Congress Party: ಶಾಸಕಾಂಗ ಪಕ್ಷದ ಸಭೆಯಲ್ಲಿ ಕಿತ್ತಾಡಿಕೊಂಡ ಕಾಂಗ್ರೆಸ್ ಪ್ರಭಾವಿ ಸಚಿವರು, ಯಾವ ವಿಚಾರಕ್ಕೆ?
ರಾಜ್ಯ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ಸಭೆ ಸೋಮವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದಿದೆ. ಈ ಸಭೆಯು ಹಲವು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿವೆ. ಆಂತರಿಕವಾಗಿ ನಡೆದ ಈ ಸಭೆಯಲ್ಲಿ ಕಾಂಗ್ರೆಸ್ ನಾಯಕರ ಅಸಮಾಧಾನ ಭುಗಿಲೆದ್ದಿದೆ. ಮತ್ತೊಂದೆಡೆ ಇಬ್ಬರು ಸಚಿವರು ಕೂಡ ಪರಸ್ಪರ ಕಿತ್ತಾಡಿಕೊಂಡು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿರುವ ವಿಚಾರ ಇದೀಗ ಹೊರಬಂದಿದೆ. ಇಷ್ಟಕ್ಕೂ ಸಭೆಯಲ್ಲಿ ಕಿತ್ತಾಡಿಕೊಂಡ ಸಚಿವರು ಯಾರು? ಯಾವ ಕಾರಣಕ್ಕಾಗಿ ಗಲಾಟೆ ಮಾಡಿಕೊಂಡರು ಎನ್ನುವ ಇನ್‌ಸೈಡ್ ಸ್ಟೋರಿ ಇಲ್ಲಿದೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಚಿವರಾದ ಸಚಿವ ಎಚ್‌ಕೆ ಪಾಟೀಲ್, ಜಿ.ಪರಮೇಶ್ವರ್, ಕೆಜೆ ಜಾರ್ಜ್, ಎಂಬಿ ಪಾಟೀಲ್, ಎನ್‌ಎಸ್ ಬೋಸರಾಜು, ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ವಿಧಾನಸಭಾ ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ ಸೇರಿದಂತೆ ಕಾಂಗ್ರೆಸ್‌ನ ಸಚಿವರು, ಶಾಸಕರು ಉಪಸ್ಥಿತರಿದ್ದರು.

ಈ ವೇಳೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಇಬ್ಬರು ಸಚಿವರು ಬಹಿರಂಗವಾಗಿಯೇ ಕಿತ್ತಾಡಿಕೊಂಡಿದ್ದಾರೆ ಎನ್ನಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಕಿತ್ತಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಟ್ರಾನ್ಸ್‌ಫರ್ ವಿಚಾರವಾಗಿ ಇಬ್ಬರು ಸಚಿವರ ನಡುವೆ ಗಲಾಟೆ ನಡೆದಿದ್ದು, ಸಭೆ ನಂತರ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ಇಬ್ಬರು ಸಚಿವರ ನಡುವೆ ವಾಗ್ವಾದ ನಡೆದಿದ್ದು, ಇಬ್ಬರೂ ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿದ್ದರು ಎನ್ನಲಾಗಿದೆ.
ರಾಯಚೂರು ಜಿಲ್ಲೆಗೆ ಸಂಬಂಧಿಸಿದಂತೆ ಟ್ರಾನ್ಸ್‌ಫರ್ ವಿಚಾರವಾಗಿ ಸಚಿವ ಬೋಸರಾಜು ವಿರೋಧ ವ್ಯಕ್ತಪಡಿಸಿದ್ದಾರೆ. ರಾಯಚೂರು ಜಿಲ್ಲೆಯವನು ನಾನು. ಹೀಗಿರುವಾಗ ಟ್ರಾನ್ಸ್‌ಫರ್ ವಿಚಾರಕ್ಕೆ ನೀವೇಕೆ ಪತ್ರ ಕೊಡ್ತೀರಿ ಅಂತ ಗರಂ ಆಗಿದ್ದಾರೆ. ಇದಕ್ಕೆ ಉತ್ತರಿಸಿದ ಶರಣ್ ಪ್ರಕಾಶ್ ಪಾಟೀಲ್ ಅವರು ಶಾಸಕರು ಕೇಳಿದ್ದಕ್ಕೆ ಪತ್ರ ನೀಡಿದ್ದೇನೆ ಎಂದು ಹೇಳಿದ್ದಾರೆ. ಶಾಸಕರ ಬೇಡಿಕೆಗಳನ್ನು ಈಡೇರಿಸುವುದು ನನ್ನ ಕೆಲಸ ಎಂದೂ ಶರಣ ಪ್ರಕಾಶ್ ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ನನ್ನ ಒಂದು ಮಾತು ಕೇಳದೆ ಯಾಕೆ ಪತ್ರ ಕೊಟ್ರಿ ಎಂದೂ ಭೋಸರಾಜು ಕೋಪಗೊಂಡಿದ್ದಾರೆ. ಹೀಗೆ ಮಾತಿಗೆ ಮಾತು ಬೆಳೆದು ಕೊನೆಗೆ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ಕೊನೆಗೆ ಅಲ್ಲಿದ್ದ ಶಾಸಕರೆಲ್ಲ ಮಧ್ಯಪ್ರವೇಶಿಸಿ ಇಬ್ಬರೂ ಸಚಿವರನ್ನು ಕೂಲ್ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಶಾಸಕರು ಕೂಡ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ. ಸಚಿವರು ನಮ್ಮ ಕೈಗೆ ಸಿಗುತ್ತಿಲ್ಲ. ಸರ್ಕಾರ ರಚನೆಯಾಗಿ ಎರಡು ವರ್ಷಗಳಾದರೂ ಸಚಿವರು ನಮ್ಮ ಕೈಗೆ ಸಕಾಲಕ್ಕೆ ಸಿಗುತ್ತಿಲ್ಲ. ಭೇಟಿಗೆ ಅವಕಾಶ ಕೇಳಿದರೂ ಏನೇನೋ ಕಾರಣ ನೀಡುತ್ತಾರೆ ಎಂದು ದೂರಿದ್ದಾರೆ. ಶಾಸಕಾಂಗ ಸಭೆಯಲ್ಲಿ ಶಾಸಕ ಗಣಿಗ ರವಿ ಅವರೂ ಆಕ್ರೋಶ ಹೊರಹಾಕಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಶಾಸಕರ ಹಳೇ ಬಿಲ್ ಕ್ಲಿಯರ್ ಆಗುತ್ತಿದ್ದು, ನಮ್ಮದೇ ಪಕ್ಷದ ಬಿಲ್ ಪಾವತಿಯಾಗುತ್ತಿಲ್ಲ ಎಂದು ದೂರಿದ್ದಾರೆ.












Click it and Unblock the Notifications