ABP C-Voter Opinion Poll Survey: ಬೊಮ್ಮಾಯಿ ಆಡಳಿತದ ಬಗ್ಗೆ ಜನಕ್ಕಿಲ್ಲ ಸಮಾಧಾನ: ಮೋದಿ ಆಡಳಿದ ಬಗ್ಗೆ ಏನಂದ್ರು ಜನ?
ರಾಜ್ಯ ಚುನಾವಣಾ ಕಣ ರಂಗೇರಿದೆ, ಮತದಾನಕ್ಕೆ ಕೆಲವೇ ದಿನಗಳಿರುವ ಸಂದರ್ಭದಲ್ಲಿ ರಾಜ್ಯ , ರಾಷ್ಟ್ರ ನಾಯಕರು ರಾಜ್ಯಕ್ಕೆ ಕಾಲಿಟ್ಟಿದ್ದು ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಹಲವು ಸಂಸ್ಥೆಗಳು, ಸುದ್ದಿ ವಾಹಿನಿಗಳು ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚಿನ ಸೀಟುಗಳನ್ನು ಗೆಲ್ಲುವುದಾಗಿ ಸೂಚನೆ ನೀಡಿವೆ. ಎಬಿಪಿ ನ್ಯೂಸ್ ಮತ್ತು ಸಿ ವೋಟರ್ ಸಮೀಕ್ಷೆ ಮಾಡಿದ್ದು, ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹೇಳಿದೆ.
ಎಬಿಪಿ ನ್ಯೂಸ್ ಮತ್ತು ಸಿ ವೋಟರ್ 17,772 ಜನರ ಪ್ರತಿಕ್ರಿಯೆ ಪಡೆದುಕೊಂಡಿದೆ. 224 ವಿಧಾನಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ 107-119 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ. ಬಿಜೆಪಿ ಈ ಬಾರಿ 74 ರಿಂದ 86 ಸ್ಥಾನಗಳಿಗೆ ಕುಸಿಯುತ್ತದೆ ಎಂದು ಸಮೀಕ್ಷೆ ತಿಳಿಸಿದ್ದು, ಜೆಡಿಎಸ್ 23 ರಿಂದ 35 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯ ವೈಖರಿ ಬಗ್ಗೆ ಕೂಡ ಪ್ರಶ್ನೆಗಳನ್ನು ಕೇಳಿದ್ದು, ಜನ ಉತ್ತರ ನೀಡಿದ್ದಾರೆ. ಶೇಕಡಾ 50 ರಷ್ಟು ಜನ ಬೊಮ್ಮಾಯಿ ಆಡಳಿತದ ಬಗ್ಗೆ ಅಸಮಾಧಾನ ಹೊಂದಿರುವುದು ಸ್ಪಷ್ಟವಾಗಿದೆ. ಬೊಮ್ಮಾಯಿ ಆಡಳಿತದ ಕಾಲದಲ್ಲಿ ನಡೆದ ಹಿಜಾಬ್ ವಿವಾದ, ಪಿಎಸ್‌ಐ ನೇಮಕಾತಿ ಹಗರಣ, ಕಮಿಷನ್ ಆರೋಪಗಳಿಂದ ಜನ ಬೇಸತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.
ಸಿಎಂ ಬೊಮ್ಮಾಯಿ ಕೆಲಸ ಹೇಗಿದೆ ಎಂದು ಪ್ರಶ್ನೆ ಕೇಳಲಾಗಿದ್ದು, ಶೇಕಡಾ 51 ರಷ್ಟು ಮಂದಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಬಗ್ಗೆ ಕೆಟ್ಟದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶೇಕಡಾ 25 ರಷ್ಟು ಮಂದಿ ಮಾತ್ರ ಬೊಮ್ಮಾಯಿ ಆಡಳಿತದ ಬಗ್ಗೆ ಸಂತೋಷ ಹೊಂದಿದ್ದು, ಶೇಕಡಾ 24ರಷ್ಟು ಪರವಾಗಿಲ್ಲ ಎಂದು ಹೇಳಿದ್ದಾರೆ.
ಮೋದಿ ಆಡಳಿತದ ಬಗ್ಗೆ ಜನ ಹೇಳಿದ್ದೇನು?
ಇನ್ನು ಈ ಮೆಗಾ ಅಭಿಪ್ರಾಯ ಸಂಗ್ರದಲ್ಲಿ ಪ್ರಧಾನಿ ಮೋದಿ ಆಡಳಿತ ಹೇಗಿದೆ ಎಂದು ಕೂಡ ಜನತೆಯನ್ನು ಪ್ರಶ್ನೆ ಮಾಡಿದ್ದು, ಮೋದಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಬಹುದು. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇಕಡಾ 49ರಷ್ಟು ಮಂದಿ ಮೋದಿ ಕೆಲಸ ತೃಪ್ತಿ ತಂದಿದೆ ಎಂದು ಹೇಳಿದರೆ, 33 ಪ್ರತಿಶತ ಮಂದಿಗೆ ಮೋದಿ ಆಡಳಿತ ಖುಷಿ ನೀಡಿಲ್ಲ, ಇನ್ನು ಶೇಕಡಾ 18 ರಷ್ಟು ಜನ ಪರವಾಗಿಲ್ಲ ಎಂದು ಹೇಳಿದ್ದಾರೆ. ಇಂದಿಗೂ ರಾಜ್ಯದಲ್ಲಿ ಬಿಜೆಪಿ ಏನಾದರೂ ಮತ ಪಡೆದರೆ ಅದಕ್ಕೆ ಮೋದು ವರ್ಚಸ್ಸು ಕಾರಣವಾಗುತ್ತದೆ.
ಆದರೆ, ರಾಜ್ಯ ಬಿಜೆಪಿ ಸರ್ಕಾರದ ಆಡಳಿತದ ಬಗ್ಗೆ ಜನ ಅಸಮಾಧಾನ ಹೊಂದಿರುವುದು ಸ್ಪಷ್ಟವಾಗಿದೆ. ಹಲವು ಹಗರಣಗಳು, ಭ್ರಷ್ಟಾಚಾರ, ಹಿರಿಯ ನಾಯಕರ ಕಡೆಗಣನೆ, ಪ್ರಮುಖರಿಗೆ ಟಿಕೆಟ್ ನಿರಾಕರಿಸಿರುವುದು ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಲು ಕಾರಣವಾಗುವ ಸಾಧ್ಯತೆ ಇದೆ.












Click it and Unblock the Notifications