ಐಎಂಎ ಬಹುಕೋಟಿ ವಂಚನೆ: ಇಡಿ ತನಿಖೆಗೆ ಬಿಜೆಪಿ ಆಗ್ರಹ
ಬೆಂಗಳೂರು, ಜೂನ್ 10: ಐಎಂಎ ಜ್ಯುವೆಲರಿ ಸಂಸ್ಥೆಯು ಗ್ರಾಹಕರಿಗೆ ವಂಚನೆ ಮಾಡಿರುವ ಪ್ರಕರಣವನ್ನು ತನಿಖೆ ನಡೆಸುವಂತೆ ರಾಜ್ಯ ಬಿಜೆಪಿಯು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿಜೆಪಿ, ಶಿವಾಜಿನಗರ ಐಎಂಎ ಜ್ಯುವೆಲರಿ ಮಾಲೀಕ ಮನ್ಸೂರ್ ಖಾನ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ, ನಾಮಪತ್ತೆ ಆಗಿರುವ ಪ್ರಕರಣವನ್ನು ಸಿಬಿಐ, ಇಡಿ, ಐಟಿ ಇಲಾಖೆಗಳು ಒಳಗೊಂಡಂತೆ ಸಮಗ್ರ ತನಿಖೆ ಮಾಡಬೇಕು ಎಂದು ರಾಜ್ಯ ಬಿಜೆಪಿ ಒತ್ತಾಯಿಸಿದೆ.
ಮಾಜಿ ಸಚಿವರು, ಹಾಲಿ ಶಾಸಕರು, ಮಾಜಿ ಮುಖ್ಯಮಂತ್ರಿಗಳು ಇವರೆಲ್ಲರ ಆಪ್ತತೆ ತನಗಿದೆ ಎಂದು ಹೇಳಿ ಜನರಿಗೆ ವಂಚಿಸಿ ಪರಾರಿಯಾಗಿದ್ದಾನೆ. ಮೋಸ ಮಾಡಲೆಂದೇ ಹುಟ್ಟಿಕೊಂಡಿರುವ ಜಾಲದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ ಹಾಗಾಗಿ ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಒಂದು ವರ್ಷದ ಹಿಂದೆಯೇ ಈ ಬಗ್ಗೆ ಮಾನವ ಹಕ್ಕು ಆಯೋಗದ ಕಡೆಯಿಂದ ದೂರು ಬಂದಿತ್ತು, ಆಗ ಪರಮೇಶ್ವರ್ ಅವರು ಗೃಹ ಸಚಿವರಾಗಿದ್ದರು. ಆಗ ಪೊಲೀಸರು ದೂರುದಾರರಿಂದ ಹೇಳಿಕೆಯನ್ನೂ ಪಡೆಯದೆ ಕ್ಲೀನ್ ಚಿಟ್ ನೀಡಿದ್ದರು. ಇದೆಲ್ಲವೂ ಅನುಮಾನ ಹುಟ್ಟಿಸಿದೆ ಎಂದು ಪ್ರಕರಣದ ಹಿಂದಿನ ವರದಿಯನ್ನು ರಾಜ್ಯ ಬಿಜೆಪಿ ಉಲ್ಲೇಖಿಸಿದೆ.
ಹಾಲಿ ಜೆಡಿಎಸ್, ಕಾಂಗ್ರೆಸ್ ಶಾಸಕರು, ಮುಖಂಡರ ಹೆಸರುಗಳು ಈ ಪ್ರಕರಣದಲ್ಲಿ ಕೇಳಿ ಬಂದಿದ್ದು, ಪ್ರಸ್ತುತ ತನಿಖೆ ನ್ಯಾಯಯುತವಾಗಿ ನಡೆಯುತ್ತದೆ ಎಂಬ ಬಗ್ಗೆ ಅನುಮಾನವಿದೆ ಹಾಗಾಗಿ ಯಾರು ಹಣ ಪಡೆದಿದ್ದಾರೆ, ಎಲ್ಲೆಲ್ಲಿ ಹಣ ನೀಡಿದ್ದಾರೆ ಎಂಬ ಬಗ್ಗೆ ಸಮಗ್ರ ತನಿಖೆ ಆಗಲು ಐಟಿ, ಇಡಿ, ಸಿಬಿಐ ಒಟ್ಟಾಗಿ ಸಮಗ್ರ ತನಿಖೆ ಆಗಬೇಕು ಎಂದು ಬಿಜೆಪಿ ಆಗ್ರಹಿಸಿದೆ.












Click it and Unblock the Notifications