ಕಾಂಗ್ರೆಸ್ ನಾಯಕರ ದಿಢೀರ್ ಉಪಹಾರ ಕೂಟ: ಆಪರೇಷನ್ ಕಮಲದ ಚರ್ಚೆ
ಬೆಂಗಳೂರು, ಜನವರಿ 14: ಕಾಂಗ್ರೆಸ್‌ನ ಮೂವರು ಶಾಸಕರು ಬಿಜೆಪಿ ಪಾಳಯಕ್ಕೆ ಹಾರಲು ಸಜ್ಜಾಗಿ ಮುಂಬೈಗೆ ಹಾರಿರುವ ಬೆನ್ನಲ್ಲೆ ಕಾಂಗ್ರೆಸ್ ಮುಖಂಡರು ದಿಢೀರ್ ಉಪಹಾರಕೂಟ ಆಯೋಜಿಸಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.
ನಗರದ ಖಾಸಗಿ ಹೊಟೆಲ್‌ನಲ್ಲಿ ಕಾಂಗ್ರೆಸ್‌ನ ಎಲ್ಲ ಸಚಿವರು, ಕೆಪಿಸಿಸಿ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರು ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಉಪಹಾರಕೂಟದ ನೆಪದಲ್ಲಿ ಒಟ್ಟು ಸೇರಿ ಆಪರೇಷನ್ ಕಮಲದ ಬಗ್ಗೆ ಚರ್ಚೆ ನಡೆಸಿ ಪ್ರತಿ ತಂತ್ರದ ಕುರಿತು ಮಾತನಾಡಿದ್ದಾರೆ.
ಹೊರಗೆ ಹೆಜ್ಜೆ ಇಡಲು ಸಜ್ಜಾಗಿರುವ ಶಾಸಕರನ್ನು ಮತ್ತೆ ವಾಪಸ್ ಕರೆತರು ಗಟ್ಟಿಯಾದ ತಂಡವನ್ನು ರಚಿಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಿದ್ದಾರೆ ಎಂದು ಗೊತ್ತಾಗಿದೆ. ಜೊತೆಗೆ ಆಪರೇಷನ್ ಕಮಕ್ಕೆಮಪ್ರತಿಯಾಗಿ ಬಿಜೆಪಿ ಶಾಸಕರನ್ನು ತಮ್ಮತ್ತ ಸಹ ಸೆಳೆಯುವ ಬಗ್ಗೆ ಸಹ ಸಭೆಯಲ್ಲಿ ಮಾತನಾಡಲಾಗಿದೆ.

ಬಿಜೆಪಿ ಶಾಸಕರೆಲ್ಲಾ ದೆಹಲಿಯಲ್ಲಿದ್ದು, ಮೇಲಿಂದ ಮೇಲೆ ವಿವಿಧ ಸಭೆಗಳಲ್ಲಿ ಅವರು ಭಾಗಿ ಆಗುತ್ತಿದ್ದಾರೆ. ಇದೇ ಸಮಯದಲ್ಲಿ ಕಾಂಗ್ರೆಸ್‌ನ ಮೂರು ಶಾಸಕರು ಮುಂಬೈಗೆ ತೆರಳಿರುವುದು ಕಾಂಗ್ರೆಸ್ ಪಾಳಯದಲ್ಲಿ ಭೀತಿ ಹೆಚ್ಚಿದೆ.
ಕಾಂಗ್ರೆಸ್ ಶಾಸಕರನ್ನು ವಾಪಸ್ ಕರೆತರುವ ಹಾಗೂ ಆಪರೇಷನ್ ಕಮಲಕ್ಕೆ ಪ್ರತಿ ತಂತ್ರವನ್ನು ಜಾರಿಮಾಡುವ ಹೊಣೆಗಾರಿಕೆಯನ್ನು ಡಿ.ಕೆ.ಶಿವಕುಮಾರ್ ಅವರಿಗೆ ನೀಡಲಾಗಿದೆ.

ಇದೇ ವಿಷಯವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿ.ಕೆ.ಶಿವಕುಮಾರ್ ಅವರು, ಶಾಸಕರು ಮುಂಬೈಗೆ ಹೋಗಿದ್ದಾರೆ. ಅವರು ಯಾವ ಹೊಟೆಲ್‌ನಲ್ಲಿದ್ದಾರೆ ಎಂಬುದು ಗೊತ್ತಿದೆ. ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರನ್ನು ಕರೆತರಲು ಸಹ ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.












Click it and Unblock the Notifications