ರಾಜ್ಯದ ಮೂರು ಕಡೆ ಅಪಘಾತ, 8 ಜನ ದುರ್ಮರಣ
ಹಾಸನ/ರಾಯಚೂರು/ಬಳ್ಳಾರಿ, ಮೇ 31: ರಾಜ್ಯದ ಮೂರು ಕಡೆ ಭಾನುವಾರ ನಡೆದ ಅಪಘಾತದಲ್ಲಿ ಒಟ್ಟು 8 ಮಂದಿ ಮೃತರಾಗಿದ್ದು, ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆಗಳು ವರದಿಯಾಗಿದೆ. ಹಾಸನ, ರಾಯಚೂರು ಹಾಗೂ ಬಳ್ಳಾರಿ ಸಮೀಪ ಅಪಘಾತಗಳು ಸಂಭವಿಸಿದೆ.
ಹೊಳೆನರಸೀಪುರ: ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿ ಗ್ರಾಮದ ಬಳಿ ಭಾನುವಾರ ಮುಂಜಾನೆ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿಯಾಗಿದೆ. ಜೀಪ್ ನಲ್ಲಿದ್ದ ಹೊಳೆನರಸೀಪುರದ ನಿವಾಸಿಗಳಾದ ಜಯಂತಿ (40), ಶಶಿಕಲಾ (18), ಯಶೋಧ (28) ಮೃತಪಟ್ಟಿದ್ದಾರೆ. ಉಳಿದ ಮೂವರಿಗೆ ಗಂಭೀರ ಗಾಯಗಳಾಗಿದೆ.
ಚಾಲಕ ಸೇರಿದಂತೆ ಮತ್ತಿಬ್ಬರು ಗಾಯಾಳುಗಲನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಹಾಸನದ ಕೈಗಾರಿಕಾ ಪ್ರದೇಶದಲ್ಲಿರುವ ಸ್ಪಿರಿಟ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುವ ವೇಳೆ ಈ ದುರ್ಘಟನೆ ನಡೆದಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಹೇಳಿದ್ದಾರೆ.
ಬಳ್ಳಾರಿ: ಬಳ್ಳಾರಿ ತಾಲೂಕಿನ ಕುಡಿತಿನಿ ಬಳಿ ಸರ್ಕಾರಿ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು 25 ವರ್ಷ ವಯಸ್ಸಿನ ರಾಜೇಶ್, 30 ವರ್ಷ ವಯಸ್ಸಿನ ಜಗದೀಶ್, 26 ವರ್ಷದ ಸರವಣಕುಮಾರ್ ಎಂದು ಗುರುತಿಸಲಾಗಿದೆ. ಬಸ್ ಚಾಲಕ ಘಟನೆ ನಡೆದ ನಂತರ ಪರಾರಿಯಾಗಿದ್ದಾರೆ. ಬಳ್ಳಾರಿಯಿಂದ ದಾವಣೆಗೆರೆಗೆ ಕಡೆಗೆ ಬಸ್ ಹೋಗುತ್ತಿತ್ತು ಎಂದು ಪ್ರಕರಣ ದಾಖಲಿಸಿಕೊಂಡಿರುವ ಕುಡಿತಿನಿ ಠಾಣಾಧಿಕಾರಿಗಳು ಹೇಳಿದ್ದಾರೆ.
ರಾಯಚೂರು: ಲಿಂಗಸೂರಿನಿಂದ ಮಸ್ತಿ ಕಡೆಗೆ ಹೋಗುತ್ತಿದ್ದ ಕ್ರೂಸರ್ ಜೀಪ್ ಹಾಗೂ ಬೈಕ್‌ಗೆ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಬೆಳಗ್ಗೆ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಲಿಂಗಸೂರಿನ ನಾಗರಾಜ ರಾಮಸ್ವಾಮಿ (24), ವೀರೇಶ ಬಡಿಗೇರ (30) ಎಂದು ಗುರುತಿಸಲಾಗಿದೆ. ಹನುಮಂತ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗೆಂದು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಲಿಂಗಸೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ರೂಸರ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.












Click it and Unblock the Notifications