ಬಿಜೆಪಿಯಿಂದ ಮಾಡಾಳ್ ಮಲ್ಲಿಕಾರ್ಜುನ ಉಚ್ಚಾಟನೆ: ಲಿಂಗಾಯತ ವಿರೋಧಿ ಬಾಣ ಬಿಟ್ಟ ಕಾಂಗ್ರೆಸ್
ಬೆಂಗಳೂರು, ಏಪ್ರಿಲ್. 20: ವಿಧಾನಸಭಾ ಚುನಾವಣೆ ಬೆನ್ನಲ್ಲೇ ಕಾಂಗ್ರೆಸ್‌ಗೆ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕಾರಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿಯನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಕಾಂಗ್ರೆಸ್ ಹಲವು ಪ್ರಯತ್ನ ನಡೆಸುತ್ತಿದೆ.
ಬಿಜೆಪಿ ಮಾಡುವ ಪ್ರತಿ ಕೆಲಸ ಮತ್ತು ಕ್ರಮಗಳಲ್ಲೂ ಲಿಂಗಾಯತರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಜಾತಕ ಪಕ್ಷಿಯಂತೆ ಕಾಯುವ ಕಾಂಗ್ರೆಸ್‌ಗೆ ಈಗ ಸಿಕ್ಕಿರುವುದು ಮಾಡಾಳ್ ಮಲ್ಲಿಕಾರ್ಜುನ ಅವರ ಉಚ್ಚಾಟನೆ ವಿಷಯ. ಬಿಜೆಪಿ ವಿರುದ್ಧ ಬಂಡಾಯವೆದ್ದಿರುವ ಲಿಂಗಾಯತ ಸಮುದಾಯದ ಮಾಡಾಳ್ ಮಲ್ಲಿಕಾರ್ಜುನರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ಆದರೆ ಮತ್ತೊಂದು ಕಡೆ ಪಕ್ಷದ ವಿರುದ್ಧ ಬಂಡಾಯವೆದ್ದ ಆರ್‌ಎಸ್‌ಎಸ್‌ನ ಅರುಣ್ ಕುಮಾರ್ ಪುತ್ತಿಲ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಎರಡು ವಿಷಯವನ್ನು ಇಟ್ಟುಕೊಂಡು ಕಾಂಗ್ರೆಸ್ ಮತ್ತೆ ಬಿಜೆಪಿಯನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸುತ್ತಿದೆ. ಲಿಂಗಾಯತ ಸಮುದಾಯದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಪಕ್ಷ ಆರ್‌ಎಸ್‌ಎಸ್ ಸದಸ್ಯರ ಮೇಲೆ ಕ್ರಮ ತೆಗೆದುಕೊಳ್ಳುವುದಿಲ್ಲ ಏಕೆ ಎಂದು ಪ್ರಶ್ನಿಸಿದೆ.
"ಬಿಜೆಪಿ ವಿರುದ್ಧ ಬಂಡಾಯವೆದ್ದ ಪಕ್ಷೇತರ ಸ್ಪರ್ಧಿ ಲಿಂಗಾಯತ ಮಾಡಾಳ್ ಮಲ್ಲಿಕಾರ್ಜುನರಿಗೆ 6 ವರ್ಷ ಪಕ್ಷದಿಂದ ಉಚ್ಚಾಟನೆ. ಅದೇ ಪುತ್ತೂರಿನ ಪಕ್ಷೇತರ ಸ್ಪರ್ಧಿ ಆರೆಸ್ಸೆಸ್ಸಿನ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಯಾವುದೇ ಕ್ರಮವಿಲ್ಲ. ಲಿಂಗಾಯತರಿಗೆ ಸುಣ್ಣ ಆರೆಸ್ಸೆಸ್ಸಿಗರಿಗೆ ಬೆಣ್ಣೆ..? ಪುತ್ತಿಲ ಮೇಲೆ ಕ್ರಮ ಕೈಗೊಳ್ಳಲು ಧೈರ್ಯ ಸಾಲದೇ..?" ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಮುಂದುವರಿದು ಮತ್ತೊಂದು ಟ್ವೀಟ್ ಮಾಡಿರುವ ಕಾಂಗ್ರೆಸ್, "ಬಿಜೆಪಿಯ ಲಿಂಗಾಯತರಲ್ಲಿ ಅಸ್ತಿತ್ವದ ಭಯ ಶುರುವಾಗಿದೆ, ಆ ಮಟ್ಟಿಗೆ 'ಸಂತೋಷ ಕೂಟ'ದ ಆಟ ಜೋರಿದೆ. ಅದರ ಪರಿಣಾಮವೇ ನಿನ್ನೆ ರಾತ್ರೋರಾತ್ರಿ ಬಿಎಸ್ ಯಡಿಯೂರಪ್ಪ ಮನೆಯಲ್ಲಿನ ಬಿಜೆಪಿ ಲಿಂಗಾಯತರ ಸಭೆ. ಇನ್ನೊಂದೆಡೆ ಸಂತೋಷ ಕೂಟದ ಸಭೆ. ನಿನ್ನೆ ಒಂದೇ ದಿನ ನಡೆದ ಗಡಿಬಿಡಿಯ ಬೆಳವಣಿಗೆ ಇದು. ಯಾರು ಯಾರನ್ನು ಮಣಿಸಲು ಈ ಸಭೆಗಳು ಕರ್ನಾಟಕ ಬಿಜೆಪಿ...?" ಎಂದು ಪ್ರಶ್ನಿಸಿದೆ.
ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ ಬಳಿಕ ಬಂಡಾಯ ಅಭ್ಯರ್ಥಿಯಾಗಿ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಸ್ಪರ್ಧಿಸುತ್ತಿದ್ದರು. ಹೀಗಾಗಿ ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿಯಲ್ಲಿ ಅವರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ಬಿಜೆಪಿ ಶಿಸ್ತು ಸಮಿತಿಯ ಅಧ್ಯಕ್ಷ ಆದೇಶ ನೀಡಿದ್ದಾರೆ ಎಂದು ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ತಿಳಿಸಿದ್ದರು.
ಇನ್ನು, ಬುಧವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮನೆಯಲ್ಲಿ ರಾಜ್ಯದ 41 ಲಿಂಗಾಯತ ಮುಖಂಡರ ಜೊತೆಗೆ ಸಭೆ ನಡೆಸಿದ್ದರು. ಸಭೆಯಲ್ಲಿ ಬಿಜೆಪಿಯ ಎಲ್ಲಾ ಲಿಂಗಾಯತ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಮಾಜಿ ಮುಖ್ಯಮಂತ್ರಿ ಸೇರಿದಂತೆ ಎಲ್ಲ ನಾಯಕರು ಭಾಗಿಯಾಗಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಸೋಮಣ್ಣ, ಸಿ.ಸಿ ಪಾಟೀಲ್, ಬಿ.ಸಿ. ಪಾಟೀಲ್, ಮುರುಗೇಶ್ ನಿರಾಣಿ, ಶಂಕರ್ ಪಾಟೀಲ್ ಮುನೇನಕೊಪ್ಪ, ಸಂಸದರಾದ ಜಿ.ಎಂ. ಸಿದ್ದೇಶ್ವರ್, ಪಿ.ಸಿ ಗದ್ದಿಗೌಡರ್, ಮಂಗಳಾ ಸುರೇಶ್ ಅಂಗಡಿ, ಅಣ್ಣಾ ಸಾಹೇಬ್ ಜೊಲ್ಲೆ, ಶಿವಕುಮಾರ್ ಉದಾಸಿ, ಕರಡಿ ಸಂಗಣ್ಣ, ಬಿ.ವೈ ರಾಘವೇಂದ್ರ, ಜಿ.ಎಸ್ ಬಸವರಾಜ್, ಪ್ರಭಾಕರ್ ಕೋರೆ ಭಾಗವಹಿಸಿದ್ದರು.












Click it and Unblock the Notifications