ಬೆಂಗಳೂರಲ್ಲಿ ಮುಂದಿನ 2 ದಿನಗಳ ಕಾಲ ಭರ್ಜರಿ ಮಳೆ ಮುನ್ಸೂಚನೆ!
ಬೆಂಗಳೂರು: ಮುಂಗಾರು ಮಳೆ ಕೊರತೆಯಿಂದಾಗಿ ಇಡೀ ರಾಜ್ಯ ಭಯಪಟ್ಟಿದೆ. ಅದ್ರಲ್ಲೂ ಕರ್ನಾಟಕದ ಬಹುತೇಕ ಜಲಾಶಯಗಳು ಮಳೆ ಕೊರತೆ ಕಾರಣ ಬತ್ತಿ ಹೋಗುತ್ತಿವೆ. ಆದರೆ ಈ ಸಂದರ್ಭದಲ್ಲೇ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದ್ದು, ಮುಂದಿನ ಕೆಲ ದಿನಗಳ ಕಾಲ ಭರ್ಜರಿ ಮಳೆ ಸುರಿಯಲಿದೆಯಂತೆ. ಅದರಲ್ಲೂ ರಾಜಧಾನಿ ಬೆಂಗಳೂರಲ್ಲಿ ಇಂದು ಮತ್ತು ನಾಳೆ ವರುಣನ ಅಬ್ಬರ ಜೊರಾಗಿರಲಿದೆ.
ಹವಾಮಾನ ಇಲಾಖೆ ಬೆಂಗಳೂರಿನ ಮಳೆ ಕುರಿತು ಮಾಹಿತಿ ನೀಡಿದ್ದು, ಮುಂದಿನ 2 ದಿನ ರಾಜಧಾನಿಯಲ್ಲಿ ಭರ್ಜರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಈಗಿನ ಸ್ಥಿತಿ ನೋಡಿದರೆ ಮುಂದಿನ ಕೆಲ ದಿನಗಳಲ್ಲಿ ಉತ್ತಮವಾಗಿ ಮಳೆ ಆಗದಿದ್ದರೆ, ರಾಜ್ಯದಲ್ಲಿ ಕುಡಿವ ನೀರಿಗೂ ಜನ ಪರದಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಅದರಲ್ಲೂ ಬೆಂಗಳೂರಿನಲ್ಲಿ ಮಳೆ ಬೀಳದಿದ್ದರೆ ಅಂತರ್ಜಲ ಬತ್ತಿ ಹೋಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಹವಾಮಾನ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ. ಮುಂದಿನ 2 ದಿನ ಬೆಂಗಳೂರಲ್ಲಿ ಉತ್ತಮವಾಗಿ ಮಳೆ ಬೀಳುವ ಸೂಚನೆ ನೀಡಿದೆ. ಹಾಗಾದ್ರೆ ಬೆಂಗಳೂರಿನ ಯಾವ ಏರಿಯಾದಲ್ಲಿ ಎಷ್ಟು ಮಳೆ ಬೀಳುತ್ತೆ? ಬನ್ನಿ ತಿಳಿಯೋಣ (Bengaluru Rain).

ಬೆಂಗಳೂರಿನ ಯಾವ ಏರಿಯಾದಲ್ಲಿ ಹೆಚ್ಚು ಮಳೆ?
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲ ವರ್ಷಗಳಿಂದ ಭರ್ಜರಿ ಮಳೆ ಸುರಿಯುತ್ತಿದೆ. ಆದ್ರೆ ಈ ವರ್ಷ ಬರದ ಛಾಯೆ ಆವರಿಸಿದೆ. ಬೆಂಗಳೂರಿಗೂ ಸಾಕಷ್ಟು ಕಡಿಮೆ ಪ್ರಮಾಣದ ಮಳೆ ಬಿದ್ದಿದೆ. ಈ ಮಧ್ಯೆ ಇಂದು & ನಾಳೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ. ಈ ಪೈಕಿ ಬೆಂಗಳೂರು ಪಶ್ಚಿಮ ವಲಯವೂ ಸೇರಿದಂತೆ ದಕ್ಷಿಣ ವಲಯ, ರಾಜರಾಜೇಶ್ವರಿ ನಗರ ವಲಯ, ದಾಸರಹಳ್ಳಿ ವಲಯ ಮತ್ತು ಬೊಮ್ಮನಹಳ್ಳಿ ವಲಯದಲ್ಲಿ ಭರ್ಜರಿ ಮಳೆ ಬೀಳಲಿದೆ. ಬೆಂಗಳೂರಿನ ಪೂರ್ವ ವಲಯವು ಸೇರಿ ಯಲಹಂಕ ವಲಯ ಮತ್ತು ಮಹದೇವಪುರ ವಲಯದಲ್ಲಿ ಸಾಮಾನ್ಯ ಮಳೆಯ ಬಗ್ಗೆ ಮುನ್ಸೂಚನೆ ನೀಡಲಾಗಿದೆ.
ಕರ್ನಾಟಕದ ಇತರೆಡೆಯೂ ಭರ್ಜರಿ ಮಳೆ!
ಮಳೆಯ ಕೊರತೆ ಕಾರಣ ಆಗಸ ನೋಡುತ್ತಿದ್ದ ಕರ್ನಾಟಕದ ಜನಕ್ಕೆ ಸಿಹಿಸುದ್ದಿ ಸಿಕ್ಕಿದೆ. ಜುಲೈ ಮೊದಲ ವಾರದಲ್ಲಿಯೇ ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದೆ. ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ. ಅಲ್ದೆ ಆರೆಂಜ್ ಅಲರ್ಟ್ ಘೋಷಿಸಿದೆ. ಇನ್ನು ನಿನ್ನೆ ರಾಜಧಾನಿ ಬೆಂಗಳೂರು ನಗರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆ ಬಂದಿದೆ. ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲೂ 5 ದಿನ ಗುಡುಗು ಸಹಿತ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇನ್ನು ಬೆಂಗಳೂರು ನಗರದಲ್ಲಿ ಭಾನುವಾರ ಸಂಜೆ 45 ನಿಮಿಷ ಕಾಲ ಗುಡುಗು ಸಹಿತ ಸುರಿದ ಮಳೆಯು ಒಂದಷ್ಟು ತಂಪನ್ನು ಹೊತ್ತು ತಂದಿದೆ. ಬೆಂಗಳೂರಲ್ಲಿ ಹವಾಮಾನ ಇಲಾಖೆಯ ಕಡೆಯಿಂದ ಯಾವುದೇ ಅಲರ್ಟ್ ಘೋಷಣೆ ಆಗಿಲ್ಲ. ಈ ಮಧ್ಯೆ ಮೋಡ ಕವಿದ ವಾತಾವರಣ ಮತ್ತು ತಣ್ಣನೆ ಗಾಳಿ ಬೀಸಲಿದೆಯಂತೆ. ಸಂಜೆ ವೇಳೆಗೆ ಮಳೆಯಾಗುವ ನಿರೀಕ್ಷೆ ಇದೆ ಅಂತಾ ಹೇಳಲಾಗಿದೆ. ಬೆಂಗಳೂರಿನಲ್ಲಿ ಇಂದು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇದ್ರೆ ಗರಿಷ್ಠ ಉಷ್ಣಾಂಶ 27 ಡಿಗ್ರಿ ದಾಖಲಾಗುವ ನಿರೀಕ್ಷೆ ಇದೆ. ಕಳೆದ 10 ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಈ ಹಿನ್ನೆಲೆ ಒಟ್ಟಾರೆ ಮಳೆ ಕೊರತೆ ಶೇ. 51ಕ್ಕೆ ಇಳಿದಿದೆ. ಜೂನ್ 21ರಂದು ರಾಜ್ಯದಲ್ಲಿ ಶೇ. 74ರಷ್ಟು ಮಳೆ ಕೊರತೆ ದಾಖಲಾಗಿತ್ತು. ಜೂನ್ 1 ರಿಂದ ಭಾನುವಾರದ ತನಕ ಒಟ್ಟು 21.7 ಸೆಂಟಿಮೀಟರ್ ಮಳೆಯಾಗಬೇಕಿತ್ತು. ಆದ್ರೆ 10.6 ಸೆಂ. ಮೀ. ಮಳೆಯಾಗಿದೆ.












Click it and Unblock the Notifications