ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆ ನಿರ್ಣಯಗಳು

Written By: Ramesh
Subscribe to Oneindia Kannada

ಬೆಂಗಳೂರು, ಡಿಸೆಂಬರ್. 08 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಹಲವು ನಿರ್ಣಯಗಳನ್ನು ತೆಗೆದು ಕೊಳ್ಳಲಾಯಿತು.

ಆರೋಗ್ಯ ಇಲಾಖೆ ಸೇವೆಗಳು, ಸ್ವಯಂ ನಿವೃತ್ತಿ ಪ್ಯಾಕೇಜ್, ವಕೀಲರಿಗೆ ಸೌಲಭ್ಯ, ಸಮಾನ ವೇತನ ಶ್ರೇಣಿ, ಉದ್ಯಾನಗಳಿಗೆ ಮೀಸಲಿರಿಸುವ ವಿಸ್ತೀರ್ಣದಲ್ಲಿ ಸಾಮ್ಯತೆ ಸೇರಿದಂತೆ ಹಲವಾರು ತೀರ್ಮಾನಗಳನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

ರಾಜ್ಯ ಸರ್ಕಾರವು ನೀಡುವ ಅನುದಾನದಲ್ಲಿ ವಕೀಲರ ಪರಿಷತ್ ಸದಸ್ಯರಿಗೆ ನಿವೃತ್ತಿಯ ನಂತರದ ಸೌಲಭ್ಯ ಕಲ್ಪಿಸಲು ಅಥವಾ ವಕೀಲರ ಮರಣಾಂತರ ಅವರ ಕುಟುಂಬದ ವಾರಸುದಾರರಿಗೆ ಕರ್ನಾಟಕ ರಾಜ್ಯ ನ್ಯಾಯವಾದಿಗಳ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ-2016 ಕ್ಕೆ ಸಂಪುಟವು ಅನುಮೋದನೆ ನೀಡಿದೆ.

ಶಿವನಸಮುದ್ರಂನಲ್ಲಿ 200 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಕಾವೇರಿ ಕೊಳ್ಳದ ಶಿವನಸಮುದ್ರಂ ನದಿ ಹರಿವು ವಿದ್ಯುತ್ ಯೋಜನೆಯ ಭೂಗರ್ಭ ವಿದ್ಯುತ್ ಆಗರದಲ್ಲಿ 100 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಕಟಗಳನ್ನು ಸ್ಥಾಪಿಸಿ,

ಒಟ್ಟು 200 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ಪ್ರಾರಂಭಿಸಲು ಒಪ್ಪಿಗೆ ಸೂಚಿಸಿರುವ ಸಚಿವ ಸಂಪುಟವು ಅಂತಾರಾಜ್ಯ ಜಲವಿವಾದದ ಹಿನ್ನೆಲೆಯಲ್ಲಿ ಈ ವಿಷಯವನ್ನು ಕಾವೇರಿ ಮೇಲುಸ್ತುವಾರಿ ಸಮಿತಿ ಹಾಗೂ ತಮಿಳುನಾಡು ಸರ್ಕಾರದ ಗಮನಕ್ಕೆ ತರಲು ಸಮ್ಮತಿಸಿದೆ. ಇನ್ನಿತರ ನಿರ್ಣಗಳು ತಿಳಿಯಲು ಮುಂದೆ ಓದಿ.

ಆರೋಗ್ಯ ಇಲಾಖೆ ಸೇವೆಗಳು

ಆರೋಗ್ಯ ಇಲಾಖೆ ಸೇವೆಗಳು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ವೈದ್ಯಾಧಿಕಾರಿಗಳನ್ನು 65 ವರ್ಷಗಳ ವಯೋಮಾನದವರೆಗೆ ಮರು ನೇಮಕ ಮಾಡಿಕೊಳ್ಳಲು ರಾಜ್ಯ ಸಚಿವ ಸಂಪುಟವು ನಿರ್ಧರಿಸಿದೆ. ಇಲಾಖೆಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಹಾಗೂ ಆರೋಗ್ಯವಂತರಾಗಿರುವ ವೈದ್ಯರನ್ನು ಆಡಳಿತಾತ್ಮಕವಲ್ಲದ ವೈದ್ಯಾಧಿಕಾರಿಗಳ ಸೇವಾ ಹುದ್ದೆಗಳಿಗೆ ಮರು ನೇಮಕ ಮಾಡಿಕೊಳ್ಳಲು ಸಚಿವ ಸಂಪುಟವು ಸಮ್ಮತಿಸಿದೆ.

ನಗರಕ್ಕೆ ಮತ್ತೊಂದು ವೈದ್ಯಕೀಯ ಕಾಲೇಜು

ನಗರಕ್ಕೆ ಮತ್ತೊಂದು ವೈದ್ಯಕೀಯ ಕಾಲೇಜು

ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಆವರಣದಲ್ಲಿಯೇ 2018-19 ನೇ ಸಾಲಿನಿಂದ ಪ್ರತಿ ವರ್ಷ 150 ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಕೋರ್ಸ್ ಗೆ ಪ್ರವೇಶಾವಕಾಶ ಕಲ್ಪಿಸಲು ಅವಕಾಶವಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಹಾಗೂ ಭಾರತೀಯ ವೈದ್ಯಕೀಯ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲು ಸಚಿವ ಸಂಪುಟ ತೀರ್ಮಾನಿಸಿದೆ.

ಸ್ವಯಂ ನಿವೃತ್ತಿಗೆ ಪ್ಯಾಕೇಜ್

ಸ್ವಯಂ ನಿವೃತ್ತಿಗೆ ಪ್ಯಾಕೇಜ್

ನಷ್ಟದಲ್ಲಿರುವ ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಯ 2200 ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು ಪ್ರಕಟಿಸಲು ಅನುವಾಗುವಂತೆ 396.72 ಕೋಟಿ ರೂ ಆರ್ಥಿಕ ನೆರವಿನ ಪ್ಯಾಕೇಜ್ ಪ್ರಸ್ತಾವನೆಗೆ ಸಂಪುಟವು ಸಮ್ಮತಿ ಸೂಚಿಸಿದೆ. ಕಳೆದ ಆರು ತಿಂಗಳಿನಿಂದಲೂ 600 ಕೋಟಿ ರೂ ಗಳಿಗೂ ಹೆಚ್ಚು ನಷ್ಟ ಅನುಭವಿಸಿರುವ ಈ ಕಾರ್ಖಾನೆಯ ಪುನಶ್ಚೇತನಕ್ಕೆ ಖಾಸಗಿ ಬಿಡ್ಡುದಾರರೂ ಬಾರದ ಹಿನ್ನೆಲೆಯಲ್ಲಿ ಕಾರ್ಖಾನೆಯ ನೌಕರರ ಅಪೇಕ್ಷೆಯಂತೆ ಸ್ವಯಂ ನಿವೃತ್ತಿಗೆ ಅವಕಾಶ ಕಲ್ಪಿಸಲಾಗಿದೆ.

ವಕೀಲರಿಗೆ ನಿವೃತ್ತಿಯ ನಂತರದ ಸೌಲಭ್ಯ

ವಕೀಲರಿಗೆ ನಿವೃತ್ತಿಯ ನಂತರದ ಸೌಲಭ್ಯ

ರಾಜ್ಯ ಸರ್ಕಾರವು ನೀಡುವ ಅನುದಾನದಲ್ಲಿ ವಕೀಲರ ಪರಿಷತ್ ಸದಸ್ಯರಿಗೆ ನಿವೃತ್ತಿಯ ನಂತರದ ಸೌಲಭ್ಯ ಕಲ್ಪಿಸಲು ಅಥವಾ ವಕೀಲರ ಮರಣಾಂತರ ಅವರ ಕುಟುಂಬದ ವಾರಸುದಾರರಿಗೆ ಕರ್ನಾಟಕ ರಾಜ್ಯ ನ್ಯಾಯವಾದಿಗಳ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ-2016 ಕ್ಕೆ ಸಂಪುಟವು ಅನುಮೋದನೆ ನೀಡಿದೆ. ಈ ವಿಧೇಯಕದಂತೆ 15 ವರ್ಷಗಳವರೆಗೆ ಸೇವೆ ಸಲ್ಲಿಸಿರುವ ವಕೀಲರಿಗೆ ಪ್ರಸ್ತುತ ಇರುವ ಎರಡು ಲಕ್ಷ ರೂ ಗಳಿಂದ ನಾಲ್ಕು ಲಕ್ಷ ರೂ, 15 ವರ್ಷಗಳ ಮೇಲ್ಪಟ್ಟು ಸೇವೆ ಸಲ್ಲಿಸಿದವರಿಗೆ ಪ್ರಸ್ತುತ ಇರುವ ಮೂರು ಲಕ್ಷ ರೂ ಗಳಿಂದ ಆರು ಲಕ್ಷ ರೂ ಹಾಗೂ 35 ವರ್ಷಗಳು ಹಾಗೂ ಅದಕ್ಕಿಂತಲೂ ಮೇಲ್ಪಟ್ಟು ಸೇವೆ ಸಲ್ಲಿಸಿರುವ ವಕೀಲರಿಗೆ ನಾಲ್ಕು ಲಕ್ಷ ರೂ ಗಳಿಂದ ಎಂಟು ಲಕ್ಷ ರೂ ನಿವೃತ್ತಿ ಹಾಗೂ ಇತರೆ ಸೌಲಭ್ಯಗಳನ್ನು ದೊರಕಿಸಿಕೊಡಲು ಅವಕಾಶವಿರುತ್ತದೆ.

ಸಮಾನ ವೇತನ ಶ್ರೇಣಿ

ಸಮಾನ ವೇತನ ಶ್ರೇಣಿ

ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಕಾರಿ ಮತ್ತು ನೌಕರರನ್ನೂ ರಾಜ್ಯ ಸರ್ಕಾರಿ ನೌಕರರಂತೆ ಪರಿಗಣಿಸಿ ಐದನೇ ವೇತನ ಆಯೋಗದ ಶಿಫಾರಸ್ಸುಗಳನ್ವಯ ಸಮಾನ ವೇತನ ಶ್ರೇಣಿ ನೀಡಲು ತೀರ್ಮಾನಿಸಿದೆ. ಸಂಪುಟದ ಈ ತೀರ್ಮಾನವನ್ನು ರಾಜ್ಯಪಾಲರ ಗಮನಕ್ಕೆ ತರಲು ಸಂಪುಟದಲ್ಲಿ ನಿರ್ಣಯಿಸಲಾಗಿದೆ.

ಉದ್ಯಾನಗಳಿಗೆ ಮೀಸಲಿರಿಸುವ ವಿಸ್ತೀರ್ಣದಲ್ಲಿ ಸಾಮ್ಯತೆ

ಉದ್ಯಾನಗಳಿಗೆ ಮೀಸಲಿರಿಸುವ ವಿಸ್ತೀರ್ಣದಲ್ಲಿ ಸಾಮ್ಯತೆ

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯಿದೆ-1978 ರ ಪರಿಚ್ಛೇದ 2, 3 ಮತ್ತು 16 ಕ್ಕೆ ತಿದ್ದುಪಡಿ ಮಾಡುವ ಕುರಿತಂತೆ ಈ ಹಿಂದೆ ತೆಗೆದುಕೊಂಡಿರುವ ನಿರ್ಣಯವನ್ನು ಪುನರುಚ್ಛರಿಸಿರುವ ಸಂಪುಟವು ನಗರಾಭಿವೃಧಿ ಪ್ರಾಧಿಕಾರಗಳು ಹಾಗೂ ಖಾಸಗಿ ಸಂಸ್ಥೆಗಳು ಅಭಿವೃದ್ಧಿಪಡಿಸುವ ಬಡಾವಣೆಗಳಲ್ಲಿ ಉದ್ಯಾನಗಳಿಗೆ ಮೀಸಲಿರಿಸುವ ಸ್ಥಳದ ವಿಸ್ತೀರ್ಣವನ್ನು ಶೇಕಡಾ 10 ಕ್ಕೆ ಸೀಮಿತಗೊಳಿಸಿ ಸಾಮ್ಯತೆ ಕಾಯ್ದುಕೊಳ್ಳಲು ನಿರ್ಧರಿಸಿದೆ. ಈ ವಿಚಾರವನ್ನೂ ರಾಜ್ಯಪಾಲರ ಗಮನಕ್ಕೆ ತರಲು ಸಂಪುಟ ತೀರ್ಮಾನಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Cabinet meeting held at Vidhana Soudha on Wednesday, December 07 in the leadership of CM Siddaramaaih. Here is Cabinet meeting decisions.
Please Wait while comments are loading...