ಆದಿವಾಸಿ, ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿಶೇಷ ಆಯೋಗ: ಡಿಕೆ ಶಿವಕುಮಾರ್ ಆದೇಶ
ಬೆಂಗಳೂರು: ಆದಿವಾಸಿ, ಅಲೆಮಾರಿ ಸಮುದಾಯಗಳಿಗೆ ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಗುಡ್‌ನ್ಯೂಸ್ ನೀಡಿದ್ದಾರೆ. ಇತ್ತೀಚೆಗಷ್ಟೇ ವಿಶ್ವ ಆದಿವಾಸಿ ದಿನಾಚಾರಣೆ ಕಾರ್ಯಕ್ರಮದಲ್ಲಿ ಈ ವಿಶೇಷ ಆಯೋಗ ರಚನೆಗೆ ಬೇಡಿಕೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಒಂದು ತಿಂಗಳಲ್ಲಿ ಆಯೋಗ ರಚಿಸುವ ವಾಗ್ದಾನ ನೀಡಿದ್ದರು. ಅದರ ಬೆನ್ನಲ್ಲೇ ಈ ಸಮುದಾಯಗಳ ಅಭಿವೃದ್ಧಿಗೆ ಆಯೋಗ ರಚನೆಗೆ ಆದೇಶ ನೀಡಲಾಗಿದೆ.
ಕರ್ನಾಟಕದಲ್ಲಿ ವಾಸಿಸುತ್ತಿರುವ ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳು ಇಂದಿಗೂ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಲವು ಸವಾಲುಗಳನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಅವರ ಅಭಿವೃದ್ಧಿ, ಹಕ್ಕುಗಳ ರಕ್ಷಣೆ ಹಾಗೂ ಸಾಮಾಜಿಕ ನ್ಯಾಯವನ್ನು ಒದಗಿಸುವ ಸಲುವಾಗಿ ವಿಶೇಷ ಆಯೋಗವನ್ನು ರಚಿಸಲು ಸರ್ಕಾರ ನಿರ್ಧರಿಸಿದೆ.

ಸಮುದಾಯದವರಿಗೆ ಸಮಾನ ಅವಕಾಶ
ಉತ್ತಮ ಶಿಕ್ಷಣ, ಪೌಷ್ಟಿಕ ಆಹಾರ, ಗುಣಮಟ್ಟದ ಆರೋಗ್ಯ ಸೇವೆ, ವಸತಿ, ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸುವುದರ ಜೊತೆಗೆ, ಯುವಜನರಿಗೆ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸುವುದೇ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಬದುಕಿನಲ್ಲಿ ಹೊಸ ಭರವಸೆ ಮೂಡಿಸುವುದರ ಜೊತೆಗೆ ಸಮಾನ ಅವಕಾಶಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ವಿಶ್ವ ಆದಿವಾಸಿ ದಿನಾಚರಣೆ: ಸಿಎಂ ವಾಗ್ದಾನ
ಆಗಸ್ಟ್ 11ರಂದು ಬೆಂಗಳೂರಿನ ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ (ರಿ) ಮತ್ತು ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂರಕ್ಷಣಾ ಸಮಿತಿ (ರಿ) ವತಿಯಿಂದ ಆಯೋಜಿಸಿದ್ದ ವಿಶ್ವ ಆದಿವಾಸಿ ದಿನಾಚರಣೆಯ ರಾಜ್ಯ ಮಟ್ಟದ ಸಮಾವೇಶದಲ್ಲಿ ಸಿಎಂ ಡಿಕೆ ಶಿವಕುಮಾರ್ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ್ದ ಡಿಕೆ ಶಿವಕುಮಾರ್ ಅವರು, ಕಾಡಿನಲ್ಲಿರುವ ಆದಿವಾಸಿ ಜನರ ಬದುಕು ಬದಲಾಯಿಸಲು ಶಿಕ್ಷಣ ಹಾಗೂ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸುತ್ತಿದೆ. ಉಳುವವನಿಗೆ ಭೂಮಿ ಕೊಡುವ ಯೋಜನೆಯನ್ನು ಯುಪಿಎ ಸರ್ಕಾರ ಜಾರಿಗೊಳಿಸಿತ್ತು. ಪ್ರಕೃತಿಯ ಮೇಲೆ ಪ್ರೀತಿಯನ್ನಿಟ್ಟುಕೊಂಡು ಬದುಕುತ್ತಿರುವ ನಿಮ್ಮ ಬದುಕು ಶ್ರೇಷ್ಠವಾದದ್ದು. ಆದಿವಾಸಿಗಳೆಲ್ಲರೂ ವಿದ್ಯಾವಂತರಾಗಬೇಕು. ಆದರೆ ಮೂಲ ಕಸುಬಿನಿಂದ ದೂರ ಹೋಗಬಾರದು. ನಿಮ್ಮ ಮೂಲ ಸಿದ್ಧಾಂತವನ್ನು ಕಾಪಾಡಿಕೊಂಡು ಹೋಗಿ. ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿ ಎಂದಿದ್ದರು.
ಕಂದಾಯ ಗ್ರಾಮಗಳಲ್ಲಿ ಈಗಾಗಲೇ ವಾಸದ ಹಕ್ಕುಪತ್ರ ಕೊಟ್ಟಿದ್ದೇವೆ. ಕೆಲವರಿಗೆ ಮನೆ ಹಾಗೂ ಜಮೀನುಗಳನ್ನು ಕೊಟ್ಟಿದ್ದೇವೆ. ಅಲೆಮಾರಿ ಹಾಗೂ ಆದಿವಾಸಿ ಜನರ ಆಯೋಗ ರಚಿಸುವಂತೆ ಡಾ. ಸಿ.ಎಸ್. ದ್ವಾರಕಾನಾಥ್ ಅವರು ಮನವಿ ಮಾಡಿದ್ದಾರೆ. ಒಂದು ತಿಂಗಳಲ್ಲೇ ಆಯೋಗ ರಚನೆ ಮಾಡುತ್ತೇವೆ. ನೊಂದವರಿಗೆ ಶಕ್ತಿ ತುಂಬುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ ಎಂದಿದ್ದರು. ವಾಗ್ದಾನ ನೀಡಿದ ಎರಡು ದಿನದಲ್ಲೇ ಆಯೋಗ ರಚನೆಗೆ ಸರ್ಕಾರ ಡಿಕೆ ಶಿವಕುಮಾರ್ ಆದೇಶಿಸಿದ್ದಾರೆ.


Click it and Unblock the Notifications
