5 ಗ್ಯಾರಂಟಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಸಿಎಂ!

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ಸಂಪುಟ ಸಭೆ ನಡೆಸಿದ ಬಳಿಕ ಅಧಿಕೃತವಾಗಿ 5 ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ. ಆದ್ರೆ ಜನ ಸಾಮಾನ್ಯರು ಈ ಯೋಜನೆ ಲಾಭ ಪಡೆಯುವುದು ಹೇಗೆ? 5 ಯೋಜನೆಗಳ ಅನುಕೂಲ ಪಡೆಯಲು ಏನೆಲ್ಲಾ ರೂಲ್ಸ್ ಇದೆ? ಅನ್ನೋದನ್ನ ಸ್ವತಃ ಸಿಎಂ ಸಿದ್ದರಾಮಯ್ಯ ಸಂಪೂರ್ಣವಾಗಿ ವಿವರಿಸಿದ್ದಾರೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಭರ್ಜರಿ ಜಯ ಗಳಿಸಲು 5 ಗ್ಯಾರಂಟಿ ಯೋಜನೆ ಸಾಕಷ್ಟು ಸಹಾಯ ಮಾಡಿದ್ದವು. ಇದೇ ಕಾರಣ ಇಟ್ಟುಕೊಂಡು 15 ದಿನದಿಂದ ವಿರೋಧ ಪಕ್ಷಗಳು ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಾ ಬಂದಿವೆ. ಆದರೆ ಬಿಜೆಪಿ & ಇತರ ವಿರೋಧ ಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತಿರುಗೇಟು ನೀಡಿದೆ. 5 ಗ್ಯಾರಂಟಿಗಳನ್ನು ಯೋಜನೆ ಜಾರಿಗೆ ತಂದು, ಸವಾಲು ಹಾಕಿದೆ. ಹಾಗಾದ್ರೆ 5 ಗ್ಯಾರಂಟಿ ಯೋಜನೆಯ ರೂಲ್ಸ್ ಏನು? ತಿಳಿಯಿರಿ.

Siddaramaiah explained Guarantees

ನಾಡಿನ ಜನತೆಗೆ ಸಿಎಂ ಸಿದ್ದರಾಮಯ್ಯ ಮಾಹಿತಿ

ಟ್ವೀಟ್ ಮೂಲಕ 5 ಗ್ಯಾರಂಟಿ ಯೋಜನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ನಿಡಿದ್ದು, ಯೋಜನೆಗಳ ಸಂಪೂರ್ಣ ವಿವರ ಹಂಚಿಕೊಂಡಿದ್ದಾರೆ. ಹೀಗೆ ಕಾಂಗ್ರೆಸ್ ಸರ್ಕಾರ ತಾನು ಚುನಾವಣೆಗೆ ಮುನ್ನ ಘೋಷಣೆ ಮಾಡಿದ್ದಂತೆ ರಾಜ್ಯದ ಜನರಿಗೆ ಅನುಕೂಲ ಆಗುವ ರೀತಿ 5 ಗ್ಯಾರಂಟಿಗಳನ್ನು ಈಗ ಜಾರಿಗೆ ತಂದಿದೆ. ಅಲ್ಲದೆ ಆ ಯೋಜನೆಗಳ ಲಾಭ ಪಡೆಯೋದು ಹೇಗೆ ಅನ್ನೋದನ್ನ ಸ್ವತಃ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಗೃಹಜ್ಯೋತಿ ಯೋಜನೆ ಜಾರಿ ಹೇಗೆ?

ಜುಲೈ 1 ರಿಂದ ಅನ್ವಯವಾಗುವಂತೆ ರಾಜ್ಯದ ಪ್ರತಿ ಮನೆಗೆ ಗರಿಷ್ಠ 200 ಯುನಿಟ್ ವರೆಗೆ ವಿದ್ಯುತ್ ಅನ್ನು ಉಚಿತವಾಗಿ ನೀಡಲು ಮುಖ್ಯಮಂತ್ರಿ @siddaramaiah ಅವರ ನೇತೃತ್ವದ ಸಚಿವ ಸಂಪುಟವು ಅನುಮೋದನೆ ನೀಡಿದೆ. ಈ ಯೋಜನೆಯ ದುರ್ಬಳಕೆ ತಡೆಯಲು ಫಲಾನುಭವಿಗಳು ಹಿಂದಿನ ಒಂದು ವರ್ಷದ ಅವಧಿಯಲ್ಲಿ ಬಳಕೆ ಮಾಡಿರುವ ವಿದ್ಯುತ್ ಸರಾಸರಿಯನ್ನು ಗಣನೆಗೆ ತೆಗೆದುಕೊಂಡು, ಅದರ ಜೊತೆಗೆ 10% ವಿದ್ಯುತನ್ನು ಹೆಚ್ಚುವರಿಯಾಗಿ ಉಚಿತವಾಗಿ ನೀಡಲಾಗುವುದು ಎಂದು ತಿಳಿಸಲಾಗಿದೆ.

ದುರ್ಬಳಕೆ ಮಾಡಿದರೆ ಕಠಿಣ ಶಿಕ್ಷೆ ಪಕ್ಕಾ!

ಅಲ್ಲದೆ ಜುಲೈ 1ರವರೆಗೆ ಬಳಕೆ ಮಾಡಿರುವ ವಿದ್ಯುತ್ ಬಿಲ್‌ನ ಬಳಕೆದಾರರು ಕಟ್ಟಬೇಕಿದ್ದು, ಆಗಸ್ಟ್ ನಿಂದ ಎಲ್ಲರೂ ಯೋಜನೆಯ ಲಾಭ ಪಡೆಯಬಹುದಾಗಿದೆ. ಜನತೆಗೆ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಪ್ರತಿ ಮನೆಗೆ ಉಚಿತ್ ವಿದ್ಯುತ್ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಗೃಹಜ್ಯೋತಿ ಯೋಜನೆಯ ಸಂಪೂರ್ಣ ಮಾಹಿತಿ ನೀಡಿದೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ಅಲ್ಲದೆ ದುರ್ಬಳಕೆ ಮಾಡಿದರೆ ಕಠಿಣ ಶಿಕ್ಷೆ ಪಕ್ಕಾ ಅನ್ನೋ ಎಚ್ಚರಿಕೆ ಕೂಡ ಸಿಕ್ಕಿದೆ.

ಮನೆಯ ಯಜಮಾನಿಗೆ ₹2,000 ಸಹಾಯಧನ!

ಯಾವುದೇ ಜಾತಿ, ಧರ್ಮ, ಭಾಷೆಯನ್ನು ಪರಿಗಣಿಸದೆ ನಾಡಿನ ಪ್ರತಿ ಮನೆಯ ಯಜಮಾನಿಗೆ ಮಾಸಿಕ ರೂ. 2,000 ಸಹಾಯಧನ ನೀಡಲು ಮುಖ್ಯಮಂತ್ರಿ @siddaramaiah ನೇತೃತ್ವದ ಸಂಪುಟ ಸಭೆಯು ಅನುಮೋದನೆ ನೀಡಿದೆ ಎಂದು ಸಿಎಂ ಟ್ವೀಟ್ ಖಾತೆ ತಿಳಿಸಿದೆ. ಹಾಗೇ ಗೃಹ ಲಕ್ಷ್ಮೀ ಯೋಜನೆ ಮೂಲಕ 2000 ಸಹಾಯಧನ ಪಡೆಯಲು ಬೇಕಾದ ರೂಲ್ಸ್‌ಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ.

ಮಹಿಳೆಯರ ಬ್ಯಾಂಕ್ ಅಕೌಂಟ್‌ಗೆ ಹಣ ವರ್ಗ!

ಬಿಪಿಎಲ್ ಅಥವಾ ಎಪಿಎಲ್ ಕುಟುಂಬದ ಮಹಿಳೆಯು ತಮ್ಮ ಬ್ಯಾಂಕ್ ಖಾತೆಯ ಮಾಹಿತಿ ಹಾಗೂ ಆಧಾರ್ ಕಾರ್ಡ್‌ನ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿ, ತನ್ನನ್ನು ಮನೆಯ ಯಜಮಾನಿ ಎಂದು ಘೋಷಿಸಿಕೊಳ್ಳಬೇಕು. ಜೂನ್ 15 ರಿಂದ ಜುಲೈ 15ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಅರ್ಜಿಗಳ ಪರಿಶೀಲನೆ ಹಾಗೂ ತಂತ್ರಾಂಶ ಅಭಿವೃದ್ಧಿಪಡಿಸಿ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಯೋಜನೆಗೆ ಚಾಲನೆ ನೀಡಲಾಗುವುದು. ಕುಟುಂಬ ನಿರ್ವಹಣೆಯ ಹೊಣೆಹೊತ್ತ ಮನೆಯ ಯಜಮಾನಿಗೆ ಆರ್ಥಿಕ ನೆರವು ನೀಡಿ, ಅವರ ಕಷ್ಟಗಳಿಗೆ ಹೆಗಲಾಗಿ ನಿಲ್ಲಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಲಾಗಿದೆ.

ಬಡಜನರ ಹಸಿವು ನೀಗಿಸುವ ಬಗ್ಗೆ

ಬಡತನ ರೇಖೆಗಿಂತ ಕೆಳಗಿನ ಹಾಗೂ ಅಂತ್ಯೋದಯ ಕಾರ್ಡ್‌ಗಳನ್ನು ಹೊಂದಿರುವ ರಾಜ್ಯದ ಎಲ್ಲಾ ಕುಟುಂಬದ ಪ್ರತಿ ಸದಸ್ಯನಿಗೆ ಮಾಸಿಕ ತಲಾ 10 ಕೆ.ಜಿ ಆಹಾರಧಾನ್ಯವನ್ನು ಉಚಿತವಾಗಿ ನೀಡಲು ಮುಖ್ಯಮಂತ್ರಿ @siddaramaiah ನೇತೃತ್ವದ ಸಂಪುಟ ಸಭೆಯು ನಿರ್ಧರಿಸಿದೆ. ಈ ಬಗ್ಗೆಯೂ ಟ್ವೀಟ್ ಮೂಲಕ ಮಾಹಿತಿ ನೀಡಿ, ಅನ್ನಭಾಗ್ಯ ಯೋಜನೆಯ ಕುರಿತು ಮಾಹಿತಿ ನೀಡಲಾಗಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.

5 ಕೆ.ಜಿಯಿಂದ 10 ಕೆ.ಜಿಗೆ ಏರಿಕೆ!

ಬಡಜನರ ಹಸಿವು ನೀಗಿಸುವ ಉದ್ದೇಶದೊಂದಿಗೆ ಹಿಂದಿನ ನಮ್ಮ ಸರ್ಕಾರ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆಯಡಿ ಸದ್ಯ 5 ಕೆ.ಜಿ ಆಹಾರಧಾನ್ಯವನ್ನು ಉಚಿತವಾಗಿ ನೀಡಲಾಗುತ್ತಿದ್ದು, ಅದನ್ನು 10 ಕೆ.ಜಿ ಗೆ ಏರಿಸಲಾಗಿದೆ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೂ ಯೋಜನೆಯನ್ನು ವಿಸ್ತರಿಸಲಾಗಿದೆ. ಈ ಮೂಲಕ ನಾಡಿನ ಎಲ್ಲಾ ಬಡಕುಟುಂಬಗಳ ಹಸಿವನ್ನು ನೀಗಿಸಿ, ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಸರ್ಕಾರ ತಿಳಿಸಿದೆ.

ಮಹಿಳೆಯರಿಗೆ ಉಚಿತ ಬಸ್ ಸೇವೆ ಮಾಹಿತಿ

ಶಾಲಾ ವಿದ್ಯಾರ್ಥಿನಿಯರು ಸೇರಿದಂತೆ ರಾಜ್ಯದ ಎಲ್ಲಾ ವರ್ಗದ ಮಹಿಳೆಯರಿಗೆ ಎಸಿ ಹಾಗೂ ಲಕ್ಷುರಿ ಬಸ್ ಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಬಸ್ ಗಳಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯ ನೀಡಲು ಮುಖ್ಯಮಂತ್ರಿ @siddaramaiah ನೇತೃತ್ವದ ಸಂಪುಟ ಸಭೆ ನಿರ್ಧರಿಸಿದೆ ಎಂದು ಸಿಎಂ ಅಧಿಕೃತ ಟ್ವಿಟ್ಟರ್ ಖಾತೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಉಚಿತ ಬಸ್ ಸೇವೆಗೆ ಇರುವ ನಿಯಮದ ಬಗ್ಗೆ ಮಾಹಿತಿ ನೀಡಿದೆ ರಾಜ್ಯ ಸರ್ಕಾರ.

ಮಹಿಳೆಯರ ಹಿತ ಕಾಪಾಡಲು ಬದ್ಧ!

ಜೂನ್ 11 ರಂದು "ಶಕ್ತಿ" ಯೋಜನೆಗೆ ಚಾಲನೆ ನೀಡಲಿದ್ದು, ಶೇ. 94 ರಷ್ಟು ಮಹಿಳಾ ಪ್ರಯಾಣಿಕರು ಯೋಜನೆ ಲಾಭ ಪಡೆಯಲಿದ್ದಾರೆ. ಪುರುಷ ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್ ಗಳಲ್ಲಿ ಶೇ. 50 ರಷ್ಟು ಸೀಟುಗಳನ್ನು ಪುರುಷರಿಗಾಗಿ ಮೀಸಲಿಡಲಾಗುತ್ತದೆ. ಶಿಕ್ಷಣ, ಉದ್ಯೋಗ ಹೀಗೆ ಜವಾಬ್ದಾರಿ ನಿರ್ವಹಣೆಗಾಗಿ ನಿತ್ಯ ಪ್ರಯಾಣ ಕೈಗೊಳ್ಳುವ ನಾಡಿನ ಮಹಿಳೆಯರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಮಾಹಿತಿ ನೀಡಿದೆ ಸಿದ್ದರಾಮಯ್ಯ ಅವರ ಸರ್ಕಾರ.

ಪದವೀಧರ ನಿರೋದ್ಯೋಗಿ ಯುವ ಸಮೂಹಕ್ಕೆ ಸಹಾಯ

ಹಾಗೇ ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆ ಪ್ರಕಟಿಸಿದ್ದ ಮತ್ತೊಂದು ಗ್ಯಾರಂಟಿ ಈಡೇರಿಸಿದೆ. 2022-23 ನೇ ಶೈಕ್ಷಣಿಕ ವರ್ಷದಲ್ಲಿ ವೃತ್ತಿಪರ ಕೋರ್ಸುಗಳೂ ಸೇರಿದಂತೆ ಎಲ್ಲ ವಿಧದ ಪದವೀಧರ ನಿರುದ್ಯೋಗಿ ಯುವಕ-ಯುವತಿಯರಿಗೆ ಮಾಸಿಕ ರೂ.3,000 ಹಾಗೂ ಡಿಪ್ಲೊಮಾ ಪಾಸಾದ ನಿರುದ್ಯೋಗಿ ಯುವಜನರಿಗೆ ಮಾಸಿಕ ರೂ. 1,500 ನಿರುದ್ಯೋಗ ಭತ್ಯೆ ನೀಡಲು ಮುಖ್ಯಮಂತ್ರಿ @siddaramaiah ನೇತೃತ್ವದ ಸಂಪುಟ ಸಭೆಯು ನಿರ್ಧರಿಸಿದೆ ಎಂದು ತಿಳಿಸಲಾಗಿದೆ.

ಯುವನಿಧಿ ಸಹಾಯಧನಕ್ಕೆ ರೂಲ್ಸ್ ಏನು?

ಪದವಿ ಪಡೆದು 180 ದಿನಗಳು ಕಳೆದರೂ ಉದ್ಯೋಗ ಸಿಗದೆ ಭವಿಷ್ಯದ ಬಗ್ಗೆ ಆತಂಕದಲ್ಲಿರುವ ನಿರುದ್ಯೋಗಿ ಯುವಜನರಿಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡುವ ಮೂಲಕ ಉದ್ಯೋಗ ಹುಡುಕಾಟಕ್ಕೆ ಅನುಕೂಲ ಕಲ್ಪಿಸುವುದು ಮತ್ತು ಆರ್ಥಿಕ ಸಂಕಷ್ಟದಿಂದ ಅವರನ್ನು ಪಾರುಮಾಡುವುದು ಈ ಯೋಜನೆಯ ಉದ್ದೇಶ. ಲಿಂಗತ್ವ ಅಲ್ಪಸಂಖ್ಯಾತರು ಕೂಡ ಈ ಯೋಜನೆಯ ಲಾಭ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಒಟ್ನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಇದರ ಜೊತೆಗೆ ವಿಪಕ್ಷ ನಾಯಕರ ಆರೋಪಕ್ಕೂ ಉತ್ತರ ಕೊಡುತ್ತಿದೆ. ಈ ಹೊತ್ತಲ್ಲೇ ಬಿಜೆಪಿ ಮತ್ತು ಇತರ ವಿರೋಧ ಪಕ್ಷಗಳು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದು, ಇದಕ್ಕೆಲ್ಲಾ ಸರ್ಕಾರ ಮತ್ತು ಸಿಎಂ ಯಾವ ರೀತಿ ಉತ್ತರ ನೀಡುತ್ತಾರೆ ಅನ್ನೋದನ್ನ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+