Breaking: ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ; ಕಾಂಗ್ರೆಸ್ ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 11: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಚರ್ಚೆಯಲ್ಲಿರುವಾಗಲೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ್ ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದನ್ನು ಕಾಂಗ್ರೆಸ್ ಚೆನ್ನಾಗಿಯೇ ಬಳಸಿಕೊಳ್ಳುತ್ತಿದೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಗೊಂದಲಮಯ ಹೇಳಿಕೆಗಳನ್ನು ಗುರಿಯಾಗಿಸಿಕೊಂಡು, ಕರ್ನಾಟಕ ಬಿಜೆಪಿಯಲ್ಲಿ ಅವರಿಗೆ ತಮ್ಮ ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಸ್ಪಷ್ಟತೆ ಇಲ್ಲದೆ ಕಾಂಗ್ರೆಸ್ ಕೈಗೆ ಕೋಲು ಕೊಟ್ಟು ಹೊಡೆಸಿಕೊಂಡು ಅಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, "ಕರ್ನಾಟಕ ಬಿಜೆಪಿ ಗೊಂದಲಗಳಿಗೆ ಕಾಂಗ್ರೆಸ್ ಹೊಣೆಯೇ? ಸಿಎಂ ಬದಲಾವಣೆ ವಿಚಾರದ ನಂತರ ರಾಜ್ಯಾಧ್ಯಕ್ಷರ ಬದಲಾವಣೆಯ ಗೊಂದಲ" ಎಂದಿದೆ.

"ರಾಜ್ಯಾಧ್ಯಕ್ಷರ ಅವಧಿ ಮುಗಿದಿದೆ ಎಂದು ಬಿಎಸ್ ಯಡಿಯೂರಪ್ಪ್ ಹೇಳಿದರೆ, ಯಾರು ಹೇಳಿದವರು ಎಂದು ನಳೀನ್ ಕುಮಾರ್ ಕಟೀಲ್ ಕೇಳುತ್ತಾರೆ. ಸ್ಪಷ್ಟತೆ ಇಲ್ಲದೆ ಕಾಂಗ್ರೆಸ್ ಕೈಗೆ ಕೋಲು ಕೊಡುವವರೂ ಇವರೇ, ಹೊಡೆಸಿಕೊಂಡ ನಂತರ ಗೋಳಾಡುವವರೂ ಇವರೇ!" ಎಂದು ಲೇವಡಿ ಮಾಡಿದೆ.
ರಾಜ್ಯಕ್ಕೆ ಅಮಿತ್ ಶಾ ಬಂದು ಹೋದ ನಂತರ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣವಿದೆ. 40% ಸರ್ಕಾರದಲ್ಲಿ 3ನೇ ಸಿಎಂ ಸೀಟು ಹತ್ತುವ ಕಾಲ ಸನ್ನಿಹಿತವಾಗಿದೆ. ಕೈಗೊಂಬೆ ಬಸವರಾಜ ಬೊಮ್ಮಾಯಿ ಅವರ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ. ಅಮಿತ್ ಶಾ ಅವರ ಭೇಟಿಯ ಬಗ್ಗೆ ಸರ್ಕಾರದ ಯಾವೊಬ್ಬ ಸಚಿವರು ಮಾತಾಡದಿರುವುದು, ಸಂಭ್ರಮವಿಲ್ಲದಿರುವುದೇ ಇದಕ್ಕೆ ನಿದರ್ಶನ ಎಂದು ಕಾಂಗ್ರೆಸ್ ಹೇಳಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಯಡಿಯೂರಪ್ಪ, "ಯಾರು ಏನೇ ಹೇಳಿದರೂ ಬಸವರಾಜ ಬೊಮ್ಮಾಯಿ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸುವುದಾಗಿ" ತಿಳಿಸಿದ್ದರು. ಜೊತೆಗೆ ಪಕ್ಷದ ರಾಜ್ಯಘಟಕದ ಅಧ್ಯಕ್ಷ ಅವಧಿ ಮುಗಿಯಲಿದ್ದು, ಅದಕ್ಕೆ ಬದಲಾವಣೆ ಮಾಡಬಹುದು. ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡಲಿದ್ದಾರೆ" ಎಂದು ಹೇಳಿದ್ದರು.

ಈ ಕುರಿತು ಮಾತನಾಡಿದ್ದ ನಳಿನ್ ಕುಮಾರ್ ಕಟೀಲ್, 'ನನ್ನ ಅವಧಿ ಮುಗಿದಿದೆ ಅಂತಾ ಹೇಳಿದವರು ಯಾರು? ಅವಧಿ ಮುಗಿದಾಗ ಸಹಜವಾಗಿ ಬದಲಾವಣೆ ಆಗುತ್ತದೆ. ಇದನ್ನೇ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಹೇಳಿದ್ದಾರೆ' ಎಂದಿದ್ದರು.
Recommended Video
ಈ ಎರಡು ಹೇಳಿಕೆಗಳನ್ನು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಮತ್ತೊಮ್ಮೆ ಬಿಜೆಪಿಯ ಕಾಲೆಳೆದಿದೆ.












Click it and Unblock the Notifications