ದಲಿತ ಸಿಎಂ, ಚರ್ಚೆಗೆ ತೆರೆ ಎಳೆದ ದಿಗ್ವಿಜಯ್
ಬೆಂಗಳೂರು, ಫೆ. 23 : ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಕೇಳಿಬರುತ್ತಿದ್ದ ದಲಿತರಿಗೆ ಮುಖ್ಯಮಂತ್ರಿ ಪಟ್ಟ ನೀಡುವ ವಿಚಾರಕ್ಕೆ ದಿಗ್ವಿಜಯ್ ಸಿಂಗ್ ತೆರೆ ಎಳೆದಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಿಸುವ ಯಾವುದೇ ಪ್ರಸ್ತಾಪ ಹೈಕಮಾಂಡ್ ಮುಂದೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಪ್ರವಾಸದಲ್ಲಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದರು. ದಲಿತ ಸಿಎಂ ಪಟ್ಟ ನೀಡುವ ವಿಚಾರ ತಮಗೆ ಅಚ್ಚರಿ ತಂದಿದೆ ಎಂದು ಹೇಳಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಿಸುವ ಯಾವುದೇ ಪ್ರಸ್ತಾಪ ಇಲ್ಲವೆಂದು ಹೇಳಿದರು. [ದಲಿತರಿಗೆ ಸಿಎಂ ಪಟ್ಟ, ಕಾಂಗ್ರೆಸ್ ನಾಯಕರು ಹೇಳುವುದೇನು?]
ಕಳೆದ ಮಂಗಳವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದ್ದ 15ಕ್ಕೂ ಅಧಿಕ ದಲಿತ ಸಂಘಟನೆಗಳ ಮುಖಂಡರು ದಲಿತರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಚರ್ಚೆ ಹುಟ್ಟು ಹಾಕಿದ್ದರು. ಈ ಬಗ್ಗೆ ಒಂದು ವಾರದಿಂದ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿತ್ತು. [ದಲಿತರಿಗೆ ಸಿಎಂ ಪಟ್ಟ, ಮೌನ ಮುರಿದ ಪರಮೇಶ್ವರ್!]
ದಲಿತರನ್ನು ಮುಖ್ಯಮಂತ್ರಿ ಮಾಡುವ ಬೇಡಿಕೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈ ಬೇಡಿಕೆ ಇಡುತ್ತಿರುವುದು ಮತ್ತು ಸಭೆ ನಡೆಸಿದವರು ಕಾಂಗ್ರೆಸ್ ಪಕ್ಷದವರಲ್ಲ ಎಂದು ಅವರು ತಿಳಿಸಿದ್ದರು. ದಲಿತ ಸಿಎಂ ಚರ್ಚೆಯ ವಿವರಗಳನ್ನು ನೋಡಿ

ಮುಖ್ಯಮಂತ್ರಿಗಳ ಬದಲಾವಣೆ ಇಲ್ಲ
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ದಲಿತ ಸಿಎಂ ಬೇಡಿಕೆಗೆ ತೆರೆ ಎಳೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡುವ ಯಾವುದೇ ನಿರ್ಧಾರ ಹೈಕಮಾಂಡ್ ಮುಂದೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದಲಿತ ಸಿಎಂ ಬೇಡಿಕೆ ತಮಗೆ ಅಚ್ಚರಿ ಉಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.

ಸಿಎಂ ಚರ್ಚೆ ಹುಟ್ಟು ಹಾಕಿದ್ದರು
ಕಳೆದ ಮಂಗಳವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದ್ದ 15ಕ್ಕೂ ಅಧಿಕ ದಲಿತ ಸಂಘಟನೆಗಳ ಮುಖಂಡರು ದಲಿತರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಚರ್ಚೆ ಹುಟ್ಟು ಹಾಕಿದ್ದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಶನಿವಾರ ಬೆಂಗಳೂರಿನಲ್ಲಿ ಪ್ರತಿಕಾಗೋಷ್ಠಿ ನಡೆಸಿ ತಮ್ಮ ಬೇಡಿಕೆಗೆ ತಾವು ಬದ್ಧವಾಗಿದ್ದೇವೆ, ದಲಿತರಿಗೆ ಸಿಎಂ ಸ್ಥಾನ ದೊರೆಯಬೇಕು ಎಂದು ಪುನಃ ಹೇಳಿದ್ದರು.

ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದರು
ದಲಿತರನ್ನು ಮುಖ್ಯಮಂತ್ರಿ ಮಾಡುವ ಬೇಡಿಕೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. 'ದಲಿತರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಆಗ್ರಹಿಸಲು ಸಭೆ ನಡೆಸಿದವರು ಕಾಂಗ್ರೆಸ್ಸಿಗರಲ್ಲ. ಹೀಗಾಗಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ಸಭೆಯ ಬಗ್ಗೆ ಹೈಕಮಾಂಡ್ ಗಮನಕ್ಕೂ ತರುವ ಅಗತ್ಯವಿಲ್ಲ' ಎಂದು ತಿಳಿಸಿದ್ದರು.

ಪರಮೇಶ್ವರ್ ಏನು ಹೇಳಿದ್ದರು?
ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಬೇಡಿಕೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮೌನ ಮುರಿದಿದ್ದರು. ಶನಿವಾರ ಮಾತನಾಡಿದ್ದ ಅವರು, 'ನಾನು ಸಿಎಂ ಸ್ಥಾನಕ್ಕೆ ಅರ್ಹ ವ್ಯಕ್ತಿಯಾಗಿದ್ದೇನೆ. ಚುನಾವಣೆಗೆ ಮೊದಲು ನಾನು ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದೆ' ಎಂದು ಹೇಳಿದ್ದರು. 'ದಲಿತರಿಗೆ ಸಿಎಂ ಸ್ಥಾನ ನೀಡಿದರೆ ತಪ್ಪೇನಿದೆ? ಎಂದು ಪ್ರಶ್ನಿಸಿದ್ದ ಅವರು, ದಲಿತ ಸಿಎಂ ಸ್ಥಾನದ ಬೇಡಿಕೆ ಇಟ್ಟಿರುವುದು ಪಕ್ಷದವರಲ್ಲ. ಆದ್ದರಿಂದ ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದರು.

ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವರ ಬೆಂಬಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಸಚಿವರು ನಿಂತಿದ್ದರು. ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಬೇಡಿಕೆ ಇಟ್ಟ ದಲಿತ ಸಂಘಟನೆಗಳ ಸಭೆಯಲ್ಲಿ ಪಾಲ್ಗೊಂಡವರಿಗೂ ಮತ್ತು ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ' ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ, ಟಿ.ಬಿ.ಜಯಚಂದ್ರ ಹೇಳಿದ್ದರು. ಸಚಿವ ಎಚ್.ಆಂಜನೇಯ 2018ರಲ್ಲಿ ಈ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದ್ದರು.












Click it and Unblock the Notifications