ಕರ್ನಾಟಕದ ತುಣುಕು ಸುದ್ದಿಗಳ ಇಣುಕು ನೋಟ

ಬೆಂಗಳೂರು, ಸೆ.17 : ರಾಜಭವನದ ಮೇಲೆ ಆಡಳಿತಾರೂಢ ಪಕ್ಷ ಸೇರಿದಂತೆ ಯಾವುದೇ ಪಕ್ಷದ ಛಾಯೆ ಆವರಿಸಿಕೊಳ್ಳಲು ಬಿಡುವುದಿಲ್ಲ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಘೋಷಿಸಿದ್ದಾರೆ. ಸಕ್ರಿಯ ರಾಜಕಾರಣದಲ್ಲಿ ನಾನು ಮರಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯಪಾಲರು, ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯಲು ತಾವು ಇಷ್ಟ ಪಡುವುದಿಲ್ಲ ಎಂದು ಹೇಳಿದರು.

ರಾಜ್ಯಪಾಲರ ಹುದ್ದೆಯೆಂದರೆ ರಬ್ಬರ್ ಸ್ಟಾಂಪ್ ಹುದ್ದೆ ಎಂದು ನನಗೆ ಅನ್ನಿಸಿತ್ತು. ಆದ್ದರಿಂದ ನನಗೆ ರಾಜ್ಯಪಾಲರಾಗಿ ಕರ್ನಾಟಕಕ್ಕೆ ಬರಲು ಇಷ್ಟವಿರಲಿಲ್ಲ. ಮೂರು ದಿನ ಆಲೋಚಿಸಿ, ನಂತರ ರಾಜ್ಯಪಾಲನಾಗಿ ಇಲ್ಲಿಗೆ ಆಗಮಿಸಿದ್ದೇನೆ ಎಂದರು.

ಇಂದಿನ ರಾಜಕೀಯ ವ್ಯವಸ್ಥೆ ಮೌಲ್ಯ ಕಳೆದುಕೊಳ್ಳುತ್ತಿದೆ. ಇಂತಹ ಸನ್ನಿವೇಶದಲ್ಲಿ ಮರಳಿ ಸಕ್ರಿಯ ರಾಜಕಾರಣದಲ್ಲಿ ತೊಡಗಲು ನನಗೆ ಇಷ್ಟವಿಲ್ಲ. ರಾಜಭವನದ ಮೇಲೆ ಆಡಳಿತ ಸೇರಿದಂತೆ ಯಾವುದೇ ಪಕ್ಷದ ಛಾಯೆ ಆವರಿಸಲು ಬಿಡುವುದಿಲ್ಲ ಎಂದು ಹೇಳಿದರು. ಸಿಎಂ ಸಿದ್ದರಾಮಯ್ಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ರಾಜ್ಯಪಾಲರು ಶ್ಲಾಘಿಸಿದರು.

ಮಿನರಲ್ ವಾಟರ್ 1 ರೂ. ದುಬಾರಿ

ಮಿನರಲ್ ವಾಟರ್ 1 ರೂ. ದುಬಾರಿ

ಪ್ಯಾಕೇಜ್ಡ್ ಕುಡಿಯುವ ನೀರಿನ ದರವನ್ನು ರಾಜ್ಯಾದ್ಯಂತ 1 ರೂ. ಹೆಚ್ಚಳ ಮಾಡಲು ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಉತ್ಪಾದಕರ ಸಂಘ ನಿರ್ಧರಿಸಿದೆ. ನೂತನ ದರವು ಸೆ.23ರಿಂದ ಅನ್ವಯವಾಗಲಿದೆ ಎಂದು ಸಂಘದ ಅಧ್ಯಕ್ಷ ಪ್ರಶಾಂತ್ ಆರಾಧ್ಯ ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ನೀರಿನ ದರದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ. ಆದ್ದರಿಂದ ದರ ಹೆಚ್ಚಳ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಸಾಂಬಾರ್ ಪಾತ್ರೆಗೆ ಬಿದ್ದು ವಿದ್ಯಾರ್ಥಿನಿಗೆ ಗಾಯ

ಸಾಂಬಾರ್ ಪಾತ್ರೆಗೆ ಬಿದ್ದು ವಿದ್ಯಾರ್ಥಿನಿಗೆ ಗಾಯ

ಬಿಸಿಯೂಟದ ಸಾಂಬಾರ್ ಪಾತ್ರಗೆ ಬಿದ್ದು ಬಾಲಕಿ ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಡಿ.ಪಾಳ್ಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಅರುಂಧತಿ ಗಾಯಗೊಂಡ ಬಾಲಕಿ. ಸಾಂಬಾರ್ ಪಾತ್ರಗೆ ಆಸ್ಮಿಕವಾಗಿ ಬಿದ್ದ ಈಕೆಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ.

ಕೆರೆಗೆ ಕಾರು ಆರು ಮಂದಿ ಪಾರು

ಕೆರೆಗೆ ಕಾರು ಆರು ಮಂದಿ ಪಾರು

ಸಚಿವರ ಕಾರನ್ನು ಓವರ್ ಟೆಕ್ ಮಾಡಲು ನ್ನುಗ್ಗಿದ ಕಾರೊಂದು ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಬೇಗವಳ್ಳಿ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ. ಸಚಿವರ ಬೆಂಗಾವಲು ಪಡೆಯವರು ಕಾರಿನಲ್ಲಿದ್ದ ಒಂದೇ ಕುಟುಂಬದ 6 ಜನರನ್ನು ರಕ್ಷಿಸಿದ್ದಾರೆ. ಕಾರ್ಕಳದಿಂದ ಭದ್ರಾವತಿಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು ಬೇಗವಳ್ಳಿ ಕೆರೆ ಬಳಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ
ರತ್ನಾಕರ ಅವರ ಕಾರನ್ನು ಹಿಂದಿಕ್ಕಲು ಯತ್ನಿಸಿ, ನಿಯಂತ್ರಣ ತಪ್ಪಿ, ಕೆರೆಗೆ ಉರುಳಿದೆ. ಇದನ್ನು ಕಂಡ ಸಚಿವರು ಕೂಡಲೇ ತಮ್ಮ ಕಾರನ್ನು ನಿಲ್ಲಿಸಿದ್ದಾರೆ. ಸಚಿವರ ಬೆಂಗಾವಲು ಸಿಬ್ಬಂದಿ ಕೃಷ್ಣಮೂರ್ತಿ ಮತ್ತು ಚಂದ್ರು ಅವರು ಕೆರೆಗೆ ಉರುಳಿದ್ದ ಜನರನ್ನು ರಕ್ಷಿಸಿದ್ದಾರೆ.

ಇನ್ಫೋಸಿಸ್ ಉದ್ಯೋಗಿ ಆತ್ಮಹತ್ಯೆ

ಇನ್ಫೋಸಿಸ್ ಉದ್ಯೋಗಿ ಆತ್ಮಹತ್ಯೆ

ಒಂಟಿತನದಿಂದ ಬೇಸರಗೊಂಡಿದ್ದ ಇನ್ಫೋಸಿಸ್ ಉದ್ಯೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೈದರಾಬಾದ್ ಮೂಲದ ಮೋಹನಕೃಷ್ಣ (27) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೋಹನ ಕೃಷ್ಣ, ಹೆಬ್ಬಾಳದಲ್ಲಿರುವ ಇನ್ಫೋಸಿಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. "ನನ್ನ ಸಾವಿಗೆ ನಾನೇ ಕಾರಣ. ನನ್ನ ಮೊಬೈಲ್‌ ಅನ್ನು ತಂದೆಗೆ ಕೊಡಿ ಎಂದು ಡೆತ್‌ನೋಟ್ ಬರೆದಿಟ್ಟು" ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

ತುಮಕೂರಿನಲ್ಲಿ ವಿದ್ಯಾರ್ಥಿಗಳಿಗೆ ಲಾಠಿ ಏಟು

ತುಮಕೂರಿನಲ್ಲಿ ವಿದ್ಯಾರ್ಥಿಗಳಿಗೆ ಲಾಠಿ ಏಟು

ಹೆಚ್ಚುವರಿ ಬಸ್ ಸೌಲಭ್ಯಕ್ಕೆ ಒತ್ತಾಯಿಸಿ ತುಮಕೂರಿನ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಮಂಗಳವಾ ಪ್ರತಿಭಟನೆ ನಡೆಸಿದರು. ಶಿರಾ ಗೇಟ್‌ನ ಶ್ರೀದೇವಿ ಕಾಲೇಜಿನಿಂದ ತೆರಳಲು ಸಕಾಲಕ್ಕೆ ಬಸ್ ಸಿಗುತ್ತಿಲ್ಲ ಎಂದು ಆರೋಪಿಸಿದರು. ಸುಮಾರು 200 ಮಂದಿ ಪ್ರತಿಭಟನೆ ನಡೆಸಿದ ಕಾರಣ ಬಸ್ ನಿಲ್ದಾಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ವಿದ್ಯಾರ್ಥಿಗಳನ್ನು ಚದುರಿಸಿದರು. ಬಸ್ ಸೌಲಭ್ಯ ಒದಗಿಸುವುದಾಗಿ ನಿಲ್ದಾಣದ ಮ್ಯಾನೇಜರ್ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ವಿದ್ಯಾರ್ಥಿಗಳು ಹಿಂಪಡೆದರು.

ಶೀಟ್ ಕುಸಿತ 40 ವಿದ್ಯಾರ್ಥಿಗಳಿಗೆ ಗಾಯ

ಶೀಟ್ ಕುಸಿತ 40 ವಿದ್ಯಾರ್ಥಿಗಳಿಗೆ ಗಾಯ

ಬಿಜಾಪುರದ ಬಡೆಕಮಾನ್ ಬಳಿ ಇಕ್ರಾ ಶಾಲೆ ಮೈದಾನದ ಸೈಕಲ್ ಸ್ಟಾಂಡ್ ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಕಟ್ಟಡದ ಶೀಟ್ ಕುಸಿದು 40 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಚೌಧರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 10 ವಿದ್ಯಾರ್ಥಿಗಳಿಗೆ ಗಂಭೀರಗಾಯಗಳಾಗಿದ್ದು, ಉಳಿದ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕಳಿಸಲಾಗಿದೆ.

ನಗರ ಸಭೆ ಕಾಂಗ್ರೆಸ್ ಪಾಲು

ನಗರ ಸಭೆ ಕಾಂಗ್ರೆಸ್ ಪಾಲು

ತುಮಕೂರು ನಗರ ಸಭೆ ಕಾಂಗ್ರೆಸ್ ಪಾಲಾಗಿದೆ. ಮಂಗಳವಾರ ನಡೆದ ಚುನಾವಣೆಯಲ್ಲಿ ವಾರ್ಡ್ ನಂ34 ರ ಗೀತಾ ರುದ್ರೇಶ್ ಮತ್ತು ಉಪಾಧ್ಯಕ್ಷರಾಗಿ ಧನಲಕ್ಷ್ಮೀ ಆಯ್ಕೆಯಾಗಿದ್ದಾರೆ. ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮಬಲ ಸಾಧಿಸಿದ್ದವು. ಆದರೆ, ಜೆಡಿಎಸ್ ಗೆ ಅಧಿಕಾರ ನೀಡದ ಕಾಂಗ್ರೆಸ್ ನಗರಸಭೆಯ ಆಡಳಿತವನ್ನು `ಕೈ`ವಶ ಮಾಡಿಕೊಂಡಿದೆ. ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಯ ಮಹಿಳೆಗೆ ಮೀಸಲಾಗಿತ್ತು.

19 ರಿಂದ ಜಿಲ್ಲಾ ಪ್ರವಾಸ

19 ರಿಂದ ಜಿಲ್ಲಾ ಪ್ರವಾಸ

ಸೆ.19ರಿಂದ ಜಿಲ್ಲಾ ಪ್ರವಾಸ ಕೈಗೊಳ್ಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಂಗಳವಾರ ಜನತಾದರ್ಶನ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಸೆ.19ರಂದು ಬಾಗಲಕೋಟೆ, 20ರಂದು ಗುಲ್ಬರ್ಗಾ ಜಿಲ್ಲೆಗೆ ಭೇಟಿ ನೀಡುತ್ತೇನೆ ಎಂದು ಹೇಳಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಅವರ ಯಾವುದೇ ಆರೋಪಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.

ಮೇಲುಕೋಟೆ ರತ್ನಾಂಗಿ ಕಳ್ಳತನ, ತನಿಖೆ ಆರಂಭ

ಮೇಲುಕೋಟೆ ರತ್ನಾಂಗಿ ಕಳ್ಳತನ, ತನಿಖೆ ಆರಂಭ

ಮಂಡ್ಯ ಜಿಲ್ಲೆಯ ಮೇಲುಕೋಟೆ ರತ್ನಾಂಗಿ ಅವ್ಯವಹಾರ ಪ್ರಕರಣದ ತನಿಖೆಯನ್ನು ನ್ಯಾಯಮೂರ್ತಿ ಇಂಗಳಗಿ ನೇತೃತ್ವದ ತಂಡ ಪ್ರಾರಂಭಿಸಿದೆ. ಮಂಗಳವಾರ ತಂಡ ಚಲುವನಾರಾಯಣ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪ್ರಕರಣಕ್ಕೆ ಸಂಬಂಧಿಸಿದ ಸಮಗ್ರ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿತು. ದೇಗುಲದ ಪ್ರಧಾನ ಅರ್ಚಕ ನರಸರಾಜ ಭಟ್ಟರು ಇನ್ನೂ ಪತ್ತೆಯಾಗಿಲ್ಲ. ನಿರೀಕ್ಷಣಾ ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ ನಲ್ಲಿ ವಜಾಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+