'ಫೆಬ್ರವರಿ10ರೊಳಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ಸರ್ಕಾರಕ್ಕೆ ಸಲ್ಲಿಕೆ ಸಾಧ್ಯತೆ'
ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ 'ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025' ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಆ ಸಮೀಕ್ಷೆಯ ವರದಿ ಸಲ್ಲಿಕೆ ಯಾವಾಗ ಎಂಬ ಪ್ರಶ್ನೆ ರಾಜ್ಯದ ಜನರಲ್ಲಿ ಹಾಗೂ ವಿಪಕ್ಷ ನಾಯಕರಲ್ಲಿ ಉದ್ಭವವಾಗಿತ್ತು. ಅದಕ್ಕೀಗ ಉತ್ತರಿಸಿರುವ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್ .ತಂಗಡಗಿ ಅವರು ಮುಂದಿನ ಫೆಬ್ರವರಿಯಲ್ಲಿ ವರದಿ ಸಲ್ಲಿಕೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಯನ ಸಭಾಂಗಣದಲ್ಲಿ ಬುಧವಾರ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿದರು. 2026 ಜನವರಿ ಅಂತ್ಯ ಅಥವಾ ಫೆಬ್ರವರಿ 10ರೊಳಗೆ ಮಧುಸೂದನ್ ನಾಯಕ್ ಅವರ ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಸಲ್ಲಿಸುವ ನಿರೀಕ್ಷೆ ಇದೆ ಎಂದರು.

ಈಗಾಗಲೇ ಅಂಕಿ ಅಂಶಗಳ ಕ್ರೋಢೀಕರಣ ನಡೆಯುತ್ತಿದೆ. ವರದಿ ಶೀಘ್ರ ಸಲ್ಲಿಸಲಿದ್ದಾರೆ. ಈ ವರದಿಯಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ ಸರ್ಕಾರದ ಯೋಜನೆ ತಲುಪಿಸಲು ಸಾಧ್ಯವಾಗಲಿದೆ. ಅಲ್ಲದೆ, ಕೆಲವರು ಯಾವುದೇ ಮಾಹಿತಿ ಕೇಳಿದರೂ ನಮ್ಮ ಸಮುದಾಯವರು ಅಷ್ಟಿದ್ದಾರೆ., ಇಷ್ಟಿದ್ದಾರೆ ಅನ್ನುತ್ತಾರೆ. ವರದಿಯಿಂದ ವಾಸ್ತವ ಅಂಶ ಗೊತ್ತಾಗಲಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಬಗ್ಗೆ ಮುಖ್ಯಮಂತ್ರಿಗಳು ವಿಶೇಷ ಕಾಳಜಿ ಹೊಂದಿದ್ದಾರೆ. ಈ ಹಿಂದಿನ ಸರ್ಕಾರಗಳು ನಿಗಮಕ್ಕೆ ಮೊದಲು ಐದು ಕೋಟಿಯಷ್ಟೇ ಅನುದಾನ ನೀಡುತ್ತಿದ್ದರು. ಕಳೆದ ವರ್ಷ ಮುಖ್ಯಮಂತ್ರಿಗಳ ಬಳಿ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟಾಗ, ಅದಕ್ಕೆ ಸ್ಪಂದಿಸಿ ಇಲಾಖೆಯ ಎಲ್ಲಾ ನಿಗಮಗಳಿಗೆ ರೂ.1600 ಕೋಟಿ ಅನುದಾನ ಒದಗಿಸಿದ್ದರು. ಈ ಪೈಕಿ ರೂ. 23.24 ಕೋಟಿ ಅನುದಾನವನ್ನು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿದೆ. ಅಲ್ಲದೆ, ಗಂಗಾ ಕಲ್ಯಾಣ ಯೋಜನೆಯಡಿ ನೀಡುತ್ತಿದ್ದ ಘಟಕದ ವೆಚ್ಚವನ್ನು ರೂ. 2.50 ಲಕ್ಷದಿಂದ ರೂ. 3.75ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ.
ಹಿಂದಿನ ಸರ್ಕಾರ ಮೂರುವರೆ ವರ್ಷದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಒಂದೇ ಒಂದು ಕೊಳವೆ ಬಾವಿ ಕೊರೆದಿಲ್ಲ. ನಾನು ಇಲಾಖೆ ಸಚಿವನಾದ ಬಳಿಕ 18 ಸಾವಿರ ಕೊಳವೆ ಬಾವಿ ಕೊರೆಸಲಾಗಿದೆ. ಇನ್ನು ಹಿಂದುಳಿದ ವರ್ಗಗಳ ಮಕ್ಕಳ ವಿದೇಶ ವ್ಯಾಸಂಗಕ್ಕೆ ರೂ. 20 ಲಕ್ಷ ಸಾಲ ನೀಡಲಾಗುತ್ತಿತ್ತು. ನಾವು ಆ ಮೊತ್ತವನ್ನು ಶೂನ್ಯ ಬಡ್ಡಿದರಲ್ಲಿ ರೂ.50 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕೂಲಿ ಸಮಾಜ, ಗಂಗಾಮತಸ್ಥ ಸಮಾಜದ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳುವ ಕೆಲಸ ಆಗಬೇಕು. ಯಾವ ಜಿಲ್ಲೆಯಲ್ಲಿ ಜಯಂತಿ ಆಚರಣೆ ಮಾಡುತ್ತಿಲ್ಲ ಎಂದು ಹೇಳಿದರೆ ಅವರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ವೇದಿಕೆಯಲ್ಲಿದ್ದ ಸಮಾಜದ ಮುಖಂಡರಿಗೆ ಸಚಿವರು ಭರವಸೆ ನೀಡಿದರು.
ಮಹಾನ್ ನಿಷ್ಠುರ ಮಾನವತಾವಾದಿ ಚೌಡಯ್ಯ
ಹನ್ನೆರಡನೆಯ ಶತಮಾನದ ಬಸವಣ್ಣನವರ ವಚನ ಚಳುವಳಿ ಹುಟ್ಟು ಹಾಕಿದ ಹಲವಾರು ಪ್ರತಿಭೆಗಳಲ್ಲಿ ಅಂಬಿಗರ ಚೌಡಯ್ಯನವರು ಅಗ್ರಸ್ಥಾನದಲ್ಲಿದ್ದಾರೆ. ತಮ್ಮ ವಚನಗಳಲ್ಲಿ ವೈಚಾರಿಕ ನಿರೂಪಣೆಯ ಧಾರೆಯನ್ನು ಹರಿಸುವ ಮೂಲಕ ನಿಷ್ಠುರ ಮಾನವತಾವಾದಿ ಎಂದೇ ಹೆಸರಾಗಿದ್ದವರು ಎಂದರು.
ಶೋಷಣೆಗೆ ಒಳಗಾಗಿದ್ದ ಪರಿಸರದಲ್ಲಿ ಹುಟ್ಟಿ ಬೆಳೆದ ಚೌಡಯ್ಯನವರು ತಮ್ಮ ಸಮುದಾಯದ ಬದಲಾವಣೆಯತ್ತ ಗಮನ ಹರಿಸಿದ್ದರು. ಶರಣರು ತಮ್ಮ ದಿಟ್ಟತನದಿಂದ ಗುರುತಿಸಿಕೊಂಡವರು. ಸಮಾಜದಲ್ಲಿನ ದುರ್ಗಣಗಳ ಕುರಿತು ನಿರ್ದಾಕ್ಷಿಣ್ಯವಾಗಿ ಹಲವು ಅಂಶಗಳನ್ನು ಅವರು ಖಂಡಿಸಿದ್ದಾರೆ. ಧಾರ್ಮಿಕ ಹೆಸರಿನಲ್ಲಿ ನಡೆಯುವ ವಂಚನೆ, ಲಿಂಗಬೇಧ, ತಾರತಮ್ಯಗಳನ್ನು ಅವರು ಖಂಡಿಸಿದ್ದರು ಎಂದು ಸಚಿವರು ಸ್ಮರಿಸಿದರು.
ಬೆಂಗಳೂರಿನಲ್ಲೇ ಪ್ರತಿಮೆ ನಿರ್ಮಾಣ
ಬೆಂಗಳೂರಿನಲ್ಲಿ ಅಂಬಿಗರ ಚೌಡಯ್ಯ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುವುದು. ಪ್ರತಿಮೆ ನಿರ್ಮಾಣಕ್ಕಾಗಿ ಈಗಾಗಲೇ ಸ್ಥಳ ಹುಡುಕಾಟ ನಡೆಸಿದ್ದೇವೆ. ಸ್ಥಳ ಗುರುತಿಸಿದ ಬಳಿಕ ಇಲಾಖೆ ವತಿಯಿಂದ ಪ್ರತಿಮೆ ನಿರ್ಮಾಣವನ್ನು ಬೆಂಗಳೂರಿನಲ್ಲಿ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.












Click it and Unblock the Notifications