ಕರ್ನಾಟಕ ಬೈ ಎಲೆಕ್ಷನ್: ಚನ್ನಪಟ್ಟಣ ಹೈವೋಲ್ಟೇಜ್ ಕ್ಷೇತ್ರ ಯಾಕೆ?
ಚನ್ನಪಟ್ಟಣ, ಅಕ್ಟೋಬರ್ 16: ಕರ್ನಾಟಕದಲ್ಲಿ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ 2024 ಘೋಷಣೆ ಆಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ, ಬಳ್ಳಾರಿ ಜಿಲ್ಲೆಯ ಸೊಂಡೂರು ಕ್ಷೇತ್ರಕ್ಕಿಂತಲೂ ಹೆಚ್ಚಾಗಿ ಮಂಡ್ಯ ಜಿಲ್ಲೆಯ ಚನ್ನಪಟ್ಟಣದ ಕ್ಷೇತ್ರವು ರಾಜಕೀಯ ಶಕ್ತಿ ಕೇಂದ್ರವಾಗಿ ಬದಲಾಗುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿವೆ. ಮೈತ್ರಿ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಕಾಂಗ್ರೆಸ್‌ಗೆ ಈ ಕ್ಷೇತ್ರ ಪ್ರತಿಷ್ಠೆಯಾಗಿದೆ. ಹಾಗಾದರೆ ಈ ಕ್ಷೇತ್ರವನ್ನು ಹೈವೊಲ್ಟೇಜ್ ಕ್ಷೇತ್ರ ಎನ್ನಲಾಗುತ್ತಿರುವುದು ಏಕೆ? ಇದರ ಬಗ್ಗೆ ಯಾಕಿಷ್ಟು ಕುತೂಹಲ? ಇಲ್ಲಿದೆ ಮಾಹಿತಿ.
ಗೊಂಬೆ ನಗರಿ ಅಂತಲೂ ಕರೆಸಿಕೊಳ್ಳುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಬಹುಕಾಲದಿಂದಲೂ ಜೆಡಿಎಸ್ ಪ್ರಭಾವದಲ್ಲಿದೆ. ಇಲ್ಲಿ ಜೆಡಿಎಸ್ ವಿರುದ್ಧ ಬಿಜೆಪಿ ಸೈನಿಕ ಸಿ.ಪಿ ಯೋಗೇಶ್ವರ ತೊಡೆ ತಟ್ಟಿದ್ದರು. ಆದರೆ ಈಗ ಇವೆರಡು ಪಕ್ಷಗಳು ಮೈತ್ರಿ ಮಾತ್ರಿಕೊಂಡಿವೆ. ಇದು ಕುತೂಹಲಕ್ಕೆ ಮೊದಲ ಕಾರಣವಾಗಿದೆ.

ಕ್ಷೇತ್ರಕ್ಕೆ ಬರಪೂರ ಅನುದಾನ
ಇತ್ತ ಕಾಂಗ್ರೆಸ್ ಕಳೆದ ಮೂರು ತಿಂಗಳಿಂದಲೂ ಚನ್ನಪಟ್ಟಣದಲ್ಲಿಯೇ ಬೀಡು ಬಿಟ್ಟಂತೆ ಓಡಾಡುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅನುದಾನದ ಹೊಳೆ ಹರಿಸಿದೆ. ಕೇವಲ ಮೂರೇ ತಿಂಗಳಲ್ಲಿ ಕ್ಷೇತ್ರಕ್ಕಾಗಿ ರೂಪಾಯಿ 500 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಹಲವು ಭಾರಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಲ್ಲಿಗೆ ಭೇಟಿ ನೀಡಿದ್ದಾರೆ. ಜಲಸಂಪನ್ಮೂಲ ಇಲಾಖೆಯಿಂದ 100 ಕೋಟಿ ರೂ.ಗೂ ಹೆಚ್ಚು ಅನುದಾನ ಒದಗಿಸಲಾಗಿದೆ.
ಇದೆಲ್ಲದರ ಮಧ್ಯೆ ಚುನಾವಣೆ ಘೋಷಣೆ ಆಗಿದ್ದು, ಇನ್ನೂ ಅಭ್ಯರ್ಥಿಗಳು ಯಾರೆಂಬುದು ಫೈನಲ್ ಆಗಿಲ್ಲ. ಯಾರಿಗೆ ಬೈ ಎಲೆಕ್ಷನ್ ಟಿಕೆಟ್ ಸಿಗಲಿದೆ ಎಂಬುದರ ಬಗ್ಗೆ ರಾಜ್ಯ ರಾಜಕೀಯದಲ್ಲಿ ಕೌತುಕ ಮೂಡಿದೆ. ಬಿಜೆಪಿಯಿಂದ ಸಿಪಿ ಯೋಗೇಶ್ವರ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ. ಕೊನೆ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದಿರುವ ಸಿಪಿವೈ ಟಿಕೆಟ್ ಸಿಗದಿದ್ದರೆ ಪ್ರಮುಖ ನಿರ್ಧಾರ ಪ್ರಕಟಿಸುವ ಸುಳಿವು ಈಗಾಗಲೇ ಕೊಟ್ಟಿದ್ದಾರೆ.
ಕ್ಷೇತ್ರದಲ್ಲಿ ಕಾಂಗ್ರೆಸ್ 3 ತಿಂಗಳಿಂದ ಸಕ್ರಿಯ
ಇತ್ತ ಜೆಡಿಎಸ್ ಪಕ್ಷ ಮೈತ್ರಿ ಪಕ್ಷದ ನಾಯಕ ಸಿಪಿ ಯೋಗೇಶ್ವರ ಅವರಿಗೆ ಟಿಕೆಟ್ ತಪ್ಪಿಸಿ ತಮ್ಮ ಜೆಡಿಎಸ್ ನಾಯಕರಿಗೆ, ಅದರಲ್ಲೂ ನಿಖಿಲ್‌ಗೆ ಟಿಕೆಟ್ ನೀಡುವ ಉತ್ಸಾಹದಲ್ಲಿ ಎಚ್‌ಡಿ ಕುಮಾರಸ್ವಾಮಿ ಇದ್ದಾರೆ ಎನ್ನಲಾಗಿದೆ. ಈ ಜಗಳದ ಲಾಭ ಪಡೆಯಬೇಕೆಂದರೆ ಸಜ್ಜಾಗಿರುವ ಕಾಂಗ್ರೆಸ್ ಕಳೆದ ಮೂರು ತಿಂಗಳಿಂದ ಹೊಂಚು ಹಾಕಿ ಕೊಂಡು ಕಾಯುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಗೆದ್ದಿದ್ದ ಎಚ್‌ಡಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಹಿನ್ನೆಲೆಯಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಸಕ್ರಿಯವಾಗಿದೆ. ಅದರಲ್ಲೂ ಡಿಸಿಎಂ ಡಿಕೆ ಶಿವಕುಮಾರ್ ಅವರು, ಕಾರ್ಯಕರ್ತರನ್ನು, ಸಚಿವರನ್ನು ಕ್ಷೇತ್ರಕ್ಕೆ ಆಗಾಗ ಭೇಟಿ ಮಾಡಿಸುತ್ತಲೇ ಇದ್ದಾರೆ. ಈವರೆಗೆ ಸುಮಾರು 15ಕ್ಕೂ ಹೆಚ್ಚು ಭಾರಿ ಭೇಟಿ ಮಾಡಿಸಿದ್ದಾರೆ.
ಪಕ್ಷದ ಭಾವುಟ ಹಾರಿಸಲು ಕಾಂಗ್ರೆಸ್ ಪ್ಲಾನ್
ಡಿಕೆ ಶಿವಕುಮಾರ್ ತಾವು ಸಹ ಖುದ್ದು ಭೇಟಿ ನೀಡಿದ್ದಾರೆ. ಮೇಲಿಂದ ಮೇಲೆ ಜನಸ್ಪಂದನೆ ಕಾರ್ಯಕ್ರಮ ನಡೆಸಿದ್ದಾರೆ. ಈ ಬಾರಿ ಶತಾಯಗತಾಯ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಭಾವುಟ ನೆಡಲು ಅವರು ಸಜ್ಜಾಗಿದ್ದಾರೆ. ಕಾಂಗ್ರೆಸ್‌ನಿಂದ ಡಿಕೆ ಸುರೇಶ್ ಅವರನ್ನು ನಿಲ್ಲಿಸಲು ಡಿಕೆ ಶಿವಕುಮಾರ್ ಅವರು ಇದೆಲ್ಲ ಮಾಡುತ್ತಿದ್ದಾರೆ ಎಂಬುದು ಗುಟ್ಟಾಗೇನು ಉಳಿದಿಲ್ಲ.
ಜೆಡಿಎಸ್-ಬಿಜೆಪಿಯಿಂದ ಯಾರಿಗೆ ಮಣೆ?
ಈ ಮಧ್ಯೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ಯಾರು ಎಂಬುದೇ ಗೊಂದಲ ಗೂಡಾಗಿದೆ. ಅಲ್ಲದೇ ಟಿಕೆಟ್ ಗಾಗಿ ಲಾಭಿ ಸಹ ನಡೆಯುತ್ತಿದೆ. ಚನ್ನಪಟ್ಟಣದಲ್ಲಿ ಮೂರು ಪಕ್ಷಗಳಿಂದ ಆಕಾಂಕ್ಷಿಗಳು ಇದ್ದಾರೆ. ಇವರ ಮಧ್ಯದ ಪೈಪೋಟಿ, ಟಿಕೆಟ್ ಲಾಭಿಯಿಂದಲೇ ಈ ಬಾರಿ ಚನ್ನಪಟ್ಟಣ ಹೆಚ್ಚು ಗಮನ ಸೆಳೆಯುವ ಕ್ಷೇತ್ರವಾಗಲಿದೆ.
ಬಿಜೆಪಿಯಲ್ಲಿ ಸೀಟು ಸಿಗದಿದ್ದರೆ ಸಿಪಿ ಯೋಗೇಶ್ವರ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಲೇ ಇವೆ. ಬಿಜೆಪಿಯು ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಕ್ಷೇತ್ರವು ಕಾಂಗ್ರೆಸ್ ಪಾಲಾಗದಂತೆ ತಡೆಯಲು ಪ್ಲಾನ್ ಮಾಡಿಕೊಂಡಿದೆ. ಆದರೆ ಟಿಕೆಟ್ ಯಾರಿಗೆ ಸಿಗಲಿದೆ ಎಂಬುದು ನಿರ್ಧಾರವಾಗಬೇಕಿದೆ.
ಸದ್ಯ ಬೈ ಎಲೆಕ್ಷನ್ ಇದೇ ನವೆಂಬರ್ 13ರಂದು ನಡೆಯಲಿದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ಇದೇ ಅಕ್ಟೋಬರ್ 18ರಂದು ಅಧಿಸೂಚನೆ ಪ್ರಕಟಗೊಳ್ಳಲಿದೆ.












Click it and Unblock the Notifications