Congress Candidates 3rd List: ಲಕ್ಷ್ಮಣ ಸವದಿ ಸೇರಿ ಟಿಕೆಟ್ ಪಡೆದ ಪ್ರಮುಖ ನಾಯಕರು- ಉಳಿದವರು ಯಾರು ತಿಳಿಯಿರಿ
ಬೆಂಗಳೂರು, ಏಪ್ರಿಲ್ 15: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುಣಾವಣೆಗೆ ( Karnataka Elections 2023 ) ಕಾಂಗ್ರೆಸ್ ( Congress ) ಮೂರನೇ ಪಟ್ಟಿ ಬಿಡುಗಡೆಯಾಗಿದೆ. ಕಾಂಗ್ರೆಸ್ ಪಕ್ಷವು 58 ಕ್ಷೇತ್ರಗಳಲ್ಲಿ ಟಿಕೆಟ್ ಬಾಕಿ ಇರಿಸಿಕೊಂಡಿತ್ತು. ಈ ಪೈಕಿ 43 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಆ ಮೂಲಕ ಇನ್ನೂ 15 ಕ್ಷೇತ್ರಗಳ ಟಿಕೆಟ್ ಅನ್ನು ಬಾಕಿ ಉಳಿಸಿಕೊಂಡಿದೆ.
ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಅಥಣಿ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಪಕ್ಷವು ತನ್ನ ನಾಯಕರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ ಎಂದು ಲಕ್ಷ್ಮಣ ಸವದಿ ಆರೋಪಿಸಿ, ಕಾಂಗ್ರೆಸ್ ಸೇರಿದ್ದಾರೆ. ಇದಾದ ಒಂದು ದಿನದ ಬಳಿಕ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ದೊರೆತಿದೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಪಕ್ಷದ ಹಿರಿಯ ನಾಯಕರಾಗಿರುವ ಸವದಿ ಅವರಿಗೆ ಟಿಕೆಟ್ ನಿರಾಕರಿಸುವ ಮೂಲಕ ಬಿಜೆಪಿ ಅವರನ್ನು ಈ ರೀತಿ ನಡೆಸಿಕೊಳ್ಳಬಾರದಿತ್ತು ಎಂದು ಹೇಳಿದ್ದಾರೆ.
ಕೋಲಾರ ಕ್ಷೇತ್ರವನ್ನು ಕೊತ್ತೂರು ಮಂಜುನಾಥ್‌ಗೆ ನೀಡಲಾಗಿದೆ. ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಾರೆ ಎಂಬ ಉಹಾಪೋಹಗಳಿಗೆ ತೆರೆ ಬಿದ್ದಿದೆ.
ಜನತಾದಳ (ಜಾತ್ಯತೀತ) ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿರುವ ಶಿವಲಿಂಗೇಗೌಡ ಅವರಿಗೆ ಅರಸಿಕೆರೆ ಟಿಕೆಟ್ ನೀಡಲಾಗಿದೆ. ಶಿವಲಿಂಗೇಗೌಡರು ಹಾಸನ ಭಾಗದಲ್ಲಿ ತಮ್ಮದೇ ಆದ ಪ್ರಾಮಲ್ಯವನ್ನು ಹೊಂದಿದ್ದಾರೆ.
ಬೆಂಗಳೂರಿನ ಬೊಮ್ಮನಹಳ್ಳಿಯಿಂದ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಗೌಡ ಅವರಿಗೆ ಟಿಕೆಟ್ ನೀಡಲಾಗಿದೆ. ಉಮಾಪತಿ ಗೌಡ ಅವರು ಮೂರು ಬಾರಿ ಬಿಜೆಪಿ ಶಾಸಕರಾಗಿರುವ ಸತೀಶ್ ರೆಡ್ಡಿ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಮಾಜಿ ಸಚಿವೆ ಮೋಟಮ್ಮ ಪುತ್ರಿ ನಯನಾ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದಿದ್ದಾರೆ. ಮೂಡಗೆರೆ ವಿಧಾನಸಭೆ ಕ್ಷೇತ್ರದಲ್ಲಿ ಸಾಕಷ್ಟು ವಿರೋಧಗಳ ನಡುವೆಯೂ ನಯನಾ ಅವರಿಗೆ ಟಿಕೆಟ್ ದೊರೆತಿದೆ.
ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾ ಕಾಂಗ್ರೆಸ್‌ನಿಂದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಾರ್ಗರೇಟ್ ಆಳ್ವಾ ಅವರು ಕೇಂದ್ರ ಮಾಜಿ ಸಚಿವೆ.
ಪ್ರತಿಷ್ಠಿತ ಕ್ಷೇತ್ರವಾದ ಶಿವಮೊಗ್ಗ ನಗರದಿಂದ ಎಸ್‌ಸಿ ಯೋಗೇಶ್ ಕಾಂಗ್ರೆಸ್ ಪಕ್ಷದ ಟಿಕೆಟ್ ಗಳಿಸುವಲ್ಲಿ ಸಫಲರಾಗಿದ್ದಾರೆ. ಕುಂದಗೋಳದಿಂದ ಹಾಲಿ ಶಾಸಕಿ ಕುಸುಮಾ ಶಿವಳ್ಳಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ಹಲವು ಆಕಾಂಕ್ಷಿಗಳನ್ನು ಹೊಂದಿದ್ದ ಕುಂದುಗೋಳ ಕ್ಷೇತ್ರದ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.
ಕರ್ನಾಟಕ ವಿಧಾನಸಭೆಯಲ್ಲಿ ಒಟ್ಟು 224 ಸ್ಥಾನಗಳಿವೆ. ಮೂರನೇ ಪಟ್ಟಿಯೊಂದಿಗೆ ಕಾಂಗ್ರೆಸ್ ಈಗ ಒಟ್ಟು 209 ಅಭ್ಯರ್ಥಿಗಳನ್ನು ಘೋಷಿಸಿದೆ. ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಅವರು ಕೋಲಾರದಿಂದಲೇ ಸ್ಪರ್ಧಿಸುವುದಾಗಿ ಈ ಹಿಂದೆ ಘೋಷಿಸಿದ್ದರು. ಆದರೆ, ಕೋಲಾರ ಸಿದ್ದರಾಮಯ್ಯನವರಿಗೆ ಸೇಫ್ ಆಗಿಲ್ಲವೆಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರಿನ ವರುಣಾದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಲು ಮುಂದಾಗಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಕಲಬುರಗಿ ಕ್ಷೇತ್ರದ ಚಿತಾಪುರ (ಎಸ್‌ಸಿ) ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ದೇವನಹಳ್ಳಿ (ಎಸ್‌ಸಿ) ಕ್ಷೇತ್ರದಿಂದ ಕಾಂಗ್ರೆಸ್‌ನ ಮಾಜಿ ಸಂಸದ ಕೆ ಎಚ್ ಮುನಿಯಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.












Click it and Unblock the Notifications