'ನಾನು ಅಂಬರೀಶ್ ಮಾಡಬಾರದನ್ನೂ ಮಾಡಿದ್ದೇವೆ': ಸಿಎಂ ಬೊಮ್ಮಾಯಿ
ಬೆಂಗಳೂರು, ಫೆ 28: ಕನ್ನಡ ಚಿತ್ರೋದ್ಯಮದಲ್ಲಿ ರೆಬೆಲ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದ ಅಂಬರೀಶ್ ಅವರ ಸಮಾಧಿ ಜಾಗದಲ್ಲಿ ಸ್ಮಾರಕ ನಿರ್ಮಾಣ ಕಾರ್ಯದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫ್ಲ್ಯಾಷ್ ಬ್ಯಾಕಿಗೆ ಹೋಗಿದ್ದಾರೆ.
ತಮ್ಮ ಮತ್ತು ಅಂಬರೀಶ್ ಅವರ ನಲವತ್ತು ವರ್ಷದ ಒಡನಾಟದ ಬಗ್ಗೆ ರಸವತ್ತಾಗಿ ಸಭೆಯಲ್ಲಿ ವಿವರಣೆಯನ್ನು ನೀಡಿದ ಬೊಮ್ಮಾಯಿ ಅವರ ಹೇಳಿಕೆಗೆ ನೆರೆದಿದ್ದ ಜನಸ್ತೋಮ ಚಪ್ಪಾಳೆಯ ಮೇಲೆ ಚಪ್ಪಾಳೆಯನ್ನು ಹೊಡೆದಿದೆ.
"ನನ್ನ ಆತ್ಮೀಯ ಸ್ನೇಹಿತ ಅಂಬರೀಶ್, ನಮ್ಮ ಸ್ನೇಹ ನಲವತ್ತು ವರ್ಷಕ್ಕಿಂತ ಹೆಚ್ಚಿನದ್ದು. ಒಟ್ಟಿಗೆ ಓಡಾಡಿದ್ದೇವೆ, ಜೊತೆಗೆ ಸಮಯ ಕಳೆದಿದ್ದೇವೆ, ಊಟ ಮಾಡಿದ್ದೇವೆ, ರಾಜ್ಯಾದ್ಯಂತ ಸುತ್ತಿದ್ದೇವೆ, ಮಾಡಬೇಕಾಗಿರುವುದನ್ನು ಮಾಡಿದ್ದೇವೆ, ಮಾಡಬಾರದನ್ನೂ ಮಾಡಿದ್ದೇವೆ. ಅಂಬರೀಶ್ ಎನ್ನುವುದು ತೆರೆದ ಪುಸ್ತಕ"ಎಂದು ಬೊಮ್ಮಾಯಿ ತಮ್ಮ ಹಿಂದಿನ ಒಡನಾಟವನ್ನು ನೆನೆಪಿಸಿಕೊಂಡಿದ್ದಾರೆ.

"ಅಂಬರೀಶ್ ಅವರು ಅಧಿಕಾರದಲ್ಲಿ ಇರಲಿ, ಇಲ್ಲದೇ ಇರಲಿ, ಯಾವುದಕ್ಕೂ ಅಂಟಿಕೊಂಡು ಇದ್ದವರಲ್ಲ. ಅಧಿಕಾರವನ್ನು ಧಿಕ್ಕರಿಸಿಯೇ ರಾಜಕಾರಣ ಮಾಡಿದವರು ಅಂಬರೀಶ್. ಆ ರೀತಿಯ ವ್ಯಕ್ತಿಗಳು ರಾಜಕೀಯದಲ್ಲಿ ಸಿಗುವುದು ಬಹಳ ಕಡಿಮೆ"ಎಂದು ಬೊಮ್ಮಾಯಿ ಹೇಳಿದ್ದಾರೆ.
"ಅಂಬರೀಶ್ ಕೇಂದ್ರ ಸಚಿವರಾಗಿದ್ದ ವೇಳೆ, ಕಾವೇರಿ ವಿಚಾರದಲ್ಲಿ ಒಂದು ಕ್ಷಣವೂ ಯೋಚಿಸದೇ ರಾಜೀನಾಮೆಯನ್ನು ಬಿಸಾಕಿ, ಕನ್ನಡ ನಾಡಿನ ಪರವಾಗಿ ನಿಂತವರು ನಮ್ಮ ಅಂಬರೀಶ್. ಬಹಳಷ್ಟು ನಾಯಕರು ಕಾವೇರಿ ಹೋರಾಟದ ಬಗ್ಗೆ ಮಾತನಾಡುತ್ತಾರೆ, ಆದರೆ, ಕಾವೇರಿ ವಿಚಾರಕ್ಕೆ ಪದವಿಯನ್ನೇ ತ್ಯಾಗ ಮಾಡಿದವರು ಎಂದರೆ ಅದು ಅಂಬರೀಶ್"ಎಂದು ಬೊಮ್ಮಾಯಿ ಹೇಳಿದ್ದಾರೆ.
"ಮಂಡ್ಯ ಅಂದರೆ ಅಂಬರೀಶ್ ಅವರಿಗೆ ಪಂಚಪ್ರಾಣ, ಅಲ್ಲಿನ ಜನತೆಯ ಪ್ರೀತಿಯಲ್ಲಿ ಅವರು ಮುಳುಗಿ ಹೋಗಿದ್ದರು. ಬೆಂಗಳೂರಿನ ಅವರ ನಿವಾಸಕ್ಕೆ ಮಂಡ್ಯದಿಂದ ಬಂದರು ಎಂದರೆ ಅವರು ತೋರಿಸುವ ಆತಿಥ್ಯವೇ ಬೇರೆ. ಅಂಬರೀಶ್ ಬದುಕಿದ್ದರೆ ಅವರ ಸುತ್ತಮುತ್ತ ಜೀವಂತಿಕೆ ಇರುತ್ತಿತ್ತು"ಎಂದು ಬೊಮ್ಮಾಯಿ, ಅಂಬರೀಶ್ ವ್ಯಕ್ತಿತ್ವವನ್ನು ಹಾಡಿ ಹೊಗಳಿದ್ದಾರೆ.
"ಚಿತ್ರರಂಗಕ್ಕೆ ಅಂಬರೀಶ್ ಕೊಡುಗೆ ಅಪಾರ, ಅಂಬರೀಷ್ ನನ್ನ ಆತ್ಮೀಯ ಸ್ನೇಹಿತ ಆಗಿದ್ದರು. ನಾನು ಯಾವಾಗಲೂ ಅಂಬರೀಶ್ ಅಂತಾನೇ ಕರೆಯುತ್ತಿದ್ದೆ. ಈಗಲೂ ನಾನು ಹಾಗೆಯೇ ಕರೆಯುತ್ತೇನೆ. ನನಗೆ ಅವರೊಂದಿಗೆ 40 ವರ್ಷಗಳ ಸ್ನೇಹವಿತ್ತು"ಎಂದು ಬೊಮ್ಮಾಯಿ ಈ ಸಂದರ್ಭದಲ್ಲಿ ಹೇಳಿದ್ದಾರೆ.












Click it and Unblock the Notifications