Karnataka Budget 2023: ಕಾಂಗ್ರೆಸ್ ಪ್ರಣಾಳಿಕೆಗೆ ಬಜೆಟ್ ಮೂಲಕ ಟಕ್ಕರ್ ಕೊಡ್ತಾರಾ ಸಿಎಂ ಬೊಮ್ಮಾಯಿ..?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡನೇ ಹಾಗೂ ಅವರ ಅಧಿಕಾರವಧಿಯ ಕೊನೆಯ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಜೆಟ್ ಹೇಗಿರಬಹುದು ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ. ಈ ಬಜೆಟ್ ಮೂಲಕವೇ ಸಿಎಂ ವಿಪಕ್ಷಗಳ ಚುನಾವಣಾ ಪ್ರಣಾಳಿಕೆಗೆ ತಿರುಗೇಟು ನೀಡುವ ಸಾಧ್ಯತೆ ಇದೆ.
ಮೈಸೂರು, ಫೆಬ್ರವರಿ 17: ಕಾಂಗ್ರೆಸ್ ಘೋಷಣೆ ಮಾಡಿರುವ ಪ್ರತಿ ಕುಟುಂಬದ ಮಹಿಳೆಗೆ 2000 ರೂ, 200 ಯೂನಿಟ್ ಉಚಿತ ವಿದ್ಯುತ್, 10 ಕೆಜಿ ಅಕ್ಕಿ ಯೋಜನೆಯನ್ನು ರಾಜ್ಯದ ಜನರಿಗೆ ಪ್ರಜಾಧ್ವನಿ ಯಾತ್ರೆ ಮೂಲಕ ತಲುಪಿಸುವ ಕಾರ್ಯವನ್ನು ಭರದಿಂದ ಮಾಡಿದೆ. ಇದರ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡನೇ ಹಾಗೂ ಅವರ ಅಧಿಕಾರವಧಿಯ ಕೊನೆಯ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಜೆಟ್ ಹೇಗಿರಬಹುದು ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ.
ಈಗಾಗಲೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಕಟಿಸಿರುವ ಯೋಜನೆ ಜನಪ್ರಿಯವಾಗುತ್ತಿದ್ದು, ಅದರ ಮುಂದೆ ಸರ್ಕಾರ ಪ್ರಕಟಿಸುವ ಯೋಜನೆಗಳು ಎಷ್ಟರ ಮಟ್ಟಿಗೆ ಜನಮನ ಸೆಳೆಯುತ್ತದೆಯೋ ಗೊತ್ತಿಲ್ಲ. ಆದರೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಪ್ರತಿಕುಟುಂಬದ ಮಹಿಳೆಗೆ 2000 ರೂ, 200 ಯೂನಿಟ್ ಉಚಿತ ವಿದ್ಯುತ್, 10 ಕೆಜಿ ಅಕ್ಕಿ ಯೋಜನೆ ಜನರನ್ನು ಸೆಳೆಯುತ್ತಿದ್ದು, ಈ ಯೋಜನೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪ್ರಚಾರ ನಡೆಸುತ್ತಿರುವುದು ಬಿಜೆಪಿ ಮೇಲೆ ಪರಿಣಾಮ ಬೀರಿದ್ದು, ಜನರನ್ನು ಸೆಳೆಯುವ ಬಜೆಟ್ ಮಂಡನೆಗೆ ಮುಖ್ಯಮಂತ್ರಿಗಳು ಆದ್ಯತೆ ನೀಡಬೇಕಾದ ಅನಿವಾರ್ಯತೆ ಬಂದೊದಗಿದೆ.
ಈ ಬಾರಿಯ ಕಾಂಗ್ರೆಸ್‌ನ ಪ್ರಜಾಧ್ವನಿ ಸಮಾವೇಶದಲ್ಲಿ ಪ್ರತಿಕುಟುಂಬದ ಮಹಿಳೆಗೆ 2000 ರೂ, 200 ಯೂನಿಟ್ ಉಚಿತ ವಿದ್ಯುತ್, 10 ಕೆಜಿ ಅಕ್ಕಿ ಯೋಜನೆ ಹೈಲೈಟ್ ಆಗುತ್ತಿದ್ದು, ಬಡವರು ಮತ್ತು ಮಧ್ಯಮ ವರ್ಗದವರು ಕಾಂಗ್ರೆಸ್‌ನತ್ತ ಮುಖ ಮಾಡುವಂತೆ ಮಾಡಿದೆ. ಇದು ಎಷ್ಟರ ಮಟ್ಟಿಗೆ ಅನುಷ್ಠಾನವಾಗುತ್ತದೆ ಎನ್ನುವುದು ಪ್ರಶ್ನೆಯಾಗಿ ಉಳಿದಿದ್ದರೂ ತಕ್ಷಣಕ್ಕೆ ಜನರನ್ನು ಸೆಳೆಯುತ್ತಿರುವುದಂತು ನಿಜ.

ಜನರ ಮುಂದೆ ಹತ್ತಾರು ಪ್ರಶ್ನೆಗಳು
ಇಷ್ಟರಲ್ಲೇ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಆರೋಪ ಮಾಡುತ್ತಾ ಬಂದಿರುವ ಕಾಂಗ್ರೆಸ್ ಆ ಬಗ್ಗೆ ಸರ್ಕಾರದ ವಿರುದ್ಧ ಯಾವುದೇ ದೂರನ್ನು ಸಲ್ಲಿಸದಿದ್ದರೂ ಕೂಡ ಅದನ್ನು ಜನ ವಲಯಕ್ಕೆ ಎಳೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂಬ ಮಾತನ್ನು ಸೃಷ್ಟಿ ಮಾಡಿದೆ. ಹೀಗಾಗಿ ಸರ್ಕಾರ ಏನೇ ಲಾಗ ಹಾಕಿದರೂ ಅದರಿಂದ ಹೊರಗೆ ಬರುವುದು ಕಷ್ಟವಾಗಿದೆ.
ಚುನಾವಣಾ ಹೊಸ್ತಿಲಲ್ಲಿರುವಾಗ ಮಂಡನೆಯಾಗುವ ಬಜೆಟ್ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿರಲಿದೆ..? ಮತ್ತು ಅದು ಜನಕ್ಕೆ ತಲುಪುತ್ತಾ..? ಘೋಷಣೆಯಾಗುವ ಯೋಜನೆಗಳು ಅನುಷ್ಠಾನಗೊಳ್ಳುತ್ತಾ..? ಎಂಬಿತ್ಯಾದಿ ಪ್ರಶ್ನೆಗಳನ್ನು ಜನ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನರಿಗೆ ಅನುಕೂಲವಾಗುವ ಯಾವುದೇ ಯೋಜನೆಗಳನ್ನು ಘೋಷಣೆ ಮಾಡಿದರೂ ಅದು ಫಲಪ್ರದವಾಗುವುದು ಕಷ್ಟ ಸಾಧ್ಯವಾಗಿದೆ.
ಜನರಲ್ಲಿ ಭರವಸೆ ಮೂಡಿಸಲಿದೆಯಾ ಬಜೆಟ್?
ಇನ್ನು ಮುಖ್ಯಮಂತ್ರಿಗಳು ಯಾವುದೇ ಯೋಜನೆಗಳನ್ನು ಬಜೆಟ್‌ನಲ್ಲಿ ಮಂಡಿಸಿದರೂ ಅದಕ್ಕೆ ಟೀಕೆಗಳು ಬಂದೇ ಬರುತ್ತವೆ. ಅದನ್ನು ವಿಪಕ್ಷಗಳು ಅದನ್ನು ಒಪ್ಪುವುದಿಲ್ಲ. ಬದಲಾಗಿ ಚುನಾವಣಾ ಗಿಮಿಕ್ ಎಂಬಂತೆ ಬಿಂಬಿಸುತ್ತಿವೆ. ಈಗಿನ ಪರಿಸ್ಥಿತಿಯಲ್ಲಿ ಬಜೆಟ್‌ನಲ್ಲಿ ಮಂಡನೆಯಾಗುವ ಯೋಜನೆಗಿಂತ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಘೋಷಣೆಗಳು ಜನಪ್ರಿಯವಾಗುತ್ತಿವೆ. ಮತ್ತು ನಾವು ಅಧಿಕಾರಕ್ಕೆ ಬಂದರೆ ಮಾಡಿರುವ ಘೋಷಣೆಗಳನ್ನು ಅನುಷ್ಠಾನಕ್ಕೆ ತರುವ ಭರವಸೆಗಳನ್ನು ನೀಡಲಾಗುತ್ತಿದೆ.
ಸರ್ಕಾರದ ಯೋಜನೆಗಳ ಘೋಷಣೆಗಿಂತ ವಿಪಕ್ಷಗಳ ಯೋಜನೆಯ ಭರವಸೆಯೇ ಹೈಲೈಟ್ ಆಗುತ್ತಿರುವುದು ಈ ಬಾರಿಯ ಚುನಾವಣೆಯ ಪ್ರಮುಖ ಆಕರ್ಷಣೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಆದರೆ ವಿವಿಧ ಜನಪ್ರಿಯ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡುವ ಮೂಲಕ ಜನರನ್ನು ಸೆಳೆಯಬೇಕಾದ ಅನಿವಾರ್ಯತೆ ಬಿಜೆಪಿ ನೇತೃತ್ವದ ಸರ್ಕಾರಕ್ಕಿದೆ. ಹೀಗಾಗಿ ಎಲ್ಲವೂ ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಮಾಡಿದರೂ ಅಚ್ಚರಿ ಇಲ್ಲ. ಎಲ್ಲದಕ್ಕೂ ಇಂದಿನ ರಾಜ್ಯ ಬಜೆಟ್ ಉತ್ತರವಾಗಲಿದೆ.












Click it and Unblock the Notifications