ಸುಮಲತಾ ನಡೆಗೆ ಬೇಸತ್ತ ಬಿಜೆಪಿ ನಾಯಕರು: ಮೈತ್ರಿಗೆ ಮುಳುವಾಗುತ್ತಾ?
ಮಂಡ್ಯ, ಮಾರ್ಚ್ 09: 2019 ರ ಲೋಕಸಭಾ ಚುನಾವಣೆಯ ವೇಳೆ ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾದ ಮಂಡ್ಯ ಲೋಕಸಭಾ ಕ್ಷೇತ್ರ ಈ ಬಾರಿಯ ಚುನಾವಣೆಯಲ್ಲಿಯೂ ರಾಜಕೀಯ ಬದ್ದವೈರಿಗಳಾದ ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ನಡುವೆ ಜಟಾಪಟಿ ಏರ್ಪಡಲಿದೆ.
ಈಗಾಗಲೇ ಕಳೆದುಕೊಂಡ ಅಸ್ತಿತ್ವದಲ್ಲಿ ಮರಳಿ ಪಡೆಯುವ ನಿಟ್ಟಿನಲ್ಲಿ ಮಂಡ್ಯ ಕ್ಷೇತ್ರಕ್ಕಾಗಿ ಬಿಜೆಪಿ ಹೈಕಮಾಂಡ್ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದು, ಜೆಡಿಎಸ್ ಗೆ ಮಂಡ್ಯ ಕ್ಷೇತ್ರ ಸಿಗಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ತನ್ನ ಅಸ್ತಿತ್ವವನ್ನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಂಡ್ಯ ಹಾಲಿ ಸಂಸದೆ ಸುಮಲತಾ ಟಿಕೆಟ್‌ಗಾಗಿ ಮೋದಿ ಹಾಗೂ ಬಿ ಎಲ್ ಸಂತೋಷ್ ಭೇಟಿ ಮಾಡಿದ್ದು, ನನಗೆ ಟಿಕೆಟ್ ಸಿಗಲಿದೆ ಎಂದು ಸುಮಲತಾ ಕ್ಷೇತ್ರದಲ್ಲಿ ಆಕ್ಟಿವ್ ಆಗಿದ್ದಾರೆ.

ಮಂಡ್ಯ ರಾಜಕಾರಣ ಅಂದರೆ ಇಂಡಿಯಾನೇ ತಿರುಗಿ ನೋಡುತ್ತೆ. ಇದೀಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ಕಾವು ಜೋರಾಗಿದೆ. ಸುಮಲತಾ ಹಾಗೂ ಕುಮಾರಸ್ವಾಮಿ ನಡುವೆ ಮತ್ತೆ ಜಟಾಪಟಿ ಏರ್ಪಟ್ಟಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯಾರಿಗೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಕಾಂಗ್ರೆಸ್ ನ ಕಟ್ಟಿ ಹಾಕುವ ನಿಟ್ಟಿನಲ್ಲಿ ಕಮಲ-ದಳ ಮೈತ್ರಿಯಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿಯಿಂದಾಗಿ ಬಿಜೆಪಿಯಿಂದ ಬಲ ಹೆಚ್ಚಗಲಿದೆ ಎನ್ನುವ ಚರ್ಚೆ ಶುರುವಾಗಿದೆ. ಇತ್ತ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಅವರನ್ನ ಕಾಂಗ್ರೆಸ್ ಹೈಕಮಾಂಡ್ ಕಣಕ್ಕಿಳಿಸಿದ್ದು, ಮೈತ್ರಿ ಅಭ್ಯರ್ಥಿ ಮಾತ್ರ ಇನ್ನೂ ಫೈನಲ್ ಆಗಿಲ್ಲ.
ಇತ್ತ ಜೆಡಿಎಸ್ ನಾಯಕರು ಮಂಡ್ಯ ಕ್ಷೇತ್ರಕ್ಕಾಗಿ ಪಟ್ಟು ಹಿಡಿದಿದ್ದು, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿದ ಸುಮಲತಾ ಮಂಡ್ಯ ಬಿಡುವುದಿಲ್ಲ ಎಂದು ಪದೇ ಪದೇ ಹೇಳುತ್ತಿದ್ದಾರೆ. ಮಂಡ್ಯದಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಸುಮಲತಾ ಅವರಿಗೆ ಹೊಸ ತಲೆನೋವು ಶುರುವಾಗಿದೆ. ಆದರೆ ಸುಮಲತಾ ಅವರ ನಡೆಯ ಬಗ್ಗೆ ಬಿಜೆಪಿ ನಾಯಕರ ಅಸಮಾಧಾನ ಹೆಚ್ಚಾಗುತ್ತಿದೆ. 2019ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಮಲತಾ ಅವರನ್ನು ಬಿಜೆಪಿ ಬೆಂಬಲಿಸಿತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಣಕ್ಕೆ ಇಳಿಯದೇ ಪಕ್ಷದ ಕಾರ್ಯಕರ್ತರು ಸುಮಲತಾ ಅವರನ್ನು ಗೆಲ್ಲಿಸಿದ್ದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸುವ ಕಾರ್ಯತಂತ್ರದ ಭಾಗವಾಗಿ ಕೆಪಿಸಿಸಿ ಮಾಜಿ ಸದಸ್ಯ ಎಸ್. ಸಚ್ಚಿದಾನಂದ ಸೇರಿದಂತೆ ಹಲವರನ್ನು ಬಿಜೆಪಿಗೆ ಕರೆತರಲಾಯಿತು. ಸಚ್ಚಿದಾನಂದ ಅವರು ಮಂಡ್ಯ ಸಂಸದೆ ಸುಮಲತಾ ಅವರ ಆಪ್ತರಲ್ಲಿ ಒಬ್ಬರು. 2019 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಎದುರಿಸಲು ಮಂಡ್ಯದಲ್ಲಿ ಸುಮಲತಾ 7,03,660 ಮತಗಳನ್ನು ಪಡೆದರೆ, ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 5,77,784 ಮತಗಳನ್ನು ಪಡೆದಿದ್ದರು.

ಸಂಸದೆಯಾಗಿ ಸುಮಲತಾ ಅವರ ಯಶಸ್ಸಿನಲ್ಲಿ ಸಚ್ಚಿದಾನಂದ ಅವರ ಪಾತ್ರವೂ ಪ್ರಮುಖವಾಗಿದೆ. 2022ರಲ್ಲಿ ಬಿಜೆಪಿ ಸೇರಿದ ಸಚ್ಚಿದಾನಂದ 2023ರ ವಿಧಾನಸಭೆ ಚುನಾವಣೆಗೆ ಶ್ರೀರಂಗಪಟ್ಟಣದಲ್ಲಿ ಟಿಕೆಟ್ ಪಡೆದಿದ್ದರು. 42,306 ಮತಗಳನ್ನು ಪಡೆದ ಸಚ್ಚಿದಾನಂದ 3ನೇ ಸ್ಥಾನದಲ್ಲಿ ನಿಂತು ಸೋತರು. ಜೆಡಿಎಸ್‌ನ ರವೀಂದ್ರ ಶ್ರೀಕಂಠಯ್ಯ 61,680 ಮತ್ತು ಕಾಂಗ್ರೆಸ್‌ನ ರಮೇಶ್ ಬಂಡಿಸಿದ್ದೇಗೌಡ 72,817 ಮತಗಳನ್ನು ಪಡೆದರು. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳಿಗೆ ಸಚ್ಚಿದಾನಂದ ತೀವ್ರ ಪೈಪೋಟಿ ನೀಡಿದರು.
ಮಂಡ್ಯ ಸಂಸದೆ ಸುಮಲತಾ ಅವರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕ ಸಚ್ಚಿದಾನಂದ ಅವರನ್ನು ಬಹಿರಂಗವಾಗಿ ಬೆಂಬಲಿಸದಿರುವುದು ಅವರ ಸೋಲಿಗೆ ಕಾರಣ ಎಂದು ಬಿಜೆಪಿ ಮುಖಂಡರು ಹೇಳುತ್ತಾರೆ. ಇದರಿಂದ ಸಚ್ಚಿದಾನಂದ ಹಾಗೂ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ನಾಮಪತ್ರ ಸಲ್ಲಿಕೆ ವೇಳೆ ಸಚ್ಚಿದಾನಂದ ಜತೆಗಿದ್ದ ಸುಮಲತಾ ನಂತರ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಸರಿಯಾಗಿ ಭಾಗವಹಿಸಿರಲಿಲ್ಲ. ಈ ಹೊಡೆತದಿಂದಲೇ ಸಚ್ಚಿದಾನಂದ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ಇದೀಗ ಬಿಜೆಪಿಯಿಂದ ಸುಮಲತಾ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಈ ಅತೃಪ್ತಿ ಸುಮಲತಾಗೆ ಹಿನ್ನಡೆಯಾಗಲಿದೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.
ಮಂಡ್ಯದಲ್ಲಿ ಸುಮಲತಾ ಅವರು 2019ರ ಲೋಕಸಭೆ ಚುನಾವಣೆ ವೇಳೆ ಇದ್ದಷ್ಟು ಜನಪ್ರಿಯತೆ ಈಗ ಇಲ್ಲ ಎನ್ನುವ ಕುರಿತು ಚರ್ಚೆಯಾಗುತ್ತಿದ್ದು, ಸುಮಲತಾ ನಡೆ ಕುರಿತು ಬಿಜೆಪಿ ನಾಯಕರಲ್ಲೇ ತೀವ್ರ ಅಸಮಾಧಾನ ಇದೆ ಎನ್ನುವ ಮಾತು ಕೇಳಿ ಬಂದಿದೆ.
ಸಚ್ಚಿದಾನಂದ ಮಂಡ್ಯ ಲೋಕಸಭಾ ಚುನಾವಣೆಯ ವಿಚಾರವಾಗಿ ಕಳೆದ ವಾರ ಸುಮಲತಾ ಅವರು ಮಂಡ್ಯದಲ್ಲಿ ಡಿ.25 ರಂದು ದರ್ಶನ ಅವರಿಗಾಗಿ ಅದ್ಧೂರಿಯಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ದರ್ಶನ್ ಅವರ ಆಪ್ತ ಮೂಲಗಳ ಪ್ರಕಾರ ಅವರು ಸುಮಲತಾ ಅವರ ಆಹ್ವಾನದ ಮೇರೆಗೆ ಹೋಗಿದ್ದಾರೆಯೇ ಹೊರತು ವೈಯಕ್ತಿಕ ಲಾಭಕ್ಕಾಗಿ ಅಲ್ಲ. ಆದರೆ ಸುಮಲತಾ ವಿರುದ್ಧ ಬಿಜೆಪಿ ನಾಯಕರ ಕೋಪ ಇನ್ನೂ ಶಮನವಾಗಿಲ್ಲ. ಸುಮಲತಾ ಪದೇ ಪದೇ ನನಗೆ ಟಿಕೆಟ್ ಸಿಗುತ್ತೆ ಎನ್ನುವ ಹೇಳಿಕೆ ಬಿಜೆಪಿ ನಾಯಕರ ಬೇಸರಕ್ಕೆ ಕಾರಣವಾಗಿದ್ದು, ಇದು ಮೈತ್ರಿಗೆ ಮುಳುವಾಗುತ್ತಾ ಎಂಬ ಅನುಮಾನ ಶುರುವಾಗಿದೆ.












Click it and Unblock the Notifications