Karnataka Coast Rain: 24 ಗಂಟೆಗಳಲ್ಲಿ ಮಂಗಳೂರು ವ್ಯಾಪ್ತಿಯಲ್ಲಿ ಅತೀ ಗರಿಷ್ಠ ಮಳೆ ದಾಖಲು
ಮಂಗಳೂರು, ಜೂನ್ 29: ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ಮುಂಗಾರು ಬೀಡು ಬಿಟ್ಟಂತೆ ಕಾಣುತ್ತಿದೆ. ಈ ಭಾಗದ ಜಿಲ್ಲೆಗಳಲ್ಲಿ ವಿಪರೀತ ಮಳೆ ದಾಖಲಾಗಿದೆ. ಅದರಲ್ಲೂ ಮಂಗಳೂರು ತಾಲೂಕಿನ ಕೋಟೆಕಾರ್ ಗ್ರಾಮಪಂಚಾಯತಿಯಲ್ಲಿ ದಾಖಲೆ ಮಟ್ಟದಲ್ಲಿ ಅತ್ಯಧಿಕ ಗರಿಷ್ಠ ಮಳೆ ಸುರಿದಿದೆ.
ಕರಾವಳಿಯ ಮೂರು ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಸಾಧಾರಣವಾಗಿ ಸುರಿಯುತ್ತಿದ್ದ ಮಳೆಯು ಮಂಗಳವಾರ ರಾತ್ರಿಯಿಂದಲೇ ಬುಧವಾರ ಬೆಳಗಿನ ಜಾವದವರೆಗೂ ವ್ಯಾಪಕವಾಗಿ ಬಿದ್ದಿದೆ. ಮಂಗಳೂರು ತಾಲೂಕಿನ ಕೋಟೆಕಾರ್ ಗ್ರಾಮ ಪಂಚಾಯಿತಿಯಲ್ಲಿ ಕೇವಲ 24 ಗಂಟೆಗಳಲ್ಲಿ ಅತ್ಯಧಿಕ ಗರಿಷ್ಠ 245 ಮಿಲಿ ಮೀಟರ್ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಕೆಲವೇ ಗಂಟೆಗಳಲ್ಲಿ 169 ಮಿ.ಮೀ ಮಳೆಯಾಗಿದ್ದರೆ, ಉತ್ತರ ಕನ್ನಡದಲ್ಲಿ 122 ಮಿ.ಮೀ ದಾಖಲಾಗಿದೆ. ಇನ್ನೂ ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಒಂದೇ ದಿನ 123 ಮಿ.ಮೀ.ಗಿಂತಲೂ ಅಧಿಕ ಮಳೆ ಸುರಿದಿದೆ. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಹತ್ತು ಸ್ಥಳಗಳಲ್ಲಿ ಭಾರೀ ಮಳೆಯಾಗಿದೆ ಎಂಬ ಅಂಶಗಳನ್ನು
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNMDC) ತಿಳಿಸಿದೆ.
KSNMDC ನೀಡಿರುವ ಮಳೆ ಮುನ್ಸೂಚನೆ ಪ್ರಕಾರ, ರಾಜ್ಯದ ಬಹುತೇಕ ಭಾಗಗಳಲ್ಲಿ ಚದುರಿದಂತೆ ಅಲ್ಲಲ್ಲಿ ತುಂತುರು ಮಳೆಯಾಗಲಿದೆ. ಅದೇ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಮುಂದುವರಿಯಲಿದೆ.
ಹವಾಮಾನ ಇಲಾಖೆಯ ವರದಿಯಲ್ಲಿ ತಿಳಿಸಿರುವಂತೆ ಜೂನ್ 1ರಿಂದ 27 ರವರೆಗೆ ಕರಾವಳಿ ಪ್ರದೇಶಗಳು 263 ಮಿಮೀ ಸಂಚಿತ ಮಳೆ ಸ್ವೀಕರಿಸಿವೆ. ಇದು ಸರಾಸರಿ 719 ಮಿಮೀಗೆ ಮಳೆಗೆ ಹೋಲಿಸಿದರೆ ಶೇಕಡಾ 67 ನಷ್ಟು ಕೊರತೆ ಎನ್ನಬಹುದು.. ರಾಜ್ಯದ ಒಟ್ಟು ಸರಾಸರಿ ಪೈಕಿ ಶೇಕಡಾ 59 ರಷ್ಟು ಮಳೆ ಕಡಿಮೆ ದಾಖಲಾಗಿದೆ.
ಗುಡುಗು ಸಹಿತ ಭಾರೀ ಮಳೆ ನಿರೀಕ್ಷೆ
ಮುಂದಿನ ಐದು ದಿನವು ಕರಾವಳಿ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಅಬ್ಬರದ ಮಳೆ ಕಂಡು ಬರಲಿದೆ. ಸಕ್ರಿಯವಾಗಿರುವ ಮುಂಗಾರು ಆ ಜಿಲ್ಲೆಗಳ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ವಿವಿಧ ಸ್ಥಳಗಳಲ್ಲಿ ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆ ಸುರಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಮುಂದಿನ ಐದು ದಿನವು ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಕರಾವಳಿ ತೀರದಲ್ಲಿ ಗಾಳಿಯ ವೇಗ ಹೆಚ್ಚಿರುವುದರಿಂದ ಸಮುದ್ರಕ್ಕೆ ಮೀನುಗಾರಿಕೆಗೆ ನೀರಿಗೆ ಇಳಿಯದಂತೆ ಮೀನುಗಾರರಿಗೆ ಐಎಂಡಿ ಎಚ್ಚರಿಕೆ ನೀಡಿದೆ.
ಇನ್ನೂ ಉತ್ತರ ಕನ್ನಡದ ಕಾರವಾರ ತಾಲೂಕಿನ ಅಮದಳ್ಳಿಯಲ್ಲಿ ಅತೀ ಹೆಚ್ಚು ಅಂದರೆ 181ಮಿ.ಮೀ ಮಳೆ ಆಗಿದೆ. ಅದೇ ರೀತಿ ಭಟ್ಕಳ ತಾಲೂಕಿನ ಮಾವಿನಕುರ್ವೆಯಲ್ಲಿ ಅತೀ ಕಡಿಮೆ 122ಮಿ.ಮೀ ಮಳೆ, ಉಡುಪಿಯ ಪಡುಬಿದ್ರಿಯಲ್ಲಿ 155 ಮಿ.ಮೀ. ಮಳೆ ಬಿದ್ದದ್ದರೆ, ಪಾಂಡೇಶ್ವರದಲ್ಲಿ ಕನಿಷ್ಠ 123 ಮಿ.ಮೀ. ಮಳೆಯಾಗಿದೆ.
ಇದರೊಂದಿಗೆ ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಮೂಡುಬಿದಿರೆ ಮತ್ತು ಕಡಬ ತಾಲೂಕುಗಳು, ಉಡುಪಿ ಜಿಲ್ಲೆಯ ಹೆಬ್ರಿ ಮತ್ತು ಅಂಕೋಲಾ, ಭಟ್ಕಳದ ತಾಲೂಕುಗಳಲ್ಲಿ, ಕುಂದಾಪುರ, ಉಡುಪಿ, ಬೈಂದೂರು, ಬ್ರಹ್ಮಾವರ, ಕಾಪುಗಳಲ್ಲೂ ಸಹ ಭಾರಿ ಮಳೆ ಆಗುವ ಸಾಧ್ಯತೆ ಇದೆ.












Click it and Unblock the Notifications