ಬಿಜೆಪಿ ಸರ್ಕಾರದ ಯೋಜನೆಗಳು ಕಾಂಗ್ರೆಸ್ನಿಂದ ಕಾಪಿ; ಸಿಎಂ ಬೊಮ್ಮಾಯಿ
ಮೈಸೂರು, ಮೇ 01: ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಕ್ಕೆ ಬಿಜೆಪಿ 75 ಯೂನಿಟ್ ಉಚಿತ ವಿದ್ಯುತ್ ನೀಡಲಿದೆ ಎಂದು ಹೇಳಿದ್ದೇವು ಕಾಂಗ್ರೆಸ್ ಅದನ್ನೇ ಅವರು ಕಾಪಿ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮೈಸೂರಿನಲ್ಲಿ ಸಾರ್ವಜನಿಕ ರೋಡ್ ಶೋಗೂ ಮುನ್ನ ಮಾತನಾಡಿದ ಅವರು, ಕಾಂಗ್ರೆಸ್ ಘೋಷಣೆ ಮಾಡಿದ್ದ ಯೋಜನೆಗಳಲ್ಲಿ 65% ಅವರೇ ಮಾಡಿಲ್ಲ. ಮೊದಲು ಅವರು ರಿಪೋರ್ಟ್ ಕಾರ್ಡ್ ಕೊಡಲಿ. ನಮ್ಮ ಕಾಲದಲ್ಲಿ ಕೋವಿಡ್ ಬಂದಿದ್ದರಿಂದ ಸ್ವಲ್ಪ ಮಾರ್ಪಾಡು ಮಾಡಿಕೊಂಡು ಹೊಸ ಸ್ಕೀಂಗಳನ್ನು ಕೊಟ್ಟಿದ್ದೇವೆ.

ನಾನು ಪ್ರಸಕ್ತ ಸಾಲಿನ ಬಜೆಟ್ ನಲ್ಲೇ ವಿದ್ಯಾರ್ಥಿನಿಯರಿಗೆ ಮತ್ತು ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿದ್ದೆ. ಎಸ್‌ಸಿ ಎಸ್‌ಟಿ ಕುಟುಂಬಕ್ಕೆ 75 ಯೂನಿಟ್ ಉಚಿತ ವಿದ್ಯುತ್ ಎಂದು ಹೇಳಿದ್ದೆ, ಅದನ್ನೇ ಕಾಂಗ್ರೆಸ್ ಅವರು ಕಾಪಿ ಮಾಡಿದ್ದಾರೆ ಎಂದರು.
ಪಡಿತರದಲ್ಲಿ 5 ಕೆಜಿ ಅಕ್ಕಿ, 5ಕೆಜಿ ಸಿರಿಧಾನ್ಯ, ಜೊತೆಗೆ ಅರ್ಧ ಲೀಟರ್ ನಂದಿನಿ ಹಾಲು ಸೇರಿಸಿ ನಾವು ಸಂಪೂರ್ಣ ಆರೋಗ್ಯ ಕಿಟ್ ಕೊಡುತ್ತಿದ್ದೇವೆ. ಆರ್ಥಿಕ ದುರ್ಬಲರಿಗೆ ಒಳ್ಳೆಯ ಆಹಾರ ಸಿಗುವ ಸಲುವಾಗಿ ಈ ಪ್ಯಾಕೇಜ್ ಕೊಡುತ್ತಿದ್ದೇವೆ. ರೈತರು ಬೆಳೆಯುವ ಜೋಳ, ರಾಗಿ ಸೇರಿದಂತೆ ಎಲ್ಲ ಸಿರಿಧಾನ್ಯಗಳನ್ನು ಅವರಿಂದ ಖರೀದಿ ಮಾಡಿ ಅವರಿಗೆ ಬೆಂಬಲ ನೀಡುವ ಯೋಜನೆ ನಮ್ಮದು. ಇದರಿಂದ ಪೌಷ್ಠಿಕ ಆಹಾರ ಕೂಡ ಸಿಗುತ್ತದೆ. ಹಾಲು ಕೊಡುವುದರಿಂದ ರೈತರಿಂದ ದೊಡ್ಡ ಪ್ರಮಾಣದ ಖರೀದಿ ಆಗುತ್ತದೆ ಎಂದು ಅವರು ವಿವರಿಸಿದರು.

ಈ ಬಗ್ಗೆ ಸಮಗ್ರ ಚಿಂತನೆ ಮಾಡಿ ಈ ಯೋಜನೆ ಮಾಡಿದ್ದೇವೆ. ಸಿರಿಧಾನ್ಯ ಉತ್ಪಾದನೆಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ. ಬೆಲೆ ಕಡಿಮೆ ಇದ್ದ ರಾಗಿ ಪಡಿತರ ಯೋಜನೆಯಡಿ ವಿತರಣೆ ಆರಂಭಿಸಿದ್ದರಿಂದ ಉತ್ಪಾದನೆ ಹೆಚ್ಚಾಗುತ್ತಿದೆ. ಹೀಗಾಗಿ ರಾಗಿಗೆ ಉತ್ತಮ ಬೆಲೆ ಕೂಡ ಸಿಗುತ್ತಿದೆ. ನಮ್ಮ ಪೋಷಣ್ ಅಭಿಯಾನದಲ್ಲಿ ಇದೆಲ್ಲವೂ ಸೇರುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಮೋದಿ, ಅಮಿತ್ ಶಾ ರಿಂದ ನಮಗೆ ಆನೆ ಬಲ
ಮೋದಿ ಮತ್ತು ಅಮಿತ್ ಶಾ ಅವರು ಪ್ರಚಾರಕ್ಕೆ ಬಂದಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗುತ್ತೆ. ಪ್ರಧಾನಿ ಮೋದಿ ನೆನ್ನೆ ಮೈಸೂರಿಗೆ ಬಂದು ಹೋದ ಮೇಲೆ ಜನರಲ್ಲಿ ಬಹಳ ದೊಡ್ಡ ಉತ್ಸಾಹ ಕಾಣುತ್ತಿದೆ. ಇದರಿಂದ ಹೆಚ್ಚಿನ ಪರ್ಸೆಂಟೇಜ್ ಓಟಿಂಗ್ ಕೂಡ ಆಗುತ್ತದೆ. ಸೋಲುವ ಹತಾಶೆಯಲ್ಲಿ ವಿರೋಧ ಪಕ್ಷಗಳು ತಮ್ಮ ಸ್ಥಿಮಿತವನ್ನು ಕಳೆದುಕೊಂಡು ಪ್ರಧಾನಿ ವಿರುದ್ಧ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. ಈಗ ಅವರ ಮಗನ ಸರದಿ. ಅವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ವರುಣಾದಲ್ಲಿ ಗಲಾಟೆ ಆಗಬಾರದು
ಕಾಂಗ್ರೆಸ್ ಅವರು ಸೋಲುತ್ತೇವೆಂದು ಹತಾಶರಾಗಿ ಗಲಾಟೆ ಮಾಡಿಸುತ್ತಿದ್ದಾರೆ. ಬಹಳ ಸುಲಭವಾಗಿ ಗೆಲ್ಲುತ್ತೀವಿ ಎಂಬ ಭ್ರಮೆ ಅವರಲ್ಲಿತ್ತು. ಕಾಂಗ್ರೆಸ್ ಓಟ್ ಬ್ಯಾಂಕ್ ಅವರಿಂದ ಸರಿಯುತ್ತಿದೆ. ಗಲಾಟೆ ಮಾಡಿದರೆ ನಾವು ಗೆಲ್ಲಬಹುದು ಮತ್ತು ನಮ್ಮ ಪ್ರಚಾರವನ್ನು ತಡೆಯಬಹುದು ಎಂದು ಅವರು ಗಲಾಟೆ ಮಾಡುತ್ತಿದ್ದಾರೆ. ತಳಮಟ್ಟದಲ್ಲಿ ಬಹಳ ಬದಲಾವಣೆ ಆಗುತ್ತಿದೆ. ನಾವು ಗೆಲುವಿನ ಕಡೆಗೆ ಸಾಗುತ್ತಿದ್ದೇವೆ. ಜನ ಜಾಗೃತರಾಗಿದ್ದಾರೆ. ಹಳೇ ಪದ್ಧತಿ ಈಗ ನಡೆಯಲ್ಲ ಎಂದು ಹೇಳಿದರು.












Click it and Unblock the Notifications