ಕಬಿನಿಯಿಂದ ತಮಿಳುನಾಡಿಗೆ ನೀರು; 9 ದಿನಗಳಲ್ಲಿ 7 ಅಡಿ ಇಳಿಕೆ! ರಾಜ್ಯದ ಜಲಾಶಯಗಳಲ್ಲಿ ಎಷ್ಟು ನೀರಿದೆ?
ಬೆಂಗಳೂರು: ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ನೀರಿನ ಮಟ್ಟ 9 ದಿನಗಳಲ್ಲಿ ಬರೋಬ್ಬರಿ 7 ಅಡಿ ಕುಸಿದಿದೆ. ಈ ಅವಧಿಯಲ್ಲಿ ಸುಮಾರು 4.95 ಟಿಎಂಸಿ ನೀರು ಹೊರಹರಿದಿದ್ದು, ಸದ್ಯ ಜಲಾಶಯದಲ್ಲಿ 14.57 ಟಿಎಂಸಿ ನೀರು ಉಳಿದಿದೆ.
ಎಚ್.ಡಿ. ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಜಲಾಶಯದಲ್ಲಿ ಕಳೆದ 9 ದಿನಗಳ ಅಂತರದಲ್ಲಿ ಬರೋಬ್ಬರಿ 4 ಟಿಎಂಸಿ ನೀರು ಖಾಲಿಯಾಗಿದ್ದು, ಜಲಾಶಯದ ನೀರಿನ ಮಟ್ಟ 7 ಅಡಿಗಳಷ್ಟು ಇಳಿಕೆಯಾಗಿದೆ. ಕಳೆದ ಆಗಸ್ಟ್ 13ರಂದು ಗರಿಷ್ಠ ಮಟ್ಟವಾದ 2,282 ಅಡಿಗಳಷ್ಟಿದ್ದ ಜಲಾಶಯದ ನೀರಿನ ಮಟ್ಟ, ಭಾರೀ ಪ್ರಮಾಣದ ಹೊರಹರಿವಿನಿಂದಾಗಿ ಇಂದು 2,275 ಅಡಿಗೆ ಕುಸಿದಿದೆ. 19.52 ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 14.57 ಟಿಎಂಸಿ ನೀರಿದೆ. ಕಳೆದ 9 ದಿನಗಳಲ್ಲಿ 4.95 ಟಿಎಂಸಿ ನೀರು ಹರಿದು ಹೋಗಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಾಗಿದೆ. ಕಾವೇರಿ, ಕೃಷ್ಣಾ, ತುಂಗಭದ್ರಾ ಹಾಗೂ ಶರಾವತಿ ಜಲಾನಯನ ಪ್ರದೇಶಗಳ ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ, ಒಳಹರಿವು ಮತ್ತು ಹೊರಹರಿವಿನಲ್ಲೂ ಬದಲಾವಣೆ ಕಂಡುಬಂದಿದೆ.
ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ,ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ ಹಾಗೂ ಬೆಂಗಳೂರು ನಗರದಲ್ಲಿ ಮಳೆಯಾಗಲಿದೆ. ಇನ್ನೂ ಮಳೆಯಿಂದ ಡ್ಯಾಂಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಹಾಗಾದರೆ ಆಗಸ್ಟ್ 22 ರಂದು ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ವಿವರ.
ಕೆಆರ್ಎಸ್ ಜಲಾಶಯ
ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯವಾದ ಕೆಆರ್ಎಸ್ನಲ್ಲಿ ಇಂದು ನೀರಿನ ಮಟ್ಟ 108.80 ಅಡಿ ಇದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿಯಾಗಿದ್ದು, ಪ್ರಸ್ತುತ 1,395 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಹೊರಹರಿವು 3,734 ಕ್ಯೂಸೆಕ್ ಇದೆ. ಕೆಆರ್ಎಸ್ನ ಗರಿಷ್ಠ ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ ಆಗಿದ್ದು, ಇಂದು 30.532 ಟಿಎಂಸಿ ನೀರು ಸಂಗ್ರಹವಾಗಿದೆ.
ತುಂಗಭದ್ರಾ ಜಲಾಶಯ
ತುಂಗಭದ್ರಾ ಜಲಾಶಯದಲ್ಲೂ ಉತ್ತಮ ಪ್ರಮಾಣದ ನೀರು ಸಂಗ್ರಹವಾಗಿದೆ. ಗರಿಷ್ಠ ಮಟ್ಟ 1633.00 ಅಡಿ ಇದ್ದು, ಇಂದು ಜಲಾಶಯದ ನೀರಿನ ಮಟ್ಟ 1630.20 ಅಡಿ ತಲುಪಿದೆ. ಜಲಾಶಯಕ್ಕೆ 8,475 ಕ್ಯೂಸೆಕ್ ಒಳಹರಿವು ಇದ್ದರೆ, 8,143 ಕ್ಯೂಸೆಕ್ ಹೊರಹರಿವು ಇದೆ. ಇದರಲ್ಲಿ ಕಾಲುವೆಗೆ 7,943 ಕ್ಯೂಸೆಕ್ ಹಾಗೂ ನದಿಗೆ 200 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ತುಂಗಭದ್ರಾ ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿ ಆಗಿದ್ದು, ಪ್ರಸ್ತುತ 94.819 ಟಿಎಂಸಿ ನೀರು ಸಂಗ್ರಹವಾಗಿದೆ .
ಆಲಮಟ್ಟಿ ಜಲಾಶಯ
ಉತ್ತರ ಕರ್ನಾಟಕದ ಪ್ರಮುಖ ಆಲಮಟ್ಟಿ ಜಲಾಶಯದಲ್ಲಿ ಇಂದು ನೀರಿನ ಮಟ್ಟ 519.44 ಮೀಟರ್ ಇದೆ. ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ .ಆಲಮಟ್ಟಿಗೆ 40,245 ಕ್ಯೂಸೆಕ್ ಒಳಹರಿವು ಇದ್ದರೆ, 44,157 ಕ್ಯೂಸೆಕ್ ಹೊರಹರಿವು ದಾಖಲಾಗಿದೆ. ಗರಿಷ್ಠ ಮಟ್ಟಕ್ಕೆ ಆಲಮಟ್ಟಿ ಜಲಾಶಯ ಇನ್ನಷ್ಟು ಸಮೀಪಿಸುತ್ತಿದ್ದು, ಒಳಹರಿವು ಮತ್ತು ಹೊರಹರಿವಿನ ಮೇಲೆ ನಿರಂತರ ನಿಗಾ ವಹಿಸಲಾಗಿದೆ.
ಭದ್ರಾ ಜಲಾಶಯ
ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿ ಆಗಿದ್ದು, ಇಂದು ನೀರಿನ ಮಟ್ಟ 174 ಅಡಿ 11 ಇಂಚು ಇದೆ. ಸಮುದ್ರಮಟ್ಟದಿಂದ ಇದು 2146.91 ಮೀಟರ್ ಎಂದು ವರದಿಯಾಗಿದೆ. ಜಲಾಶಯಕ್ಕೆ 4,510 ಕ್ಯೂಸೆಕ್ ಒಳಹರಿವು ಇದ್ದರೆ, 205 ಕ್ಯೂಸೆಕ್ ಹೊರಹರಿವು ಇದೆ. ಭದ್ರಾ ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 71.535 ಟಿಎಂಸಿ ಆಗಿದ್ದು, ಪ್ರಸ್ತುತ 58.284 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ 184 ಅಡಿ ಇತ್ತು. ಹೀಗಾಗಿ ಈ ವರ್ಷದ ಜಲಮಟ್ಟ ಕಳೆದ ವರ್ಷದ ಇದೇ ಅವಧಿಗಿಂತ ಕಡಿಮೆಯಾಗಿದೆ.
ಲಿಂಗನಮಕ್ಕಿ ಜಲಾಶಯ
ಮಲೆನಾಡಿನಲ್ಲಿ ಮಳೆಯ ಪ್ರಮಾಣ ಹಾಗೂ ಶರಾವತಿ ಜಲಾನಯನ ಪ್ರದೇಶದ ಪರಿಸ್ಥಿತಿಗೆ ಅನುಗುಣವಾಗಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟದಲ್ಲಿ ಬದಲಾವಣೆ ಕಂಡುಬರುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 1819 ಅಡಿ ಇದ್ದು, ಇಂದು ನೀರಿನ ಮಟ್ಟ 1796 ಅಡಿ ಇದೆ. ಜಲಾಶಯಕ್ಕೆ 7,790 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಕಳೆದ ವರ್ಷ ಇದೇ ದಿನ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1816.80 ಅಡಿ ಇದ್ದು, 95.15% ನೀರು ಸಂಗ್ರಹ ವಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಪ್ರಸಕ್ತ ವರ್ಷದ ಜಲಮಟ್ಟ ಕಡಿಮೆಯಾಗಿದೆ.
ಬಸವಸಾಗರ ಜಲಾಶಯ
ಬಸವಸಾಗರ ಜಲಾಶಯದಲ್ಲೂ ನೀರಿನ ಒಳಹರಿವು ಗಮನಾರ್ಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ 492.25 ಮೀಟರ್ ಆಗಿದ್ದು, ಇಂದು ನೀರಿನ ಮಟ್ಟ 492.15 ಮೀಟರ್ ಇದೆ. ಜಲಾಶಯಕ್ಕೆ 42,000 ಕ್ಯೂಸೆಕ್ ಒಳಹರಿವು ಬರುತ್ತಿದ್ದು, 32,000 ಕ್ಯೂಸೆಕ್ ಹೊರಹರಿವು ಇದೆ. ಹೀಗಾಗಿ ಬಸವಸಾಗರ ಜಲಾಶಯ ಬಹುತೇಕ ಗರಿಷ್ಠ ಮಟ್ಟದ ಸಮೀಪದಲ್ಲಿದೆ.
ಮಳೆಯಿಂದ ಜಲಾಶಯಗಳಿಗೆ ಜೀವಕಳೆ
ರಾಜ್ಯದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಮುಂದುವರಿದಿರುವುದರಿಂದ ಪ್ರಮುಖ ಜಲಾನಯನ ಪ್ರದೇಶಗಳಲ್ಲಿ ನೀರಿನ ಒಳಹರಿವು ಕಂಡುಬರುತ್ತಿದೆ. ವಿಶೇಷವಾಗಿ ಬಸವಸಾಗರ ಮತ್ತು ಆಲಮಟ್ಟಿ ಜಲಾಶಯಗಳು ಗರಿಷ್ಠ ಮಟ್ಟದ ಸಮೀಪದಲ್ಲಿದ್ದು , ತುಂಗಭದ್ರಾದಲ್ಲೂ ಉತ್ತಮ ಪ್ರಮಾಣದ ನೀರು ಸಂಗ್ರಹವಾಗಿದೆ.
ಇನ್ನು ಕಾವೇರಿ ಜಲಾನಯನ ಪ್ರದೇಶದ ಕೆಆರ್ಎಸ್ನಲ್ಲಿ ನೀರಿನ ಸಂಗ್ರಹ 30 ಟಿಎಂಸಿಗೂ ಅಧಿಕವಾಗಿದ್ದರೂ, ಒಳಹರಿವಿಗಿಂತ ಹೊರಹರಿವು ಹೆಚ್ಚಾಗಿದೆ. ಮಲೆನಾಡಿನ ಲಿಂಗನಮಕ್ಕಿ ಹಾಗೂ ಭದ್ರಾ ಜಲಾಶಯಗಳ ನೀರಿನ ಮಟ್ಟವು ಕಳೆದ ವರ್ಷದ ಇದೇ ದಿನದ ಅಂಕಿ-ಅಂಶಗಳಿಗಿಂತ ಕಡಿಮೆಯಾಗಿದೆ. ಒಟ್ಟಾರೆ, ರಾಜ್ಯದಲ್ಲಿ ಮಳೆಯ ಪ್ರಮಾಣ ಹಾಗೂ ಜಲಾನಯನ ಪ್ರದೇಶಗಳಲ್ಲಿನ ಪರಿಸ್ಥಿತಿಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಜಲಾಶಯಗಳ ಒಳಹರಿವಿನಲ್ಲಿ ಮತ್ತಷ್ಟು ಏರಿಳಿತ ಉಂಟಾಗುವ ಸಾಧ್ಯತೆ ಇದೆ.


Click it and Unblock the Notifications
