Karnataka BJP: ಒಡೆದ ಮನೆಯಾದ ರಾಜ್ಯ ಬಿಜೆಪಿ..ಫಲಕೊಡದ ಮೋದಿ ಮಂತ್ರ!
ಬೆಂಗಳೂರು, ನವೆಂಬರ್ 30: ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತ ಸುತ್ತಾಡುತ್ತಾ ಪಕ್ಷದ ಬಲವರ್ಧನೆಗೆ ಹಗಲು ಇರುಳೆನ್ನದೆ ಶ್ರಮಿಸುತ್ತಿದ್ದಾರೆ. ಲೋಕ ಸಭೆಯಿರಲಿ, ರಾಜ್ಯ ವಿಧಾನಸಭಾ ಚುನಾವಣೆಯಿರಲಿ ಬಿಜೆಪಿ ಗೆಲ್ಲಬೇಕಾದರೆ ಮೋದಿ ಬರಲೇ ಬೇಕಾಗಿದೆ. ಇದೆಲ್ಲದರ ನಡುವೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಪಠಿಸಿದ ಮಂತ್ರ ಫಲಿಸಿದೆ. ಹೀಗಾಗಿ ನಿರೀಕ್ಷೆ ಮಾಡದ ಗೆಲುವನ್ನು ಅಲ್ಲಿ ಪಡೆಯಲು ಸಾಧ್ಯವಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಒಗ್ಗಟ್ಟು ಮೂಡಿಸಿದ ಮೋದಿ ಮಂತ್ರ ಕರ್ನಾಟಕದಲ್ಲಿ ಏಕೆ ಫಲಕೊಡುತ್ತಿಲ್ಲ? ಇದು ಸದ್ಯದ ಪ್ರಶ್ನೆಯಾಗಿದೆ.
ಇಷ್ಟಕ್ಕೂ ಮೋದಿ ಪಠಿಸಿದ ಆ ಮಂತ್ರ ಯಾವುದು ಎಂಬುದಕ್ಕೆ ಮುನ್ನ ರಾಜ್ಯ ಬಿಜೆಪಿಯ ದುಸ್ಥಿತಿ ಬಗ್ಗೆ ನೋಡಲೇ ಬೇಕಾಗಿದೆ. ಇವತ್ತು ರಾಜ್ಯ ಬಿಜೆಪಿಯ ನಾಯಕರು ಒಗ್ಗಟ್ಟು ಪ್ರದರ್ಶಿಸುವಲ್ಲಿ ವಿಫಲರಾಗಿದ್ದಾರೆ. ಅಷ್ಟೇ ಅಲ್ಲದೆ ಎಲ್ಲರನ್ನೂ ಒಂದೆಡೆ ಸೇರಿಸಿ ಒಟ್ಟಾಗಿ ಕರೆದುಕೊಂಡು ಹೋಗುವ ಸಾಮರ್ಥ್ಯ ಯಾವ ನಾಯಕನಲ್ಲಿಯೂ ಇಲ್ಲದಾಗಿದೆ.

ಎಲ್ಲರೂ ತಾವೇ ನಾಯಕರೆಂಬಂತೆ ಬಿಂಬಿಸುತ್ತಿದ್ದಾರೆಯಾದರೂ ಇಡೀ ಪಕ್ಷವನ್ನು ಒಟ್ಟಾಗಿ ಕರೆದೊಯ್ದು ಗೆಲ್ಲಿಸಿಕೊಂಡು ಬರುವ ತಾಕತ್ ಯಾರಿಗೂ ಇಲ್ಲವಾಗಿದೆ. ಹೀಗಾಗಿಯೇ ಪಕ್ಷ ಸೋಲುತ್ತಿದೆ. ಹಿರಿಯ ನಾಯಕ ಮತ್ತು ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ ಬಿ.ಎಸ್.ಯಡಿಯೂರಪ್ಪ ಮತ್ತು ಈಶ್ವರಪ್ಪ ಪರಸ್ಪರ ಶತ್ರುಗಳಾಗಿದ್ದಾರೆ. ಶತ್ರುವಿನ ಶತ್ರು ಮತ್ಯಾರಿಗೋ ಮಿತ್ರರಾಗುತ್ತಿದ್ದಾರೆ.
ಬಹಳಷ್ಟು ನಾಯಕರು ಅಧಿಕಾರದ ಹಪಾಹಪಿಯಲ್ಲಿದ್ದಾರೆ. ಹೀಗಾಗಿ ಅವರು ಯಾರ ಮಾತನ್ನೂ ಕೇಳದಂತಾಗಿದೆ. ಪಕ್ಷವನ್ನು ಕಟ್ಟಿ ಬೆಳೆಸಿದ ಮತ್ತು ಪಕ್ಷಕ್ಕಾಗಿ ದುಡಿದ ಪ್ರಭಾವಿ ವೀರಶೈವ ನಾಯಕರಾಗಿರುವ ಬಿ.ಎಸ್.ಯಡಿಯೂರಪ್ಪ ಅವರನ್ನು ಹೊರಗಿಟ್ಟರೆ ಪಕ್ಷದ ಮೇಲೆ ಪರಿಣಾಮವಾಗುತ್ತದೆ. ಜತೆಗೆ ಯುವ ಮತದಾರರನ್ನು ಸೆಳೆಯುವ ಸಲುವಾಗಿ ಹೈಕಮಾಂಡ್ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರರಿಗೆ ರಾಜ್ಯದ ಸಾರಥ್ಯವನ್ನು ನೀಡಿತು. ಇವತ್ತು ಬಿಜೆಪಿಯಲ್ಲಿ ಅಸಮಾಧಾನಗಳು ಈ ಮಟ್ಟಕ್ಕೆ ಹೋಗಿರುವುದಕ್ಕೆ ಅದು ಒಂದು ಕಾರಣ ಎಂದರೆ ತಪ್ಪಾಗಲಾರದು.

ರಾಜ್ಯ ನಾಯಕರ ಶ್ರಮ, ಸಾಮರ್ಥ್ಯವೇನು?
ನಮ್ಮ ರಾಜ್ಯದ ಬಿಜೆಪಿ ನಾಯಕರ ಪೈಕಿ ಒಬ್ಬರೋ ಇಬ್ಬರನ್ನು ಹೊರತು ಪಡಿಸಿದರೆ ಉಳಿದ ಬಹುತೇಕರಿಗೆ ಪಕ್ಕದ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವುದಿರಲಿ ತಾವೇ ಗೆಲ್ಲುವುದೇ ಕಷ್ಟವಾಗಿದೆ. ಇಂತಹವರೆಲ್ಲರೂ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ದ್ವೇಷದ, ಬಂಡಾಯದ ರಾಜಕಾರಣ ಮಾಡುತ್ತಿದ್ದಾರೆ. ಇವರು ಗೆಲ್ಲಬೇಕಾದರೆ ಮೋದಿ ಬರಬೇಕಾದ ಸ್ಥಿತಿಯಲ್ಲಿದ್ದಾರೆ. ಹೀಗಿರುವಾಗ ಎಷ್ಟು ದಿನ ಮೋದಿಯನ್ನು ತೋರಿಸಿ ಮತ ಪಡೆಯುತ್ತೀರಾ? ಎಂಬುದು ಜನವಲಯದಲ್ಲಿ ಕೇಳಿ ಬರುತ್ತಿರುವ ಪ್ರಶ್ನೆಯಾಗಿದೆ.
ಗೆಲುವಿಗೆ ಮೋದಿಯೇ ಬರಬೇಕಾದರೆ ರಾಜ್ಯ ನಾಯಕರ ಶ್ರಮ, ಸಾಮರ್ಥ್ಯವೇನು? ಹೋಗಲಿ ಮೋದಿ ಹೇಳಿಕೊಟ್ಟ ಮಂತ್ರಕ್ಕಾದರೂ ಬಿಡಿಗಾಸು ಬೆಲೆಯನ್ನು ನೀಡುತ್ತಿದ್ದಿರಾ? ಅದು ಇಲ್ಲ. ಹೀಗಾಗಿಯೇ ರಾಜ್ಯದಲ್ಲಿ ಬಿಜೆಪಿ ಹಳ್ಳ ಹಿಡಿಯುವ ಲಕ್ಷಣಗಳು ಕಾಣಿಸುತ್ತಿದೆ. ಸಣ್ಣಪುಟ್ಟ ನಾಯಕರು ಬಣ ಬಡಿದಾಟದಲ್ಲಿ ಯಾರ ಪರ ನಿಲ್ಲಬೇಕೆಂಬುದು ಗೊತ್ತಾಗದೆ ಪರದಾಡುತ್ತಿದ್ದಾರೆ. ಇನ್ನು ಪಕ್ಷ ನಿಷ್ಠ ಕಾರ್ಯಕರ್ತರನ್ನು ಕೇಳೋರೇ ಇಲ್ಲದಾಗಿದೆ. ಮೋದಿಯನ್ನು ವಿರೋಧಿಗಳು ಕೂಡ ಹೊಗಳುತ್ತಾರೆ. ಅದಕ್ಕೆ ಕಾರಣವೂ ಇದೆ. ಅದು ಅವರ ಪಕ್ಷನಿಷ್ಠೆ ಮತ್ತು ಸೋತಲಿಂದಲೇ ಗೆಲ್ಲಬೇಕೆಂಬ ಹಠ ಅವರಲ್ಲಿದೆ.

'ನಾವು ಒಗ್ಗಟ್ಟಾಗಿದ್ದರೆ ಮಾತ್ರ ಸುರಕ್ಷಿತ'
ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನಗಳು ಬಿಜೆಪಿಗೆ ಲಭಿಸದೆ ಮಿತ್ರಪಕ್ಷಗಳ ಸಹಕಾರದಿಂದ ಸರ್ಕಾರ ರಚಿಸಿರುವುದನ್ನು ನೋಡಿದ ವಿಪಕ್ಷಗಳು ಮೋದಿಯ ಶಕ್ತಿ ಕುಂದಿದೆ. ಜನಪ್ರಿಯತೆ ಕಡಿಮೆಯಾಗಿ ಹೋಗಿದೆ ಎಂದೆಲ್ಲ ಬಡಬಡಿಸಿದ್ದವು. ಆದರೆ ಧೂಳಿನಿಂದ ಎದ್ದು ಬರುವುದು ಹೇಗೆ ಎಂಬುದನ್ನು ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮೋದಿ ತೋರಿಸಿಕೊಟ್ಟಿದ್ದಾರೆ. ಅದಕ್ಕೆ ಸ್ಥಳೀಯ ನಾಯಕರ ಒಗ್ಗಟ್ಟು ಕೂಡ ಕಾರಣವಾಗಿತ್ತು ಎಂಬುದು ಅಷ್ಟೇ ಸತ್ಯ.
ಬೇರೆ ರಾಜ್ಯಗಳಲ್ಲಿ ಬಿಜೆಪಿ ಒಗ್ಗಟ್ಟಾಗಿ ಹೋರಾಟ ಮಾಡುತ್ತಾ ಅಧಿಕಾರ ಪಡೆದುಕೊಂಡಿದ್ದರೆ, ರಾಜ್ಯದಲ್ಲಿ ಮಾತ್ರ ಪಕ್ಷ ಒಡೆದ ಕನ್ನಡಿಯಾಗಿದೆ. ಇಲ್ಲಿ ಮೋದಿಯ 'ನಾವು ಒಗ್ಗಟ್ಟಾಗಿದ್ದರೆ ಮಾತ್ರ ಸುರಕ್ಷಿತ' ಎಂಬ ಘೋಷ ಮಂತ್ರ ಗೌಣವಾಗಿದೆ. ಮೂಲ ಬಿಜೆಪಿಯಿಂದ ಬಸವನಗೌಡ ಯತ್ನಾಳ್ ಬಣವಾಗಿ ಹೊರಹೊಮ್ಮಿದ್ದಾರೆ. ಅವರು ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬ ಒಂದೇ ಕಾರಣಕ್ಕೆ ಪಕ್ಷದ ನಾಯಕರ ವಿರುದ್ಧವೇ ಹೋರಾಟ ಮಾಡುತ್ತಾ ಬರುತ್ತಿದ್ದಾರೆ. ಯತ್ನಾಳ್ ಅವರ ಹೇಳಿಕೆಯಿಂದ ಸ್ವತಃ ಅವರಿಗೆಷ್ಟು ಲಾಭ, ನಷ್ಟವಾಗಿದೆಯೋ ಗೊತ್ತಿಲ್ಲ. ಆದರೆ ಬಿಜೆಪಿ ಪಕ್ಷಕ್ಕೆ ಸಾಕಷ್ಟು ಹಾನಿಯಾಗಿರುವುದರಲ್ಲಿ ಎರಡು ಮಾತಿಲ್ಲ.
ಬಿಜೆಪಿ ಬಡಿದಾಟದಿಂದ ಕಾಂಗ್ರೆಸ್‌ಗೆ ಲಾಭ
ಆಡಳಿತ ರೂಢ ಕಾಂಗ್ರೆಸ್ ಗೆ ಬಿಜೆಪಿ ಒಡೆದ ಮನೆಯಾಗಿರುವುದು ಬಹಳಷ್ಟು ಲಾಭ ತಂದು ಕೊಟ್ಟಿದೆ. ಒಂದು ವೇಳೆ ಬಿಜೆಪಿ ಬಣವಾಗಿ ಒಡೆಯದೆ ಹೋಗಿದ್ದಿದ್ದರೆ ಕಷ್ಟವಾಗುತ್ತಿತ್ತು. ಆದರೆ ಇವತ್ತು ಎತ್ತು ಏರಿಗೆ, ಕೋಣ ನೀರಿಗೆ ಎಂಬ ಸ್ಥಿತಿಯಲ್ಲಿ ಬಿಜೆಪಿ ನಾಯಕರು ಇರುವುದು ಕಾಂಗ್ರೆಸ್ ಗೆ ಲಾಭವೇ ಆಗಿದೆ. ಕಳೆದ ಐದಾರು ವರ್ಷಗಳಲ್ಲಿ ಬಿಜೆಪಿಯ ನಾಯಕ ಮತ್ತು ಶಾಸಕ ಬಸವನಗೌಡ ಯತ್ನಾಳ್ ಅವರು ನೀಡಿದ ಹೇಳಿಕೆಗಳು ಪಕ್ಷಕ್ಕೆ ಭಾರೀ ಹೊಡೆತ ನೀಡಿದೆ.
ಬಹುಶಃ ಆರಂಭದಲ್ಲಿಯೇ ಅವರ ಬಾಯಿ ಮುಚ್ಚಿಸುವ ಕೆಲಸವನ್ನು ಹೈಕಮಾಂಡ್ ಮಾಡಿದ್ದರೆ ಇವತ್ತು ಈ ಮಟ್ಟಕ್ಕೆ ಹೋಗುತ್ತಿರಲಿಲ್ಲವೇನೋ? ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಯತ್ನಾಳ್ ರನ್ನು ಸಚಿವರನ್ನಾಗಿ ಮಾಡಲಿಲ್ಲ. ಅದಾದ ನಂತರ ವಿಪಕ್ಷ ಸ್ಥಾನ ನೀಡುತ್ತಾರೆಂದು ಕಾದರು ಅದನ್ನೂ ನೀಡಲಿಲ್ಲ. ಕೊನೆಪಕ್ಷ ಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿ ಮಾಡುತ್ತಾರಾ ಎಂದು ನೋಡಿದರು ಅದು ದಕ್ಕಲಿಲ್ಲ.
ಹೀಗಾಗಿ ಬಿಜೆಪಿಯಲ್ಲಿ ಯಡಿಯೂರಪ್ಪ ನಂತರದ ಹಿರಿಯ ನಾಯಕರಲ್ಲಿ ನಾನು ಒಬ್ಬನಾಗಿದ್ದು, ನನಗೆ ಸೂಕ್ತ ಸ್ಥಾನ ಮಾನ ನೀಡಲಿಲ್ಲವಲ್ಲ ಎಂಬ ಅಸಮಾಧಾನ ಅವರು ಸಿಡಿದೇಳಲು ಕಾರಣವಾಗಿದೆ. ರಾಜ್ಯ ಬಿಜೆಪಿಯಲ್ಲಿ ಇವತ್ತಿನ ಬಣ ಬಡಿದಾಟ ನಿಷ್ಟ ನಾಯಕರು, ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅದರ ಜತೆಗೆ ಪರಿಸ್ಥಿತಿ ಕೂಡ ಗಡಿಮೀರುತ್ತಿದೆ. ಇದು ಮುಂದುವರೆದರೆ ಕಷ್ಟವಾಗಲಿದೆ ಎಂದರಿತ ಹೈಕಮಾಂಡ್ ಈಗ ಪ್ರವೇಶಕೊಟ್ಟಂತೆ ಕಾಣುತ್ತಿದೆ. ಹೀಗಾಗಿ ಕೋರ್ ಕಮಿಟಿ ಸಭೆ ಕರೆದಿದೆ. ಈ ಸಭೆಯಲ್ಲಿ ಏನೆಲ್ಲ ಕ್ರಮ ಕೈಗೊಳ್ಳುತ್ತಾರೆ? ಪಕ್ಷವನ್ನು ಒಂದಾಗಿಸುಲ್ಲಿ ಯಾವ ರೀತಿಯಲ್ಲಿ ಮುಂದಾಗುತ್ತಾರೆ. ಇಷ್ಟಕ್ಕೂ ಹೈಕಮಾಂಡ್ ಸೂಚನೆಗೆ ಯತ್ನಾಳ್ ಬಣ ತಲೆಬಾಗುತ್ತಾ? ಮೋದಿಯ ಒಗ್ಗಟ್ಟಿನ ಮಂತ್ರಘೋಷ ಇಲ್ಲಿ ಕೆಲಸ ಮಾಡುತ್ತಾ? ಕಾದು ನೋಡಬೇಕಾಗಿದೆ.
-
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈ ಹಿಡಿಯುತ್ತವೆ: ಸಿದ್ದರಾಮಯ್ಯ ಹೇಳಿಕೆ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ-ಬಿ.ಎಸ್.ಯಡಿಯೂರಪ್ಪ -
ಉಜ್ವಲ ಯೋಜನೆ ಬದಲು ಸೌದೆ ಒಲೆ ಯೋಜನೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ -
ಬಾಗಲಕೋಟೆಯಲ್ಲಿ ಕಾಂಗ್ರೆಸ್‌ಗೆ ಪೂರಕ ವಾತಾವರಣ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಸಿಎಂ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್












Click it and Unblock the Notifications