jagadish shettar: ದಿ.ಅನಂತಕುಮಾರ್ ಪತ್ನಿ ತೇಜಸ್ವಿನಿಗೆ ಟಿಕೆಟ್ ತಪ್ಪಿಸಿದ್ದು ಯಾರು ಎಂಬ ಸತ್ಯ ಬಿಚ್ಚಿಟ್ಟ ಜಗದೀಶ್ ಶೆಟ್ಟರ್
ಹುಬ್ಬಳ್ಳಿ, ಏಪ್ರಿಲ್ 29: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನಲೆ ಬಿಜೆಪಿಗೆ ಗುಡ್ ಬೈ ಹೇಳಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ದಿ.ಅನಂತಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ಕೈ ತಪ್ಪಿದ್ದು ಯಾರಿಂದ ಎಂಬ ಸತ್ಯವನ್ನ ಬಿಚ್ಚಿಟ್ಟಿದ್ದಾರೆ.
ಹೌದು, ಬಿ.ಎಲ್.ಸಂತೋಷ ಅವರೇ ತೇಜಸ್ವಿನಿ ಅನಂತಕುಮಾರ ಅವರಿಗೆ ಟಿಕೆಟ್ ಕೈತಪ್ಪಿಸಿದ್ದಾರೆ. ಸದ್ಯ ಲಿಂಗಾಯತ ನಾಯಕತ್ವವಿಲ್ಲದೇ ಸರ್ಕಾರ ಮಾಡುತ್ತೇವೆ ಎಂದು ಹೊರಟ್ಟಿದ್ದಾರೆ ಎಂದು ಬಿ ಎಲ್ ಸಂತೋಷ್ ವಿರುದ್ದವಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿ.ಎಲ್.ಸಂತೋಷ ಅವರಿಗೆ ನೇರವಾಗಿ ಯುದ್ದ ಮಾಡುವ ಸ್ವಭಾವವಿಲ್ಲ. ಹಿಂಬಾಗಿಲ ಮೂಲಕ ರಾಜಕೀಯ ಮಾಡುವುದೇ ಅವರ ಸ್ವಭಾವ. ಅವರ ಕುತಂತ್ರದ ಬಗ್ಗೆ ರಾಷ್ಟ್ರದಲ್ಲಿ ಮೊದಲು ಧ್ವನಿ ಎತ್ತಿದವನೇ ನಾನು. ಇದಕ್ಕಾಗಿ ಬಹಳಷ್ಟು ಜನರು ಫೋನ್ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ನಾನು ಯಾರ ಬಳಿಯೂ ಯಾವುದೇ ಲಾಬಿ ಮಾಡಿ, ಕೈಕಾಲು ಹಿಡಿದು ರಾಜಕಿಯ ಮಾಡಿದವನು ನಾನಲ್ಲ. ನನ್ನ ವಿರುದ್ದ ನನ್ನ ಸೋಲಿಸಲು ಸಚ್ಚು ರೂಪಿಸುತ್ತಿದ್ದಾರೆ. ಆದರೆ ಹುಬ್ಬಳ್ಳಿ ಜನತೆ ನನ್ನ ಯಾವತ್ತಿಗೂ ಕೈ ಬಿಡಲ್ಲ ಎಂದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಸಾಕಷ್ಟು ಜನರು ನನ್ನ ವಿರುದ್ದ ಹೇಳಿಕೆಯನ್ನ ನೀಡುತ್ತಿದ್ದಾರೆ. ಕೆ.ಎಸ್.ಈಶ್ವರಪ್ಪ ಹಾಗೂ ಬಿ.ಎಸ್.ಯಡಿಯೂರಪ್ಪ ಯಾರೇ ನನಗೆ ಬೈದರೂ ಅದನ್ನು ನಾನು ಆಶೀರ್ವಾದ ಎಂದು ತೆಗೆದುಕೊಳ್ಳತ್ತೇನೆ. ಇನ್ನೊಬ್ಬರ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುವುದನ್ನು ಬಿ.ಎಲ್.ಸಂತೋಷ ಬಿಡಬೇಕು. ನೇರವಾಗಿ ನನ್ನ ಜೊತೆಗೆ ಯುದ್ದಕ್ಕೆ ಬರಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸವಾಲ್ ಹಾಕಿದರು.
ಇನ್ನೂ ನಾನು ಪಕ್ಷದಿಂದ ಹೊರಗೆ ಬಂದ ಮೇಲೆ ಇದೀಗ ಬಿಜೆಪಿಯವರಿಗೆ ಐಡಿಯಾಲಜಿ ನೆನಪಾಗಿದೆ. ಕಾಂಗ್ರೆಸ್ ಐಡಿಯಾಲಜಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ, ಈ ಹಿಂದೆ ಆಪರೇಷನ್ ಕಮಲ ಮಾಡಿ ಕಾಂಗ್ರೆಸ್‌ನವರನ್ನು ಕರೆತಂದು ಸರ್ಕಾರ ಮಾಡಿದಾಗ ಇವರ ಐಡಿಯಾಲಜಿ ಎಲ್ಲಿ ಹೋಗಿತ್ತು? ಎಂದು ಬಿಜೆಪಿ ನಾಯಕರನ್ನ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಐಡಿಯಾಲಜಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲಾ. ಕ್ರಿಮಿನಲ್‌ಗಳಿಗೆ ಟಿಕೆಟ್ ಕೊಡುತ್ತಿರುವ ಬಿಜೆಪಿಯಲ್ಲಿ ಯಾವುದೇ ಐಡಿಯಾಲಜಿ ಉಳಿದಿಲ್ಲ. ಬಿಜೆಪಿ ನನಗೆ ಟೀಕಿಸಿದಷ್ಟು ನಾನು ಜಯದ ಹತ್ತಿರ ಹೋಗುತ್ತೇನೆ. ನಾನು ಎಲ್ಲವನ್ನೂ ಫೇಸ್ ಮಾಡುತ್ತಿದ್ದೇನೆ, ಈ ಬಾರಿ ನಾನು ಐತಿಹಾಸಿಕ ಗೆಲುವು ಸಾಧಿಸುತ್ತೇನೆ ಎಂದು ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲರೂ ಶೆಟ್ಟರ್'ಗೆ ಗೆಲ್ಲಿಸಿ ಎಂದು ಅಭಿಯಾನ ಮಾಡಿದ್ದಾರೇ, ಆದರೆ ಬಿಜೆಪಿಯವರ ಶೆಟ್ಟರ್ ಸೋಲಿಸಿ ಅಂತಾ ಅಭಿಯಾನ ಮಾಡುತ್ತಿದ್ದಾರೆ. ಜಗದೀಶ್ ಶೆಟ್ಟರ್ ಬಗ್ಗೆ ಜನರಲ್ಲಿ ಸಿಂಪಥಿ ಕ್ರಿಯೇಟ್ ಆಗಿದೆ. ಶೆಟ್ಟರ್'ಗೆ ಟಿಕೆಟ್ ಕೈತಪ್ಪಿದ್ದು ಅವರಿಗೆ ಮಾತ್ರವಲ್ಲಾ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಅಂತಾ ಅಂದುಕೊಂಡಿದ್ದಾರೆ. ಪಕ್ಷ ಬಿಟ್ಟು ಹೊರಗೆ ಹೋದ ಮೇಲೆ ಶೆಟ್ಟರ್ ಶಕ್ತಿ ಏನಂತಾ ಗೊತ್ತಾಗುತ್ತಿದೆ. ಹೀಗಾಗಿ ಅವರಿಗೆ ತಳಮಳ ಶುರುವಾಗಿದೆ.
ನನ್ನನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ಮಾಡಿದ್ದರು. ಸದ್ಯ ಕ್ಷೇತ್ರಕ್ಕೆ ಪ್ರತಿದಿನ ಒಬ್ಬರು ಬಂದು ಪ್ರಚಾರ ಮಾಡಿ, ಸುತ್ತಾಡಿ ಹೋಗುತ್ತಿದ್ದಾರೆ. ಇವರಿಗೆ ರಾಜ್ಯದ ಬೇರೆ ಕ್ಷೇತ್ರಗಳಲ್ಲಿನ ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಚಿಂತೆಯಿಲ್ಲ, ಕೇವಲ ಶೆಟ್ಟರ್ ಒಬ್ಬರನ್ನು ಸೋಲಿಸಲು ಬಿಜೆಪಿಯವರು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.












Click it and Unblock the Notifications