್ಳುತ್ತಿದೆ. ಹೀಗಾದರೆ, ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಶೆಟ್ಟರ್ ತಿಳಿಸಿದ್ದಾರೆ.
ಈ ಹಿಂದೆ ಸಂತೋಷ್ ಅವರನ್ನು ಬೇರೆ ರಾಜ್ಯಗಳ ಚುನಾವಣಾ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು, ಆದರೆ ಬಿಜೆಪಿ ಎಲ್ಲೂ ಗೆಲ್ಲಲು ಸಾಧ್ಯವಾಗಲಿಲ್ಲ. ಈ ನಡುವೆಯೂ ಅವರಿಗೆ ಕರ್ನಾಟಕದ ಉಸ್ತುವಾರಿ ನೀಡಲಾಗಿದೆ. ರಾಜ್ಯದಲ್ಲಿ ಪಕ್ಷ ಸೋಲಲು ಈ ರೀತಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಒಬ್ಬ ವ್ಯಕ್ತಿ ಪ್ರಾಮುಖ್ಯತೆ ಪಡೆದಿದ್ದಾರೆ ಮತ್ತು ಅವನು ಎಲ್ಲವನ್ನೂ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ತಮ್ಮ ಪರವಾಗಿಲ್ಲದವರನ್ನು ಸಂತೋಷ್ ನಿರ್ದಯವಾಗಿ ತುಳಿಯುತ್ತಾರೆ. ಅವರ ಆಪ್ತರಾದ ಮಹೇಶ್ ಟೆಂಗಿನಕಾಯಿ ಅವರಿಗೆ ಬಿಜೆಪಿಯಲ್ಲಿ ನನ್ನ ಕ್ಷೇತ್ರದ ಟಿಕೆಟ್ ಸಿಕ್ಕಿದೆ, ಅವರಿಗೆ ಈ ಟಿಕೆಟ್ ಕೊಡಿಸಲು ಸಂತೋಷ್ ನನ್ನನ್ನು ಅವಮಾನಿಸಿ ಹೊರಹಾಕಿದ್ದಾರೆ ಎಂದು ಶೆಟ್ಟರ್ ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿಯನ್ನು ಮುಗಿಸಲು ಷಡ್ಯಂತ್ರ ನಡೆಯುತ್ತಿದೆ. ಯಡಿಯೂರಪ್ಪ ಕೂಡ ಅಸಹಾಯಕರಾಗಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ ಉಸಿರುಗಟ್ಟಿಸುವ ಸ್ಥಿತಿ ಇದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂತೋಷ್ ಅವರ ನಿಕಟವರ್ತಿ. ಕಟೀಲ್ ಸಂತೋಷ್ ಅವರ ನಿರ್ದೇಶನದಂತೆ ನಡೆದುಕೊಳ್ಳುತ್ತಾರೆ ಎಂದು ಶೆಟ್ಟರ್ ಆರೋಪಿಸಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಪ್ರಧಾನಿ ಮೋದಿಯವರ ಗಮನಕ್ಕೆ ತಂದಿಲ್ಲ ಎಂದು ಬಿಜೆಪಿಯ ಹಿರಿಯ ಮುಖಂಡ ಪ್ರಭಾಕರ ಕೋರೆ ಹೇಳಿದ್ದಾರೆ. ಲಿಂಗಾಯತ ಸಮುದಾಯದ ನಾಯಕತ್ವವನ್ನು ಕೊನೆಗಾಣಿಸಬಹುದೆಂದು ಅವರು ಭಾವಿಸಿದರೆ ಅದು ಅಸಾಧ್ಯ ಎಂದು ಅವರು ತಿಳಿಸಿದ್ದಾರೆ. ಕೋರೆ ಕೂಡ ಪಕ್ಷ ತೊರೆಯುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬಿಎಲ್ ಸಂತೋಷ್ ಹಾಗೂ ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಒಟ್ಟಾಗಿ ರಾಜ್ಯ ರಾಜಕೀಯದಲ್ಲಿ ಮೇಲುಗೈ ಸಾಧಿಸಲು ಯೋಜನೆ ರೂಪಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ಈಗ ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರನ್ನು ಬದಿಗೆ ಸರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಜಿ ಉಪ ಸಿಎಂ ಆರ್.ಅಶೋಕ್ ಅವರಿಗೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಮಾಡಲಾಗಿದೆ. ಮತ್ತೊಬ್ಬ ಹಿರಿಯ ಲಿಂಗಾಯತ ನಾಯಕ ವಿ.ಸೋಮಣ್ಣ ಅವರಿಗೆ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಒತ್ತಾಯ ಹೇರಲಾಗಿದೆ.
ಸಿಎಂ ಸ್ಥಾನಕ್ಕೆ ಸ್ಪರ್ಧಿಯಾಗಿರುವ ಈ ಮುಂಚೂಣಿ ನಾಯಕರನ್ನು ಪಕ್ಷದಿಂದ ದೂರವಿಟ್ಟರೆ ಅಥವಾ ಹೊರಹಾಕಿದರೆ, ಕರ್ನಾಟಕದಲ್ಲಿ ಸಂತೋಷ್ ಮತ್ತು ಜೋಶಿ ವಿರುದ್ಧ ಧ್ವನಿ ಎತ್ತುವವರೇ ಇರುವುದಿಲ್ಲ ಎಂದು ಮೂಲಗಳು ವಿವರಿಸಿವೆ.












Click it and Unblock the Notifications